ಬೆಂಗಳೂರು: ಮದ್ಯ ಕುಡಿಯಲು ಹಣ ನೀಡಲಿಲ್ಲವೆಂಬ ಕಾರಣಕ್ಕೆ ವೃದ್ಧರೊಬ್ಬರನ್ನು ಕೊಲೆ ಮಾಡಲಾಗಿದ್ದು, ಕೃತ್ಯ ಎಸಗಿದ್ದ ಆರೋಪದಡಿ ಇಬ್ಬರು ಬಾಲಕರನ್ನು ಬಾಣಸವಾಡಿ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
‘70 ವರ್ಷ ವಯಸ್ಸಿನ ವೃದ್ಧನನ್ನು ಗುರುವಾರ ರಾತ್ರಿ ಕೊಲೆ ಮಾಡಲಾಗಿದೆ. ಹಣಕ್ಕಾಗಿ ಕೃತ್ಯ ಎಸಗಿದ್ದ ಬಾಲಕರನ್ನು ವಶಕ್ಕೆ ಪಡೆದು, ಬಾಲ ನ್ಯಾಯ ಮಂಡಳಿ ಎದುರು ಹಾಜರುಪಡಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ವೃದ್ಧನ ಹೆಸರು ಹಾಗೂ ಗುರುತು ಸದ್ಯಕ್ಕೆ ಗೊತ್ತಾಗಿಲ್ಲ. ಫೋಟೊವನ್ನು ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳ ಠಾಣೆಗಳಿಗೆ ಕಳುಹಿಸಲಾಗಿದೆ’ ಎಂದು ತಿಳಿಸಿವೆ.
‘ಚಿಂದಿ ಆಯುತ್ತಿದ್ದ ವೃದ್ಧ, ಅದರ ಜೊತೆಯಲ್ಲಿ ಭಿಕ್ಷೆ ಬೇಡುತ್ತಿದ್ದರು. ರಾತ್ರಿ ಸಂದರ್ಭದಲ್ಲಿ ಸಾರ್ವಜನಿಕ ಸ್ಥಳ ಹಾಗೂ ಇತರೆಡೆ ಮಲಗುತ್ತಿದ್ದರು. ಖರ್ಚಿಗೆ ಆಗುವಷ್ಟು ಹಣ ಅವರ ಬಳಿ ಇರುತ್ತಿತ್ತು. ಅವರು ಹಣ ಎಣಿಸುತ್ತಿದ್ದದ್ದನ್ನು ಬಾಲಕರು ಹಲವು ಬಾರಿ ನೋಡಿದ್ದರು. ಗುರುವಾರ ರಾತ್ರಿ ವೃದ್ಧನ ಬಳಿ ಹೋಗಿದ್ದ ಬಾಲಕರಿಬ್ಬರು, ಮದ್ಯ ಕುಡಿಯಲು ಹಣ ಕೇಳಿದ್ದರು.’
‘ಹಣ ನೀಡಲು ವೃದ್ಧ ನಿರಾಕರಿಸಿದ್ದರು. ಇದೇ ವಿಚಾರಕ್ಕೆ ಗಲಾಟೆ ಶುರುವಾಗಿತ್ತು. ಬಾಲಕರು, ವೃದ್ಧನ ತಲೆಗೆ ಹೊಡೆದ ಕಾರಣ, ತೀವ್ರ ಗಾಯಗೊಂಡು ವೃದ್ಧ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆರೋಪಿಗಳು ಪರಾರಿಯಾಗಿದ್ದಾರೆ. ಮರುದಿನ ಮೃತದೇಹ ನೋಡಿದ್ದ ಸ್ಥಳೀಯರು ಮಾಹಿತಿ ನೀಡಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.