ಬೆಂಗಳೂರು: ‘ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ 59ನೇ ಘಟಿಕೋತ್ಸವವು ಮೇ 15ರಂದು ನಡೆಯಲಿದೆ. 2023–24ನೇ ಸಾಲಿನಲ್ಲಿ ಉತ್ತೀರ್ಣರಾದ 1,271 ವಿದ್ಯಾರ್ಥಿಗಳಿಗೆ ವಿವಿಧ ಸ್ನಾತಕ ಹಾಗೂ ಸ್ನಾತಕೋತ್ತರ ವಿಷಯಗಳಲ್ಲಿ ಪದವಿ ಪ್ರದಾನ ಮಾಡಲಾಗುತ್ತದೆ’ ಎಂದು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಎಸ್.ವಿ.ಸುರೇಶ ಮಾಹಿತಿ ನೀಡಿದರು.
ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘871 ವಿದ್ಯಾರ್ಥಿಗಳಿಗೆ ವಿವಿಧ ಸ್ನಾತಕ ಪದವಿ, 311 ವಿದ್ಯಾರ್ಥಿಗಳಿಗೆ ವಿವಿಧ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಹಾಗೂ 89 ವಿದ್ಯಾರ್ಥಿಗಳಿಗೆ ಪಿಎಚ್.ಡಿ ಪದವಿಗಳನ್ನು ನೀಡಲಾಗುತ್ತದೆ’ ಎಂದು ವಿವರಿಸಿದರು.
‘ಬೆಳಿಗ್ಗೆ 11ಕ್ಕೆ ಜಿಕೆವಿಕೆ ಆವರಣದಲ್ಲಿರುವ ಡಾ. ಬಾಬು ರಾಜೇಂದ್ರ ಪ್ರಸಾದ್ ಅಂತರರಾಷ್ಟ್ರೀಯ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯಪಾಲ ಥಾವರಚಂದ್ ಗೆಹಲೋತ್ ವಹಿಸಲಿದ್ದಾರೆ. ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಭಾಗವಹಿಸಲಿದ್ದು, ಇಫ್ಕೊ ವ್ಯವಸ್ಥಾಪಕ ನಿರ್ದೇಶಕ ಯು.ಎಸ್. ಅವಸ್ಥಿ ಅವರು ಘಟಿಕೋತ್ಸವದ ಪ್ರಧಾನ ಭಾಷಣ ಮಾಡಲಿದ್ದಾರೆ’ ಎಂದು ತಿಳಿಸಿದರು.
‘ಪಿಎಚ್.ಡಿಯಲ್ಲಿ ಒಟ್ಟು 30 ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಗುವುದು. 13 ವಿದ್ಯಾರ್ಥಿನಿಯರು ಹಾಗೂ 3 ವಿದ್ಯಾರ್ಥಿಗಳು ಕೃಷಿ ವಿಶ್ವವಿದ್ಯಾಲಯ ನೀಡುವ 14 ಚಿನ್ನದ ಪದಕಗಳು, 10 ದಾನಿಗಳ ಚಿನ್ನದ ಪದಕಗಳು, 5 ದಾನಿಗಳ ಚಿನ್ನದ ಪದಕ ಪ್ರಶಸ್ತಿ ಪ್ರಮಾಣಪತ್ರಗಳನ್ನು ಹಾಗೂ ಒಂದು ಆವರಣ ಚಿನ್ನದ ಪದಕವನ್ನು ಹಂಚಿಕೊಂಡಿದ್ದಾರೆ’ ಎಂದರು.
‘ಸ್ನಾತಕೋತ್ತರ ಪದವಿಯಲ್ಲಿ 62 ಹಾಗೂ ‘ಸ್ನಾತಕ ಪದವಿಯಲ್ಲಿ 58 ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಗುವುದು’ ಎಂದು ಹೇಳಿದರು.
ಕುಲಸಚಿವ ಕೆ.ಸಿ.ನಾರಾಯಣಸ್ವಾಮಿ, ವಿಸ್ತರಣಾ ನಿರ್ದೇಶಕ ವೈ.ಎನ್. ಶಿವಲಿಂಗಯ್ಯ, ಸಹ ವಿಸ್ತರಣಾ ನಿರ್ದೇಶಕ ಕೆ.ಪಿ. ರಘುಪ್ರಸಾದ್ ಸುದ್ದಿಗೋಷ್ಠಿಯಲ್ಲಿದ್ದರು.
ವಿದ್ಯಾರ್ಥಿನಿಯರಿಗೆ 123 ಚಿನ್ನದ ಪದಕಗಳು
2023-24ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಒಟ್ಟು 63 ವಿದ್ಯಾರ್ಥಿಗಳಿಗೆ 150 ಚಿನ್ನದ ಪದಕಗಳು ಹಾಗೂ ಚಿನ್ನದ ಪದಕ ಪ್ರಶಸ್ತಿ ಪ್ರಮಾಣಪತ್ರಗಳನ್ನು ಪ್ರದಾನ ಮಾಡಲಾಗುತ್ತದೆ. ಇದರಲ್ಲಿ 49 ವಿದ್ಯಾರ್ಥಿನಿಯರಿಗೆ ಒಟ್ಟು 123 ಚಿನ್ನದ ಪದಕ ಹಾಗೂ ಚಿನ್ನದ ಪದಕ ಪ್ರಶಸ್ತಿ ಪ್ರಮಾಣ ಪತ್ರಗಳನ್ನು ಪಡೆದುಕೊಂಡಿದ್ದಾರೆ. 14 ವಿದ್ಯಾರ್ಥಿಗಳು 27 ಚಿನ್ನದ ಪದಕಗಳು ಮತ್ತು ಚಿನ್ನದ ಪದಕ ಪ್ರಶಸ್ತಿ ಪ್ರಮಾಣ ಪತ್ರಗಳನ್ನು ಪಡೆದುಕೊಂಡಿದ್ದಾರೆ ಎಂದು ಎಸ್.ವಿ. ಸುರೇಶ್ ತಿಳಿಸಿದರು.
ಟಿ.ಎಲ್. ದೀಪ್ತಿಗೆ 13 ಚಿನ್ನದ ಪದಕಗಳು
ಬಿಎಸ್‌ಸಿ (ಆನರ್ಸ್) ಕೃಷಿಯಲ್ಲಿ ಟಿ.ಎಲ್. ದೀಪ್ತಿ ಅವರು ಒಟ್ಟು 13 ಪದಕಗಳು ಹಾಗೂ 4 ದಾನಿಗಳ ಚಿನ್ನದ ಪದಕ ಪ್ರಶಸ್ತಿ ಪ್ರಮಾಣ ಪತ್ರಗಳನ್ನು ಪಡೆದುಕೊಂಡಿದ್ದಾರೆ. ಕೃಷಿ ವಿಶ್ವವಿದ್ಯಾಲಯದ 1 ಚಿನ್ನದ ಪದಕ ದಾನಿಗಳ 12 ಚಿನ್ನದ ಪದಕ ಹಾಗೂ ದಾನಿಗಳ 3 ಚಿನ್ನದ ಪದಕಗಳ ಪ್ರಮಾಣ ಪತ್ರಗಳನ್ನು ಗಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.