ADVERTISEMENT

ಬೆಂಗಳೂರು| ಅಸಭ್ಯ ವರ್ತನೆ: ಮಾರುತಿ ಡ್ರೈವಿಂಗ್ ಸ್ಕೂಲ್‌ನ ಪರವಾನಗಿ ರದ್ದು

ಅಸಭ್ಯ ವರ್ತನೆ: ತರಬೇತುದಾರ ಅಣ್ಣಪ್ಪ ಡಿಎಲ್‌ ಸಹ ಅಮಾನತು

​ಪ್ರಜಾವಾಣಿ ವಾರ್ತೆ
Published 22 ಜುಲೈ 2024, 16:09 IST
Last Updated 22 ಜುಲೈ 2024, 16:09 IST
<div class="paragraphs"><p>ಸಾಂಕೇತಿಕ ಚಿತ್ರ&nbsp;</p></div>

ಸಾಂಕೇತಿಕ ಚಿತ್ರ 

   

ಬೆಂಗಳೂರು: ಬಸವೇಶ್ವರನಗರದ ಮಾರುತಿ ಡ್ರೈವಿಂಗ್‌ ಸ್ಕೂಲ್‌ನ ಪರವಾನಗಿ ಹಾಗೂ ಅದೇ ಶಾಲೆಯ ತರಬೇತುದಾರನ ಚಾಲನಾ ಪರವಾನಗಿಯನ್ನು (ಡಿಎಲ್‌) ಸಾರಿಗೆ ಮತ್ತು ರಸ್ತೆ ಸುರಕ್ಷತಾ ಇಲಾಖೆ ರದ್ದುಗೊಳಿಸಿದೆ. 

ಯುವತಿಗೆ ಕಾರು ಚಾಲನೆಯ ತರಬೇತಿ ನೀಡುವ ವೇಳೆ ಅಸಭ್ಯವಾಗಿ ವರ್ತಿಸಿದ್ದ ಆರೋಪದ ಅಡಿ ಕಾರು ತರಬೇತಿದಾರನ ವಿರುದ್ಧ ಬಸವೇಶ್ವರನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾದ ಬೆನ್ನಲ್ಲೇ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಸೂಚನೆಯಂತೆ ಸಾರಿಗೆ ಇಲಾಖೆ ಕ್ರಮ ಕೈಗೊಂಡಿದೆ.

ADVERTISEMENT

ನಗರದ ಯಾವುದೇ ಡ್ರೈವಿಂಗ್ ಶಾಲೆಯಲ್ಲೂ ಈ ರೀತಿಯ ಘಟನೆಗಳು ನಡೆಯಬಾರದು. ಈ ನಿಟ್ಟಿನಲ್ಲಿ ಬಿಗಿ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಮಹಾಲಕ್ಷ್ಮೀಪುರದ 18 ವರ್ಷದ ಯುವತಿ ನೀಡಿದ್ದ ದೂರು ಆಧರಿಸಿ, ಬಸವೇಶ್ವರನಗರದ ಮಾರುತಿ ಡ್ರೈವಿಂಗ್‌ ಸ್ಕೂಲ್‌ನ ತರಬೇತುದಾರ ಅಣ್ಣಪ್ಪ ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಏನಿದು ಪ್ರಕರಣ?:‌

‘ದೂರು ನೀಡಿದ್ದ ಯುವತಿ ಕಾರು ಚಾಲನೆ ಕಲಿಯಲು ಮಾರುತಿ ಡ್ರೈವಿಂಗ್‌ ಸ್ಕೂಲ್‌ಗೆ ಸೇರಿದ್ದರು. ಅಣ್ಣಪ್ಪ ಎಂಬಾತ ಕಾರು ಚಾಲನೆ ಬಗ್ಗೆ ತರಬೇತಿ ನೀಡಿದ್ದರು. ಒಂದು ತಿಂಗಳ ಕೋರ್ಸ್‌ ಮುಕ್ತಾಯವಾದ ಮೇಲೆ ಅಣ್ಣಪ್ಪ, ‘ನಿಮ್ಮ ಮನೆಯ ಕಾರಿನಲ್ಲೇ ಪರಿಪೂರ್ಣವಾಗಿ ಚಾಲನೆ ಬಗ್ಗೆ ಹೇಳಿಕೊಡುತ್ತೇನೆ. ಒಂದು ಗಂಟೆಯ ವಿಶೇಷ ಕ್ಲಾಸ್‌ಗೆ ₹750 ಕೊಡಬೇಕು’ ಎಂದು ಯುವತಿಯನ್ನು ಕೇಳಿಕೊಂಡಿದ್ದರು. ಯುವತಿ 15 ದಿನಗಳ ವಿಶೇಷ ಕ್ಲಾಸ್‌ಗೆ ಅಣ್ಣಪ್ಪ ಅವರಿಗೆ ₹10,500 ಪಾವತಿಸಿದ್ದರು. ಅದರಂತೆ ಅಣ್ಣಪ್ಪ ವಿಶೇಷ ತರಬೇತಿ ಆರಂಭಿಸಿದ್ದರು’ ಎಂದು ಪೊಲೀಸರು ಹೇಳಿದರು.

‘ಪ್ರತಿದಿನ ಯುವತಿಯ ಮನೆ ಬಳಿ ಬಂದು ಆಕೆಯ ಕಾರಿನಲ್ಲೇ ಅಣ್ಣಪ್ಪ ಚಾಲನೆ ತರಬೇತಿ ನೀಡುತ್ತಿದ್ದರು. ಜುಲೈ 7ರಂದು ಬೆಳಿಗ್ಗೆ 6 ಗಂಟೆ ಸುಮಾರಿಗೆ ಯುವತಿ ಮನೆ ಬಳಿ ಬಂದಿದ್ದ ಅಣ್ಣಪ್ಪ, ಯುವತಿಯನ್ನು ಕಾರಿನಲ್ಲಿ ಕರೆದುಕೊಂಡು ಚಾಲನೆ ಬಗ್ಗೆ ಹೇಳಿಕೊಡಲು ಮುಂದಾಗಿದ್ದರು. ಬಸವೇಶ್ವರ ನಗರದ ನ್ಯಾಷನಲ್‌ ಶಾಲೆಯ ಮೇಲ್ಸೇತುವೆಯಲ್ಲಿ ತೆರಳುವಾಗ, ಯುವತಿ ಕಾರು ಚಾಲನೆ ಮಾಡುತ್ತಿದ್ದರು. ಆಗ ಅಣ್ಣಪ್ಪ ಅಸಭ್ಯವಾಗಿ ವರ್ತಿಸಿದ್ದರು’ ಎಂದು ಪೊಲೀಸರು ತಿಳಿಸಿದರು.

ತರಬೇತುದಾರನ ಅಸಭ್ಯ ವರ್ತನೆಯಿಂದ ಗಾಬರಿಗೊಂಡಿದ್ದ ಯುವತಿ ಕಾರನ್ನು ಮನೆಯತ್ತ ತಿರುಗಿಸಿದ್ದರು. ಅದಾದ ಮೇಲೆ ತರಬೇತುದಾರ ಸುಮ್ಮನಾಗಿದ್ದರು. ಅಣ್ಣಪ್ಪ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಯುವತಿ ಪೊಲೀಸರಿಗೆ ದೂರು ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.