ADVERTISEMENT

ಉದ್ಘಾಟನೆಗೆ ಕಾದು ನಿಂತ ಬೈಯಪ್ಪನಹಳ್ಳಿ ಟರ್ಮಿನಲ್

ವಿಜಯಕುಮಾರ್ ಎಸ್.ಕೆ.
Published 24 ಆಗಸ್ಟ್ 2021, 21:45 IST
Last Updated 24 ಆಗಸ್ಟ್ 2021, 21:45 IST
ಸರ್ ಎಂ. ವಿಶ್ವೇಶ್ವರಯ್ಯ ನಿಲ್ದಾಣ ಎಂಬ ಫಲಕ ಹಾಕಿರುವುದು
ಸರ್ ಎಂ. ವಿಶ್ವೇಶ್ವರಯ್ಯ ನಿಲ್ದಾಣ ಎಂಬ ಫಲಕ ಹಾಕಿರುವುದು   

ಬೆಂಗಳೂರು: ವಿಮಾನ ನಿಲ್ದಾಣದ ಮಾದರಿಯ ಮೂಲಸೌಕರ್ಯದೊಂದಿಗೆ ಬೈಯಪ್ಪನಹಳ್ಳಿ ಬಳಿ ನಿರ್ಮಾಣವಾಗಿರುವ ಸರ್ ಎಂ. ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್ ಲೋಕಾರ್ಪಣೆಗೆ ಸಿದ್ಧವಾಗಿದೆ. ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಉದ್ಘಾಟನೆಗಾಗಿ ರೈಲ್ವೆ ಸಚಿವರಿಗಾಗಿ ಕಾದು ನಿಂತಿದೆ.

ಬೈಯಪ್ಪನಹಳ್ಳಿ ಹಳೇ ರೈಲು ನಿಲ್ದಾಣ ಮತ್ತು ಬಾಣಸವಾಡಿ ರೈಲು ನಿಲ್ದಾಣಗಳ ನಡುವೆ ದೊಡ್ಡ ಚಿಟ್ಟೆಯಾಕಾರದಲ್ಲಿ ನಿರ್ಮಾಣವಾಗಿರುವ ರೈಲು ನಿಲ್ದಾಣ ಬೆಂಗಳೂರಿನ ರೈಲ್ವೆ ಇತಿಹಾಸಕ್ಕೆ ಹೊಸ ಮೈಲಿಗಲ್ಲಾಗಿ ತಲೆ ಎತ್ತಿ ನಿಂತಿದೆ. ನೈರುತ್ಯ ರೈಲ್ವೆ ಇತಿಹಾಸದಲ್ಲಿ ಹಲವು ಪ್ರಥಮಗಳನ್ನು ದಾಖಲಿಸುತ್ತಿರುವ ಈ ಟರ್ಮಿನಲ್, ವಿಮಾನ ನಿಲ್ದಾಣವನ್ನು ಹೋಲುವಂತೆ ವಿನ್ಯಾಸಗೊಳಿಸಿದ ಮೊದಲ ರೈಲು ನಿಲ್ದಾಣ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ನಿಲ್ದಾಣದ ಆವರಣ ಪ್ರವೇಶಿಸಿದ ಕೂಡಲೇ ವಿಶಾಲವಾದ ವಾಹನ ನಿಲುಗಡೆ ತಾಣ ಎದುರಾಗುತ್ತದೆ. 250 ಕಾರುಗಳು ಮತ್ತು ದ್ವಿಚಕ್ರ ವಾಃನಗಳ ನಿಲುಗಡೆಗೆ ಇಲ್ಲಿ ಅವಕಾಶ ಇದೆ. ಮುಂಭಾಗದಲ್ಲಿ ಸಣ್ಣ ಉದ್ಯಾನದ ಜೊತೆಗೆ ನೀರು ಚಿಮ್ಮುವ ಕಾರಂಜಿಯೊಂದು ನಿರ್ಮಾಣವಾಗಿದೆ. ಅದರ ಪಕ್ಕದಲ್ಲಿ ‘ಐ ಲವ್ ಬೆಂಗಳೂರು’ ಎಂಬ ಆಕರ್ಷಕವಾದ ಫಲಕ ಕೂಡ ಅಳವಡಿಸಲಾಗಿದೆ.

ADVERTISEMENT

ಒಳಾಂಗಣ (ಕಾನ್‌ಕೋರ್ಸ್‌) ಪ್ರವೇಶಿಸಿದರೆ ಮೊದಲ ಮಹಡಿಯಲ್ಲಿ ವಿಶ್ರಾಂತಿ ಕೊಠಡಿಗಳಿವೆ. ಅಲ್ಲಿಗೆ ತೆರಳಲು ಲಿಫ್ಟ್ ಮತ್ತು ಎಸ್ಕಲೇಟರ್ ವ್ಯವಸ್ಥೆ ಇದೆ. ಅಲ್ಲಿಯೇ ಕಾಫಿ, ತಿಂಡಿ ಮತ್ತು ಆಹಾರದ ಮಳಿಗೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ರೈಲು ಗಾಡಿ ಎಲ್ಲಿದೆ, ಎಷ್ಟು ಗಂಟೆಗೆ ಬರಲಿದೆ ಎಂಬ ನೈಜ ಸಮಯದ ಮಾಹಿತಿ ಒದಗಿಸಲು ಡಿಜಿಟಲ್ ಫಲಕಗಳನ್ನು ಅಳವಡಿಸಲಾಗಿದೆ. ಎರಡೂ ಮಹಡಿಗಳಿಗೂ ಸಂಪೂರ್ಣ ಹವಾ ನಿಯಂತ್ರಿತ ವ್ಯವಸ್ಥೆ ಇದೆ.

ಪ್ರಯಾಣಿಕ ರೈಲುಗಳಿಗೆ 7 ಪ್ಲಾಟ್‌ಫಾರಂಗಳನ್ನು ನಿರ್ಮಿಸಲಾಗಿದೆ. ಒಂದು ಪ್ಲಾಟ್‌ಫಾರಂನಿಂದ ಇನ್ನೊಂದು ಪ್ಲಾಟ್‌ಫಾರಂ ತಲುಪಲು ಸಬ್‌ವೇ ಮತ್ತು ಪಾದಚಾರಿ ಮೇಲ್ಸೇತುವೆ ನಿರ್ಮಿಸಲಾಗಿದೆ. ಮೆಟ್ರೊ ರೈಲು ನಿಲ್ದಾಣಗಳ ಮಾದರಿಯಲ್ಲಿ ಎಲ್ಲ ಪ್ಲಾಟ್‌ಫಾರಂಗಳಿಗೂ ಲಿಫ್ಟ್ ಮತ್ತು ಎಸ್ಕಲೇಟರ್ ಸೌಲಭ್ಯ ಕಲ್ಪಿಸಲಾಗಿದೆ.

ಸುಸಜ್ಜಿತವಾಗಿ ನಿರ್ಮಾಣಗೊಂಡಿರುವ ನಿಲ್ದಾಣ ಸುತ್ತಮುತ್ತಲ ಜನರ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ. 2015–16ನೇ ಸಾಲಿನಲ್ಲಿ ಈ ನಿಲ್ದಾಣಕ್ಕೆ ರೈಲ್ವೆ ಮಂಡಳಿ ಮಂಜೂರಾತಿ ನೀಡಿತ್ತು. 2017ರಿಂದ ಕಾಮಗಾರಿ ಆರಂಭವಾಗಿದ್ದು, ಬಹುತೇಕ ಪೂರ್ಣಗೊಂಡಿದೆ. ಉದ್ಘಾಟನೆಯಷ್ಟೇ ಆಗಬೇಕಿದ್ದು, ರೈಲ್ವೆ ಸಚಿವರ ದಿನಾಂಕಕ್ಕೆ ಅಧಿಕಾರಿಗಳು ಕಾದು ಕುಳಿತಿದ್ದಾರೆ.

ಬಿಜೆಪಿ ಕಾರ್ಯಕ್ರಮಕ್ಕೆ ಸದ್ಯದಲ್ಲೇ ರೈಲ್ವೆ ಸಚಿವರು ಬೆಂಗಳೂರಿಗೆ ಬರುವ ನಿರೀಕ್ಷೆ ಇದ್ದು, ಈ ಸಂದರ್ಭದಲ್ಲಿ ಬೈಯ್ಯಪ್ಪನಹಳ್ಳಿ ಟರ್ಮಿನಲ್ ಉದ್ಘಾಟನೆಯಾಗುವ ಸಾಧ್ಯತೆ ಇದೆ. ಕೋವಿಡ್‌ ಪೂರ್ವದಲ್ಲಿದ್ದ ಪ‍್ರಯಾಣಿಕರ ಒತ್ತಡ ಈಗ ಇಲ್ಲವಾಗಿದ್ದು, ವಿಳಂಬಕ್ಕೆ ಇದು ಕಾರಣ ಇರಬಹುದು ಎಂದು ರೈಲ್ವೆ ಹೋರಾಟಗಾರರು ಹೇಳುತ್ತಾರೆ.

‘ಸಣ್ಣ ಪುಟ್ಟ ಕೆಲಸಗಳೂ ಅಂತಿಮ ಹಂತದಲ್ಲಿವೆ. ಉದ್ಘಾಟನೆಗೆ ರೈಲ್ವೆ ಸಚಿವರ ದಿನಾಂಕ ಇನ್ನೂ ಸಿಕ್ಕಿಲ್ಲ. ಅದಕ್ಕಾಗಿ ಕಾಯುತ್ತಿದ್ದೇವೆ’ ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಅನೀಶ್ ಹೆಗ್ಡೆ ತಿಳಿಸಿದರು.

ಸಂಪರ್ಕ ರಸ್ತೆಯೇ ಇಲ್ಲ

ವಿಶ್ವ ದರ್ಜೆಯ ರೈಲ್ವೆ ನಿಲ್ದಾಣಕ್ಕೆ ಈಗ ಸಂಪರ್ಕ ರಸ್ತೆಯದ್ದೇ ದೊಡ್ಡ ಸಮಸ್ಯೆ. ಹಳೇ ಮದ್ರಾಸ್ ರಸ್ತೆಯಿಂದ ಈ ಟರ್ಮಿನಲ್ ತಲುಪಲು ವಾಹನ ಸವಾರರು ಹರಸಾಹಸ ಪಡಬೇಕಿದೆ.

ಬಾಣಸವಾಡಿ ಮುಖ್ಯ ರಸ್ತೆ ಮತ್ತು ವಿವೇಕಾನಂದ ಮೆಟ್ರೊ ನಿಲ್ದಾಣದ ಕಡೆಯಿಂದ ಹೋಗಬಹುದಾದ ಎರಡು ರಸ್ತೆಗಳಿವೆ. ಆದರೆ, ಅವರೆಡೂ ಕಿರಿದಾದ ರಸ್ತೆಗಳು. ಬಾಣಸವಾಡಿ ಮುಖ್ಯ ರಸ್ತೆಯಿಂದ ರೈಲು ನಿಲ್ದಾಣಕ್ಕೆ ಇಳಿಯಲು ಮಾರ್ಗವೇ ಇಲ್ಲ. ಇರುವ ರಸ್ತೆಯಲ್ಲಿ ಕಾರುಗಳನ್ನು ಹೊರತುಪಡಿಸಿ ದೊಡ್ಡ ವಾಹನಗಳು ಸಂಚರಿಸಲು ಆಗುವುದೇ ಇಲ್ಲ ಎಂದು ಸ್ಥಳೀಯರು ಹೇಳುತ್ತಾರೆ.

ಟರ್ಮಿನಲ್ ಕಾಮಗಾರಿ ಆರಂಭವಾಗಿಯೇ ನಾಲ್ಕು ವರ್ಷ ಕಳೆದಿದೆ. ಈವರೆಗೆ ಅಲ್ಲಿಗೆ ರಸ್ತೆ ನಿರ್ಮಾಣ ಮಾಡುವ ಕೆಲಸ ಆರಂಭವಾಗಿಲ್ಲ. ಸಣ್ಣ ರಸ್ತೆಯಲ್ಲಿ ಅಲ್ಲಿಗೆ ತಲುಪುವುದೇ ಕಷ್ಟದ ವಿಷಯ ಎಂದು ರೈಲ್ವೆ ಹೋರಾಟಗಾರ ರಾಜಕುಮಾರ್ ದುಗಾರ್ ಹೇಳಿದರು.

ಈ ನಿಲ್ದಾಣದಿಂದಲೇ ರೈಲುಗಾಡಿಗಳ ಕಾರ್ಯಾಚರಣೆ ಆರಂಭವಾದರೆ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಲಿದೆ. ಅದಕ್ಕೆ ತಕ್ಕಂತೆ ವಾಹನಗಳು ಬಂದು ಹೋಗುವ ಅವಕಾಶ ಇಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.