ADVERTISEMENT

ಲಿಂಗತ್ವ ಅಲ್ಪಸಂಖ್ಯಾತ ಮಕ್ಕಳಿಗೆ ಬಾಲಮಂದಿರ: ಜಿಲ್ಲಾಧಿಕಾರಿ ಜಿ. ಜಗದೀಶ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2025, 16:22 IST
Last Updated 27 ಫೆಬ್ರುವರಿ 2025, 16:22 IST
   

ಬೆಂಗಳೂರು: ಮಿಷನ್‌ ವಾತ್ಸಲ್ಯ ಯೋಜನೆಯಡಿ ರಕ್ಷಣೆ ಮತ್ತು ಪೋಷಣೆಯ ಅಗತ್ಯವಿರುವ ಲಿಂಗತ್ವ ಅಲ್ಪಸಂಖ್ಯಾತ ಮಕ್ಕಳಿಗೆ ಬಾಲಮಂದಿರವನ್ನು ಪ್ರಾರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ ತಿಳಿಸಿದರು.

ಬೆಂಗಳೂರು ನಗರ ಜಿಲ್ಲೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತ ಮಕ್ಕಳಿಗಾಗಿ ಎರಡು ಬಾಲಮಂದಿರಗಳನ್ನು ಪ್ರಾರಂಭಿಸಲಾಗಿದೆ. ಇದು ದೇಶದಲ್ಲೇ ಮೊದಲು ಎಂದು ಅಧಿಕಾರಿಗಳ ಸಭೆಯಲ್ಲಿ ಅವರು ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಕ್ಕಳ ರಕ್ಷಣಾ ನಿರ್ದೇಶನಾಲಯವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳ ಮೂಲಕ  ‘ಮಿಷನ್ ವಾತ್ಸಲ್ಯ’ ಯೋಜನೆಯಡಿ, ರಕ್ಷಣೆ ಮತ್ತು ಪೋಷಣೆ ಅಗತ್ಯವಿರುವ ಮಕ್ಕಳಿಗಾಗಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ. ಲಿಂಗತ್ವ ಅಲ್ಪಸಂಖ್ಯಾತ ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಹಾಗೂ ಬೆಳವಣಿಗೆ ಹಿತದೃಷ್ಟಿಯಿಂದ ಬಾಲಮಂದಿರಗಳನ್ನು ಪ್ರಾರಂಭಿಸಲು ಸರ್ಕಾರವು ಅನುಮೋದನೆ ನೀಡಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಯೂ ಆಗಿರುವ ಜಗದೀಶ ಮಾಹಿತಿ ನೀಡಿದರು.

ADVERTISEMENT

ಲಿಂಗತ್ವ ಅಲ್ಪಸಂಖ್ಯಾತ ಮಕ್ಕಳಿಗೆ ಪಾಲನೆ, ಪೋಷಣೆ ಹಾಗೂ ಪುನರ್ವಸತಿ ಅವಶ್ಯಕತೆ ಇದ್ದರೆ,  ಬಾಲಮಂದಿರಗಳಿಗೆ ದಾಖಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಬೆಂಗಳೂರು ನಗರ ಕೇಂದ್ರ, ಕಿದ್ವಾಯಿ ಆಸ್ಪತ್ರೆ ಹಿಂಭಾಗ. ದೂರವಾಣಿ: 080-29523458 ಅನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಸಿದ್ದರಾಮಪ್ಪ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.