ADVERTISEMENT

ಚುಕುಬುಕು ಎನ್ನುತ್ತಿಲ್ಲ ಪುಟಾಣಿ ರೈಲು...!

ಹಳಿ ನಿರ್ವಹಣೆ ಕಾರ್ಯ ಚುರುಕು: 15 ದಿನಗಳ ನಂತರ ಸೇವೆ ಆರಂಭ

ಕಲಾವತಿ ಬೈಚಬಾಳ
Published 30 ಜನವರಿ 2019, 19:24 IST
Last Updated 30 ಜನವರಿ 2019, 19:24 IST
ಪುಟಾಣಿ ರೈಲು ಹಳಿಯ ನಿರ್ವಹಣೆ ಕಾಮಗಾರಿಯಲ್ಲಿ ತೊಡಗಿರುವ ಕಾರ್ಮಿಕರು –ಪ್ರಜಾವಾಣಿ ಚಿತ್ರಗಳು/ ರಂಜು.ಪಿ
ಪುಟಾಣಿ ರೈಲು ಹಳಿಯ ನಿರ್ವಹಣೆ ಕಾಮಗಾರಿಯಲ್ಲಿ ತೊಡಗಿರುವ ಕಾರ್ಮಿಕರು –ಪ್ರಜಾವಾಣಿ ಚಿತ್ರಗಳು/ ರಂಜು.ಪಿ   

ಬೆಂಗಳೂರು: ರಜೆ ದಿನಗಳು ಬಂದರೆ ಸಾಕು ಪುಟಾಣಿಗಳೆಲ್ಲಹೆಜ್ಜೆ ಹಾಕುವುದು ಕಬ್ಬನ್‌ ಉದ್ಯಾನದಲ್ಲಿರುವ ಬಾಲಭವನದತ್ತ. ಪುಟಾಣಿ ರೈಲು ಇಲ್ಲಿನಕೇಂದ್ರಬಿಂದು. ಆದರೆ, ಸದ್ಯ ರೈಲು ಚುಕುಬುಕು ಎನ್ನದೆ ಸ್ಥಗಿತಗೊಂಡಿದೆ.

ಪುಟ್ಟ ರೈಲಿನ ಹಳಿಗಳು ತುಕ್ಕು ಹಿಡಿದು ತುಂಬಾ ದಿನಗಳಾಗಿದ್ದವು. ಹಾಗಾಗಿ, ಹಳಿ, ಸೇತುವೆಗಳ ದುರಸ್ತಿ ಕಾಮಗಾರಿಗಳು ನಡೆಯುತ್ತಿರುವುದರಿಂದ ರೈಲು ಚಾಲನೆಯಲ್ಲಿ ಇಲ್ಲ. ಬಾಲಭವನದ ಪ್ರವೇಶ ದ್ವಾರದ ಬಳಿ ‘ಪುಟಾಣಿ ರೈಲು, ಹಳಿ ನಿರ್ವಹಣೆಯ ಕಾಮಗಾರಿಯಿಂದಾಗಿ ಚಾಲನೆಯಲ್ಲಿಲ್ಲ’ ಎಂಬ ಸೂಚನಾ ಫಲಕವನ್ನು ಹಾಕಲಾಗಿದೆ.

‘ರೈಲು ಹಳಿ,ಹಳಿಯ ಸಿ–ಬೆಂಡ್‌, ಮೂಲೆಗಳ ದುರಸ್ತಿ, ಸೇತುವೆಬಳಿಯ 20 ವುಡನ್‌ ಸ್ಲಿಪರ್ಸ್‌ಗಳ ಬದಲಿ ಜೋಡಣೆ, ಸೇತುವೆ ಸುತ್ತಮುತ್ತಲಿನ ಜಾಗದಲ್ಲಿ ದುರಸ್ತಿ ಕಾಮಗಾರಿಗಳು ನಡೆಯುತ್ತಿವೆ’ ಎಂದು ಬಾಲಭವನ ಸೊಸೈಟಿಯ ಕಾರ್ಯದರ್ಶಿ ರತ್ನಾ ಬಿ.ಕಲಮದಾನಿ ತಿಳಿಸಿದರು.

ADVERTISEMENT

‘ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ರೈಲು ಹಳಿಗಳ ದುರಸ್ತಿ ಕಾರ್ಯ ಮಾಡಿಕೊಡಬೇಕೆಂದು ರೈಲ್ವೆ ಇಲಾಖೆಗೆ ಕಳೆದ ವರ್ಷ ಪತ್ರ ಬರೆಯಲಾಗಿತ್ತು. ಇದಕ್ಕೆ ಸ್ಪಂದಿಸಿದ ಇಲಾಖೆ ಅಧಿಕಾರಿಗಳು ಬಾಲಭವನಕ್ಕೆ ಭೇಟಿ ನೀಡಿ, ಪರಿಶೀಲಿಸಿದ್ದರು. ಅದರ ಮುಂದುವರಿದ ಭಾಗವಾಗಿ ಈ ದುರಸ್ತಿ ಕಾರ್ಯ ನಡೆಯುತ್ತಿದೆ’ ಎಂದು ಹೇಳಿದರು.

ಪಾಲಕರಿಗೂ ನಿರಾಸೆ: ‘ನಮ್ಮ ಸಂಬಂಧಿಕರೊಬ್ಬರ ಮದುವೆ ಮುಗಿಸಿ ಕೊಂಡು ಮಕ್ಕಳನ್ನುನೇರವಾಗಿ ಬಾಲಭವನಕ್ಕೆ ಕರೆದುಕೊಂಡು ಬಂದೆವು. ಮಕ್ಕಳನ್ನು ತುಸು ಹೊತ್ತು ಇಲ್ಲೇ ಆಟವಾಡಿಸಿಕೊಂಡು ಹೋಗೋಣವೆಂದು ಬಂದಿದ್ದೆವು. ಆದರೆ, ಮಕ್ಕಳನ್ನು ರೈಲಿನಲ್ಲಿ ಕೂಡಿಸಿ, ಆಟವಾಡಿಸಿಲು ಸಾಧ್ಯ ವಾಗಲಿಲ್ಲ’ ಎಂದು ಕೆ.ಆರ್‌.ಪುರದ ತೆಲ್ಮಾ ಹೇಳಿದರು.

‘ರೈಲು ಆಟವಾಡೋಣವೆಂದುನಾವು ಇಲ್ಲಿಗೆ ಬಂದಿದ್ದೇವೆ. ಆದರೆ, ರೈಲು ಓಡುತ್ತಿಲ್ಲ ಎಂದು ಸೆಕ್ಯೂರಿಟಿ ಅಂಕಲ್‌ ಹೇಳಿದಾಗ ತುಂಬಾ ನಿರಾಸೆಯಾಯ್ತು’ ಎಂದು ತೆಲ್ಮಾ ಅವರ ಮಕ್ಕಳು ಬೇಸರ ವ್ಯಕ್ತಪಡಿಸಿದರು.

ರೈಲು ಹಳಿಗಳ ಸುತ್ತ ಕಸವೋ ಕಸ:ಬಾಲಭವನ ಆವರಣದ ಸಭಾಂಗಣದ ಹಿಂಭಾಗದ ಸ್ಥಿತಿಯಂತೂ ಹೇಳತೀರದು. ಪುಟಾಣಿ ರೈಲು ಓಡಾಡುವ ಪಕ್ಕದ ಜಾಗದಲ್ಲೆಲ್ಲ ಕಸದ ರಾಶಿಯೇ ರಾರಾಜಿಸುತ್ತಿದೆ.

ಕಾರಂಜಿಯಲ್ಲಿ ಹೂಳು: ಆವರಣದಲ್ಲಿರುವ ಸಭಾಂಗಣದ ಎದುರಿನ‍ಪುಟ್ಟ ಕಾರಂಜಿ ಜಾಗದ ಸುತ್ತಮುತ್ತಲೆಲ್ಲ ಸುಮಾರು ದಿನಗಳಿಂದ ಪಾಚಿ ಕಟ್ಟಿಕೊಂಡಿದೆ. ಕಾರಂಜಿ ಚಾಲನೆಯಲ್ಲಿ ಇದೆಯೋ, ಇಲ್ಲವೊ ಎಂದು ಪ್ರಶ್ನೆ ಹುಟ್ಟುವ ಮಟ್ಟಿಗೆ ಕೊಳಚೆ ಆವರಿಸಿಕೊಂಡಿದೆ.

ಈ ಬಗ್ಗೆ ಅಲ್ಲಿನ ಸಿಬ್ಬಂದಿಯನ್ನು ಪ್ರಶ್ನಿಸಿದರೆ, ‘ಮೊನ್ನೆಯಷ್ಟೇ ಶುಚಿ ಮಾಡಿದ್ದೇವೆ. ಈಗ ಮತ್ತೆ ಶುಚಿ ಮಾಡಬೇಕು’ ಎಂದು ಪ್ರತಿಕ್ರಿಯಿಸಿದರು.

**

‘ಕೊಳದಲ್ಲಿ ತುಂಬಿದ ಹೂಳು, ದೋಣಿ ವಿಹಾರ ಸ್ಥಗಿತ’

ಬಾಲಭವನ ಆವರಣದಲ್ಲಿರುವ ಕೊಳದಲ್ಲಿ ಸುಮಾರು ವರ್ಷಗಳಿಂದ ಹೂಳು ತುಂಬಿಕೊಂಡಿದ್ದರೂ ಹೂಳೆತ್ತಲು ಬಾಲಭವನ ಸೊಸೈಟಿ ಕ್ರಮ ಕೈಗೊಂಡಿಲ್ಲ.

ಕೊಳದ ಆಳದಲ್ಲಿ ಕಳೆ ಗಿಡಗಳು ಬೆಳೆದಿದ್ದು, ಸುತ್ತಮುತ್ತ ಪಾಚಿ ಆವರಿಸಿಕೊಂಡಿದ್ದರಿಂದ ಅಲ್ಲಿನ ಎರಡು ದೋಣಿಗಳು ಕಾರ್ಯನಿರ್ವಹಿಸಲಾಗದೆ ಮೂಲೆಯಲ್ಲಿ ನಿಂತಿವೆ.

ತೆರವಾಗದಬಿದಿರಿನ ಮೆಳೆ: ‘ಕೊಳದ ಸುತ್ತಮುತ್ತಲಲ್ಲಿ ಹಾಗೂ ಆವರಣದಲ್ಲಿ ಬಹುತೇಕ ಬಿದಿರಿನ ಮೆಳೆಗಳು ಒಣಗಿ ನಿಂತಿವೆ. ಕೆಲವು ಬೀಳುವ ಸ್ಥಿತಿಯಲ್ಲಿವೆ. ಮಕ್ಕಳು ಆಡುವಾಗ ಬಿದ್ದರೆ ಏನು ಗತಿ’ ಎಂದು ಪ್ರವಾಸಿಗರೊಬ್ಬರು ಆತಂಕ ವ್ಯಕ್ತಪಡಿಸಿದರು.

‘ಮಕ್ಕಳ ಹಬ್ಬದ ಸಮಯದಲ್ಲಿ ದೋಣಿ ವಿಹಾರಕ್ಕೆ ಅವಕಾಶ ನೀಡಲಾಗಿತ್ತು. ಆದರೆ, ಇದೀಗ ಕೊಳದಲ್ಲಿ ಹೂಳು ಯಥೇಚ್ಛವಾಗಿ ತುಂಬಿಕೊಂಡಿದ್ದರಿಂದ ಬೋಟಿಂಗ್‌ ಮಾಡಲು ಸಾಧ್ಯವಾಗುತ್ತಿಲ್ಲ.ಶೀಘ್ರವೇ ಹೂಳೆತ್ತಲು ಕ್ರಮಕೈಗೊಳ್ಳಲಾಗುವುದು’ ಎಂದು ರತ್ನಾ ತಿಳಿಸಿದರು.

‘ಹಬ್ಬದ ಸಮಯದಲ್ಲಿ ಅಗತ್ಯವಿದ್ದಲ್ಲಿ ಮಾತ್ರ ಬಿದಿರುಗಳನ್ನು ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ (ಕೆಆರ್‌ಐಡಿಎಲ್‌) ವತಿಯಿಂದ ತೆರವು ಮಾಡಲಾಗಿತ್ತು. ಇನ್ನುಳಿದವುಗಳನ್ನು ತೆರವು ಮಾಡಲು ಟೆಂಡರ್‌ ಕರೆಯುವ ಯೋಜನೆ ಇದೆ’ ಎಂದು ಹೇಳಿದರು.

**

ಅಂಕಿಅಂಶ

11 ಎಕರೆ:ಬಾಲ ಭವನದ ಒಟ್ಟು ವಿಸ್ತೀರ್ಣ

1.2 ಕಿ.ಮೀ:ರೈಲು ಹಳಿಯ ಉದ್ದ

₹5:ರೈಲಿನಲ್ಲಿ ಪ್ರಯಾಣಿಸಲು ಮಕ್ಕಳಿಗೆ ಟಿಕೆಟ್‌ ದರ

₹10:6 ವರ್ಷ ಮೇಲ್ಪಟ್ಟವರಿಗೆ ಪ್ರವೇಶ ಶುಲ್ಕ

₹20:ರೈಲಿನಲ್ಲಿ ಪ್ರಯಾಣಿಸಲು ವಯಸ್ಕರಿಗೆ ಟಿಕೆಟ್‌ ದರ

**

ಇನ್ನೂ 15 ದಿನಗಳೊಳಗಾಗಿ ರೈಲು ಹಳಿಗಳ ನಿರ್ವಹಣೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

-ರತ್ನಾ ಬಿ.ಕಲಮದಾನಿ, ಕಾರ್ಯದರ್ಶಿ, ಬಾಲಭವನ ಸೊಸೈಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.