
ಬೆಂಗಳೂರು: ಪೆರಿಫೆರಲ್ ರಿಂಗ್ ರಸ್ತೆ (ಪಿಆರ್‌ಆರ್–1) ಯೋಜನೆಯನ್ನು ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ (ಬಿಬಿಸಿ) ಎಂದು ಮರು ನಾಮಕರಣ ಮಾಡಿರುವ ಸರ್ಕಾರ, ಎರಡು ವರ್ಷಗಳಲ್ಲಿ ಯೋಜನೆ ಪೂರ್ಣಗೊಳಿಸುವ ಗುರಿ ಹೊಂದಿದೆ. ಬಿಬಿಸಿ ರಸ್ತೆ ಅಗಲವನ್ನು 100 ಮೀಟರ್ ಬದಲು 65 ಮೀಟರ್‌ಗೆ ಸೀಮಿತಗೊಳಿಸಲು ತೀರ್ಮಾನಿಸಿದೆ.
2007ರಲ್ಲಿ ಯೋಜನೆ ಘೋಷಿಸಿದಾಗ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) 73 ಕಿ.ಮೀ. ಮಾರ್ಗದಲ್ಲಿ 100 ಮೀಟರ್ ಅಗಲದ ರಸ್ತೆ ನಿರ್ಮಿಸುವ ಸಂಬಂಧ ಅಧಿಸೂಚನೆ ಹೊರಡಿಸಿ, ವಿಸ್ತೃತ ಯೋಜನಾ ವರದಿಯನ್ನು ಸಿದ್ದಪಡಿಸಲಾಗಿತ್ತು. ಈಗ ರಸ್ತೆ ವಿನ್ಯಾಸದಲ್ಲಿ ಬದಲಾವಣೆ ಮಾಡಿ, 100 ಮೀಟರ್ ಬದಲಿಗೆ ಸರ್ವೀಸ್ ರಸ್ತೆ, ಮೆಟ್ರೊ ಮಾರ್ಗವನ್ನೂ ಒಳಗೊಂಡಂತೆ 65 ಮೀಟರ್‌ಗೆ ಸೀಮಿತಗೊಳಿಸಿದೆ.
ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿ ಮಾದರಿಯಲ್ಲಿ ರಸ್ತೆ ನಿರ್ಮಿಸಲು ತೀರ್ಮಾನಿಸಲಾಗಿದೆ. ರಸ್ತೆಯ ಎರಡೂ ಭಾಗದಲ್ಲಿ ಸರ್ವೀಸ್ ರಸ್ತೆ ಇರಲಿದ್ದು, ಪ್ರಮುಖ ರಸ್ತೆ ಟೋಲ್ ರಸ್ತೆಯಾಗಲಿದೆ.
ಪಿಆರ್‌ಆರ್ ರಸ್ತೆಯ ಎರಡೂ ಬದಿಯಲ್ಲಿ 9 ಮೀಟರ್ ಅಗಲದ ಸರ್ವೀಸ್ ರಸ್ತೆ, 3 ಮೀಟರ್ ಅಗಲದ ಪಾದಚಾರಿ ಮಾರ್ಗ ನಿರ್ಮಾಣಗೊಳ್ಳಲಿದೆ. ರಸ್ತೆಗೆ ಹೊಂದಿಕೊಂಡಿರುವ ಗ್ರಾಮಗಳಿಗೆ ಹಾಗೂ ಯೋಜನೆಗೆ ಸ್ವಾಧೀನ ಪಡಿಸಿಕೊಂಡ ಬಳಿಕ ಉಳಿಯುವ ರೈತರ ಭೂಮಿಗೆ ರಸ್ತೆ ಸಂಪರ್ಕ ಕಲ್ಪಿಸಲು ಸರ್ವೀಸ್ ರಸ್ತೆ ನಿರ್ಮಿಸಲಾಗುತ್ತದೆ.
ಸರ್ವೀಸ್ ರಸ್ತೆ ಪಕ್ಕದಲ್ಲಿ ಮೆಟ್ರೊ ಮಾರ್ಗ ನಿರ್ಮಾಣ ಅಥವಾ ಎಲಿವೇಟೆಡ್ ರೈಲು ವ್ಯವಸ್ಥೆಗೆ 5 ಮೀಟರ್‌ನಷ್ಟು ಜಾಗ ಕಾಯ್ದಿರಿಸಲಾಗುತ್ತಿದೆ. ರಸ್ತೆಯ ಪ್ರತಿಯೊಂದು ಬದಿಯಲ್ಲಿ 4 ಮೀಟರ್‌ಗಳನ್ನು ಶೋಲ್ಡರ್ ಮತ್ತು ಫೆನ್ಸಿಂಗ್‌ಗೆ ಬಳಸಲಾಗುತ್ತದೆ.
ಯೋಜನೆಯ ಈ ಪರಿಷ್ಕರಣೆಯಿಂದಾಗಿ 35 ಮೀಟರ್ ಜಾಗ ಉಳಿತಾಯವಾಗಲಿದ್ದು, ಅದನ್ನೇ ರೈತರಿಗೆ ಪರಿಹಾರ ರೂಪದಲ್ಲಿ ಮರಳಿ ನೀಡಲು ತೀರ್ಮಾನಿಸಲಾಗಿದೆ. ಪ್ರಮುಖ ವಾಣಿಜ್ಯ ಪ್ರದೇಶವಾಗಿ ಈ ಯೋಜನಾ ಮಾರ್ಗವು ರೂಪುಗೊಳ್ಳಲಿರುವ ಕಾರಣ ರೈತರಿಗೂ ಅನುಕೂಲವಾಗಲಿ ಎಂದು ಈ ತೀರ್ಮಾನ ಮಾಡಲಾಗಿದೆ.
ಪಿಆರ್‌ಆರ್ ರಸ್ತೆ ಸುತ್ತಮುತ್ತ 1 ಕಿ.ಮೀ. ವ್ಯಾಪ್ತಿಯೊಳಗಿನ ಎಲ್ಲ ಭೂ ವ್ಯವಹಾರಗಳಿಗೆ ಮುದ್ರಾಂಕ ಮತ್ತು ನೋಂದಣಿ ಶುಲ್ಕದ ಮೇಲೆ ಶೇಕಡ 1ರಷ್ಟು ಸೆಸ್ ವಿಧಿಸಲಾಗುತ್ತದೆ. ಈ ಸೆಸ್ ಅನ್ನು ನೋಂದಣಿ ಮತ್ತು ಮುದ್ರಾಂಕ ಇಲಾಖೆಯಿಂದ ಸಂಗ್ರಹಿಸಿ, ರಾಜ್ಯದ ಸಂಯುಕ್ತ ನಿಧಿಗೆ ಜಮೆ ಮಾಡಲಾಗುತ್ತದೆ. ಸರ್ಕಾರ ಈ ಸೆಸ್ ಅನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ವರ್ಗಾಯಿಸಲಿದೆ.
Quote - ಬಿಬಿಸಿ ಯೋಜನೆಗೆ ಸ್ವಾಧೀನ ಪಡಿಸಿಕೊಳ್ಳುವ ಭೂಮಿಯನ್ನು ರಿಯಲ್ ಎಸ್ಟೇಟ್‌ಗೆ ಬಳಸಿಕೊಳ್ಳುವುದಿಲ್ಲ. ಯಾವುದೇ ವದಂತಿಗಳಿಗೆ ರೈತರು ಕಿವಿಗೊಡಬಾರದು. ಎಲ್.ಕೆ.ಅತೀಕ್ ಅಧ್ಯಕ್ಷ ಬಿಬಿಸಿ ವಿಶೇಷ ಉದ್ದೇಶದ ಘಟಕ (ಎಸ್‌ಪಿವಿ)
117 ಕಿ.ಮೀ. ಉದ್ದದ ಮಾರ್ಗ
ಬಿಬಿಸಿ ಯೋಜನೆಯು 117 ಕಿ.ಮೀ. ಉದ್ದ ಇರಲಿದೆ. ತುಮಕೂರು ರಸ್ತೆಯಿಂದ ಯಲಹಂಕ ವೈಟ್‌ಫೀಲ್ಡ್ ಆನೇಕಲ್ ಎಲೆಕ್ಟ್ರಾನಿಕ್ ಸಿಟಿ ಮೈಸೂರು ರಸ್ತೆ ಮಾರ್ಗವಾಗಿ ಬೆಂಗಳೂರನ್ನು ಸುತ್ತುವರಿದು ಮತ್ತೆ ತುಮಕೂರು ರಸ್ತೆಯ ಬಿಐಇಸಿ ಬಳಿ ಸಂಪರ್ಕ ಸಾಧಿಸಲಿದೆ. ಈ ರಸ್ತೆಯು ಬೆಂಗಳೂರಿನ ಉತ್ತರ ಭಾಗದಲ್ಲಿ 73 ಕಿ.ಮೀ. ಸಾಗಲಿದ್ದು ಉಳಿದದ್ದು ಬೆಂಗಳೂರಿನ ದಕ್ಷಿಣ ಭಾಗದಲ್ಲಿ ಸಾಗಲಿದೆ. ಎಲೆಕ್ಟ್ರಾನಿಕ್ ಸಿಟಿ ತುಮಕೂರು ರಸ್ತೆ ನೆಲಮಂಗಲ ಮೈಸೂರು ರಸ್ತೆ ಕಡೆ ಹೋಗುವ ವಾಹನಗಳು ಈ ರಸ್ತೆಯಲ್ಲಿ ಸಾಗಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.