ADVERTISEMENT

ಬೆಂಗಳೂರು: ಪ್ರವಾಸಕ್ಕೆ ಹೋಗಿದ್ದ ಉದ್ಯಮಿ ಮನೆಯಲ್ಲಿ ಕಳ್ಳತನ ಮಾಡಿದ್ದ ದಂಪತಿ ಸೆರೆ

ಕೆಲಸದಾಕೆ, ಆಕೆಯ ಪತಿ ಸೆರೆ: ₹1.37 ಕೋಟಿ ಮೌಲ್ಯದ ಚಿನ್ನಾಭರಣ ಜಪ್ತಿ

​ಪ್ರಜಾವಾಣಿ ವಾರ್ತೆ
Published 6 ಜನವರಿ 2026, 23:30 IST
Last Updated 6 ಜನವರಿ 2026, 23:30 IST
ಆರೋಪಿಗಳಿಂದ ಜಪ್ತಿ ಮಾಡಿಕೊಂಡ ಚಿನ್ನಾಭರಣವನ್ನು ನಗರ ಪೊಲೀಸ್ ಕಮಿಷನರ್ ಸೀಮಾಂತ್‌ ಕುಮಾರ್ ಸಿಂಗ್ ಹಾಗೂ ಕೇಂದ್ರ ವಿಭಾಗದ ಡಿಸಿಪಿ ಅಕ್ಷಯ್‌ ಹಾಕೇ ಅವರು ಪರಿಶೀಲಿಸಿದರು 
ಆರೋಪಿಗಳಿಂದ ಜಪ್ತಿ ಮಾಡಿಕೊಂಡ ಚಿನ್ನಾಭರಣವನ್ನು ನಗರ ಪೊಲೀಸ್ ಕಮಿಷನರ್ ಸೀಮಾಂತ್‌ ಕುಮಾರ್ ಸಿಂಗ್ ಹಾಗೂ ಕೇಂದ್ರ ವಿಭಾಗದ ಡಿಸಿಪಿ ಅಕ್ಷಯ್‌ ಹಾಕೇ ಅವರು ಪರಿಶೀಲಿಸಿದರು    

ಬೆಂಗಳೂರು: ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಚೆನ್ನೈ ಪ್ರವಾಸಕ್ಕೆ ತೆರಳಿದ್ದ ಉದ್ಯಮಿ ಮನೆಯಲ್ಲಿ ₹1.37 ಕೋಟಿ ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿದ್ದ ದಂಪತಿಯನ್ನು ಸದಾಶಿವನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಪಶ್ಚಿಮ ಬಂಗಾಳದ ಹಾಜಿರಾ ಬೇಗಂ ಹಾಗೂ ಪತಿ ಶಾಹಿರ್‌ ಬಂಧಿತರು.

ಬಂಧಿತರಿಂದ 787 ಗ್ರಾಂ ಚಿನ್ನಾಭರಣ, 291 ಗ್ರಾಂ ಬೆಳ್ಳಿಯ ವಸ್ತುಗಳು, ಏಳು ವಿದೇಶಿ ವಾಚ್‌ಗಳು ಸಹಿತ ಒಟ್ಟು ₹1.37 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.

ಸದಾಶಿವನಗರದ ನಿವಾಸಿ ಅಭಿಷೇಕ್ ಅವರ ಮನೆಯಲ್ಲಿ ಕಳ್ಳತನ ನಡೆದಿತ್ತು. ಅವರು ನೀಡಿದ ದೂರು ಆಧರಿಸಿ ಆರೋಪಿಗಳನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದರು.

‘ಹಲವು ವರ್ಷಗಳಿಂದ ಅಭಿಷೇಕ್ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಹಾಜಿರಾ ಬೇಗಂ ಮದುವೆಯ ಕಾರಣ ನೀಡಿ ಕಳೆದ ಮೂರು ವರ್ಷಗಳ ಹಿಂದೆ ಕೆಲಸ ಬಿಟ್ಟಿದ್ದರು. ಆದರೆ, ಈ ಬಾರಿ ಹೊಸ ವರ್ಷ ಸಮೀಪಿಸುತ್ತಿದ್ದ ಸಂದರ್ಭದಲ್ಲಿ ವಾಪಸ್‌ ಬಂದಿದ್ದ ಹಾಜಿರಾ, ಕೆಲಸಕ್ಕೆ ಸೇರಲು ಇಂಗಿತ ವ್ಯಕ್ತಪಡಿಸಿದ್ದರು. ಮೊದಲಿನಿಂದ ಪರಿಚಯವಿದ್ದ ಕಾರಣ ಆಕೆಯನ್ನು ನಂಬಿದ್ದ ಮಾಲೀಕರು, ಮತ್ತೆ ಕೆಲಸಕ್ಕೆ ಸೇರಿಸಿಕೊಂಡಿದ್ದರು. ಡಿ.30ರಂದು ಅಭಿಷೇಕ್ ಅವರು ಕುಟುಂಬದೊಂದಿಗೆ ಹೊಸವರ್ಷದ ಸಂಭ್ರಮಾಚರಣೆಗಾಗಿ ತಮಿಳುನಾಡಿಗೆ ತೆರಳಿದ್ದರು. ಈ ಸಂದರ್ಭವನ್ನು ಬಳಸಿಕೊಂಡಿದ್ದ ಹಾಜಿರಾ, ಪತಿಯನ್ನು ಮನೆಗೆ ಕರೆಸಿಕೊಂಡು, ಬಳಿಕ ಚಿನ್ನಾಭರಣ ದೋಚಿ ಇಬ್ಬರೂ ಪರಾರಿಯಾಗಿದ್ದರು’ ಎಂದು ಪೊಲೀಸರು ಹೇಳಿದರು.

‘ಮನೆ ಕೆಲಸ ಮಾಡುತ್ತಿದ್ದ ಹಾಜಿರಾ ಅವರ ಬಳಿ ಮನೆಯ ಒಂದು ಕೀಯನ್ನು ಕೊಟ್ಟಿದ್ದ ಅಭಿಷೇಕ್‌ ಅವರು, ಅದನ್ನು ತಮ್ಮ ಅತ್ತೆಗೆ ನೀಡುವಂತೆ ಸೂಚಿಸಿದ್ದರು. ಆದರೆ, ಅಂದು ಸಂಜೆಯಾದರೂ ಮನೆಯ ಕೀಯನ್ನು ಅತ್ತೆಗೆ ಹಾಜಿರಾ ನೀಡಿರಲಿಲ್ಲ. ಅನುಮಾನ ಬಂದು ಹಾಜಿರಾಗೆ ಅಭಿಷೇಕ್‌ ಕರೆ ಮಾಡಿದ್ದಾಗ ಅವರ ಮೊಬೈಲ್​​ ಸ್ವಿಚ್ ​​ಆಫ್​​ ಆಗಿತ್ತು. ಬಳಿಕ ಕಾರು ಚಾಲಕನಿಗೆ ಕರೆ ಮಾಡಿ ಮನೆಯ ಬಳಿಗೆ ಹೋಗಿ ಪರಿಶೀಲನೆ ನಡೆಸುವಂತೆ ತಿಳಿಸಿದ್ದರು. ಅವರು ಮನೆಗೆ ತೆರಳಿ ಪರಿಶೀಲಿಸಿದಾಗ, ಮನೆಯ ಕಬೋರ್ಡ್‌ಗಳು ತೆರೆದಿರುವುದು ಕಂಡುಬಂದಿತ್ತು. ಅಭಿಷೇಕ್‌ ಅವರು ಪ್ರವಾಸ ಮುಗಿಸಿ ಮನೆಗೆ ಬಂದು ನೋಡಿದಾಗ ಕಳ್ಳತನ ನಡೆದಿರುವುದು ಪತ್ತೆ ಆಗಿತ್ತು’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.