
ಬೆಂಗಳೂರು: ‘ಬಾಲಗಂಗಾಧರನಾಥ ಸ್ವಾಮೀಜಿ ಅವರು ದೂರದೃಷ್ಟಿ ಇದ್ದ ದಾರ್ಶನಿಕರು’ ಎಂದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಆಯೋಜಿಸಿದ್ದ ಬಿಜಿಎಸ್ ಉತ್ಸವ ಮತ್ತು ಸಂಸ್ಥಾಪನಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.
‘ಹಲವಾರು ಸಂಸ್ಥೆಗಳನ್ನು ಕಟ್ಟಿ ಸಮಾಜಕ್ಕೆ ನೀಡಿದ್ದರು. ಭಕ್ತರ ಕಾಣಿಕೆಯನ್ನು ಸಮಾಜಮುಖಿ ಕಾರ್ಯಗಳಿಗೆ ಬಳಸಿದರು. ಸರಳ ಸ್ವಾಮೀಜಿ ಆಗಿದ್ದರು’ ಎಂದು ನೆನಪು ಮಾಡಿಕೊಂಡರು.
ಆದಿಚುಂಚನಗಿರಿ ಮಠದ ಪೀಠಾಧಿಪತಿ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ‘ನಮ್ಮ ಮಠಕ್ಕೆ ಒಂದೂವರೆ ಸಾವಿರ ವರ್ಷಗಳ ಇತಿಹಾಸ ಇದೆ. ಜ್ಞಾನ, ಅಕ್ಷರ, ಅನ್ನ ದಾಸೋಹದ ಮೂಲಕ ಮಠ ಹೆಸರು ಮಾಡಿದೆ. ಮಡುಗಟ್ಟಿದ ಸಮಾಜಕ್ಕೆ ಬಾಲಗಂಗಾಧರನಾಥ ಸ್ವಾಮೀಜಿ ಆದರ್ಶ ಪ್ರಾಯರಾಗಿದ್ದರು’ ಎಂದು ಹೇಳಿದರು.
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮಾತನಾಡಿ, ‘ರಾಜ್ಯ ಸರ್ಕಾರ ತಮ್ಮ ಅಧೀನದಲ್ಲಿರುವ ಸರ್ಕಾರಿ ಶಾಲೆಗಳನ್ನು ನಡೆಸಲು ಕಷ್ಟಪಡುತ್ತಿರುವ ಈ ಕಾಲದಲ್ಲಿ ಮಠವು ಹಲವು ಶಿಕ್ಷಣ ಸಂಸ್ಥೆಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವುದು ಹೆಮ್ಮೆಯ ವಿಚಾರ’ ಎಂದು ಶ್ಲಾಘಿಸಿದರು.
ಬಿಜಿಎಸ್ ಟ್ರಸ್ಟ್ ಸಂಸ್ಥಾಪಕ ಬಾಲಗಂಗಾಧರನಾಥ ಸ್ವಾಮೀಜಿ ದೂರದೃಷ್ಟಿಯಿಂದ ಶಿಕ್ಷಣ , ಆರೋಗ್ಯ ಸೇರಿದಂತೆ ಹಲವಾರು ಸಮಾಜ ಮುಖಿ ಕೆಲಸ ಮಾಡಿದ್ದಾರೆ ಎಂದು ಬಿಜಿಎಸ್ ಮತ್ತು ಎಸ್‌ಜೆಬಿ ಸಮೂಹ ಶಿಕ್ಷಣ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶನಾಥ ಸ್ವಾಮೀಜಿ ನೆನಪು ಮಾಡಿಕೊಂಡರು.
ಸಿದ್ಧಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ, ನಟಿ ಮಾಲಾಶ್ರೀ, ಆರಾಧನಾ, ಸೌಂದರ್ಯ ಗೌಡ ಭಾಗವಹಿಸಿದ್ದರು. ಬಿಜಿಎಸ್‌ನಲ್ಲಿ ಕರ್ತವ್ಯ ನಿರ್ವಹಿಸಿದ ಸಾಧಕರಾದ ಶ್ರೀಕಲಾ ಜಿ. ಕುಮಾರ್, ಪ್ರಕಾಶ್, ವಿನಯ್, ಗುಂಜನ್ ಸಚ್‌ದೇವ, ಬಾಬು, ಅರವಿಂದ್ ಸಜವಾಲ್ ಅವರಿಗೆ ಬಿಜಿಎಸ್ ಸೇವಾ ರತ್ನ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.
ಬಿಜಿಎಸ್ ಶಿಕ್ಷಣ ಸಂಸ್ಥೆ ಕೇವಲ ಶಿಕ್ಷಣ ನೀಡುತ್ತಿಲ್ಲ. ಬದಲಾಗಿ ಜೀವನದ ಪಾಠವನ್ನು ಕಲಿಸುತ್ತಿದೆ. ಶಿಕ್ಷಣ ಸಂಸ್ಥೆ ಆಸ್ಪತ್ರೆ ನಡೆಸುವುದು ಸುಲಭವಲ್ಲ–ಶೋಭಾ ಕರಂದ್ಲಾಜೆ ಕೇಂದ್ರ ಸಚಿವೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.