ಬೆಂಗಳೂರು: ವಿವಿಧ ಕ್ಷೇತ್ರಗಳಲ್ಲಿ ಗಣನೀಯವಾಗಿ ಕೆಲಸ ಮಾಡಿರುವ ಸಾಧಕರಿಗೆ ‘ನಮ್ಮ ಬೆಂಗಳೂರು ಪ್ರಶಸ್ತಿ’ಯನ್ನು ಸೋಮವಾರ ಪ್ರದಾನ ಮಾಡಲಾಯಿತು.
ಕೋರಮಂಗಲದಲ್ಲಿ ನಮ್ಮ ಬೆಂಗಳೂರು ಫೌಂಡೇಷನ್ ಆಯೋಜಿಸಿದ್ದ ಸಮಾರಂಭದಲ್ಲಿ ರಾಜ್ಯಪಾಲ ಥಾವರಚಂದ್ ಗೆಹಲೋತ್ 14ನೇ ಆವೃತ್ತಿಯ ಪ್ರಶಸ್ತಿ ಪ್ರದಾನ ಮಾಡಿದರು.
ಎಸ್.ಜಿ.ಸುಶೀಲಮ್ಮ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಲಾಯಿತು. ವರ್ಷದ ವ್ಯಕ್ತಿ ವಿಭಾಗದಲ್ಲಿ ಡಾ.ಅಲೆಕ್ಸಾಂಡರ್ ಥಾಮಸ್ ಮತ್ತು ಡಾ.ಪಿ. ಶ್ರೀರಾಮ್, ವರ್ಷದ ಸರ್ಕಾರಿ ಅಧಿಕಾರಿ ವಿಭಾಗದಲ್ಲಿ ಎಚ್.ಎಲ್.ಪ್ರಭಾಕರ, ವರ್ಷದ ಸಾಮಾಜಿಕ ಉದ್ಯಮಿ ವಿಭಾಗದಲ್ಲಿ ವಿಕಾಸ್ ಬ್ರಹ್ಮಾವರ್ ಮತ್ತು ಗೌತಮ್ ದೇಸಿಂಗ್, ವರ್ಷದ ಉದಯೋನ್ಮುಖ ತಾರೆ ವಿಭಾಗದಲ್ಲಿ ಮಾಳವಿಕಾ ಆರ್.ನಾಯರ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಬೆಂಗಳೂರಿನ ಬೆಳವಣಿಗೆಯಲ್ಲಿ ಹಲವರ ಪಾತ್ರ ಇದೆ. ಅಂತಹ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡುವ ಕ್ರಮ ಶ್ಲಾಘನೀಯ. ಸಮುದಾಯಗಳು ಒಟ್ಟಿಗೆ ಸೇರಿದಾಗ ಸಮಾಜದಲ್ಲಿ ಅರ್ಥಪೂರ್ಣ ಬದಲಾವಣೆ ಸಾಧ್ಯ. ಇದಕ್ಕೆ ಈ ಸಾಧಕರೇ ಉದಾಹರಣೆ ಎಂದು ಗೆಹಲೋತ್ ಹೇಳಿದರು.
ತೀರ್ಪುಗಾರರ ಸಮಿತಿ ಅಧ್ಯಕ್ಷ ಪ್ರದೀಪ್ಕರ್ ಮಾತನಾಡಿ, ‘ಈ ಬಾರಿ ಪ್ರಶಸ್ತಿಗೆ 3,000ಕ್ಕೂ ಹೆಚ್ಚು ನಾಮನಿರ್ದೇಶನಗಳನ್ನು ಸ್ವೀಕರಿಸಲಾಗಿತ್ತು. ಇದರಲ್ಲಿ ಅರ್ಹರನ್ನು ತೀರ್ಪುಗಾರರ ತಂಡ ಆಯ್ಕೆ ಮಾಡಿದೆ’ ಎಂದರು.
ನಮ್ಮ ಬೆಂಗಳೂರು ಫೌಂಡೇಷನ್‌ನ ಪ್ರಧಾನ ವ್ಯವಸ್ಥಾಪಕ ವಿನೋದ್ ಜಾಕೋಬ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.