ADVERTISEMENT

ಬೆಂಗಳೂರು: ಕೋಟ್ಯಂತರ ಮೌಲ್ಯದ ಆಸ್ತಿ ಬರೆದಿದ್ದ ಮನೆಗೆ ಕನ್ನ

ಕೇರ್‌ ಟೇಕರ್‌ ಬಂಧನ, ಜೆ.ಪಿ. ನಗರ ಠಾಣೆ ಪೊಲೀಸರ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2025, 15:47 IST
Last Updated 30 ಅಕ್ಟೋಬರ್ 2025, 15:47 IST
ಮಂಗಳಾ 
ಮಂಗಳಾ    

ಬೆಂಗಳೂರು: ಕೇರ್ ಟೇಕರ್ ಹೆಸರಿಗೆ ₹5 ಕೋಟಿ ಮೌಲ್ಯದ ಆಸ್ತಿ ಬರೆದಿಟ್ಟು ಮಗಳಂತೆ ನೋಡಿಕೊಂಡಿದ್ದ ಮಾಲೀಕರ ಮನೆಗೆ ಕನ್ನ ಹಾಕಿದ್ದ ಮಹಿಳೆಯನ್ನು ಜೆ.ಪಿ. ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಮಂಗಳಾ (32) ಬಂಧಿತೆ.

ಆರೋಪಿಯಿಂದ 450 ಗ್ರಾಂ ಚಿನ್ನಾಭರಣ ಹಾಗೂ ಮೂರು ಕೆ.ಜಿ ಬೆಳ್ಳಿ ಸಾಮಗ್ರಿ ವಶಕ್ಕೆ ಪಡೆಯಲಾಗಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ಹೇಳಿದರು.

ADVERTISEMENT

ಪಾರ್ಟಿ, ಬಾಯ್‌ಫ್ರೆಂಡ್, ಆನ್‌ಲೈನ್ ಬೆಟ್ಟಿಂಗ್ ಸಹವಾಸದಿಂದ ಮಾಲೀಕರ ಮನೆಯಲ್ಲಿ ಮಂಗಳಾ ಅವರು ಚಿನ್ನಾಭರಣ ಕಳ್ಳತನ ಮಾಡಿದ್ದರು ಎಂದು ಪೊಲೀಸರು ಹೇಳಿದರು.

ಜೆ.ಪಿ.ನಗರದ ಎರಡನೇ ಹಂತದ ನಿವಾಸಿ ಆಶಾ ಜಾಧವ್ ಅವರು ತಮ್ಮ ತಾಯಿಯನ್ನು ನೋಡಿಕೊಳ್ಳಲು 15 ವರ್ಷದ ಹಿಂದೆ ಮಂಗಳಾ ಅವರನ್ನು ಕೇರ್ ಟೇಕರ್ ಆಗಿ ನೇಮಿಸಿಕೊಂಡಿದ್ದರು. ವಯೋಸಹಜ ಆರೋಗ್ಯ ಸಮಸ್ಯೆಯಿಂದ ಹಾಸಿಗೆ ಹಿಡಿದಿದ್ದ ಆಶಾ ಅವರ ತಾಯಿಯನ್ನು ಮಂಗಳಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು ಎಂದು ಪೊಲೀಸರು ಹೇಳಿದರು.

ಆಶಾ ಜಾಧವ್‌ (58) ಅವರ ಪತಿ ಕೆಲವು ತಿಂಗಳ ಹಿಂದೆ ಮೃತಪಟ್ಟಿದ್ದರು. ದಂಪತಿಗೆ ಮಕ್ಕಳು ಇರಲಿಲ್ಲ. ಜೆ.ಪಿ. ನಗರದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದ ಆಶಾ ಅವರು ಮಂಗಳಾ ಅವರನ್ನೇ ಮಗಳಂತೆ ನೋಡಿಕೊಳ್ಳುತ್ತಿದ್ದರು. ಅಲ್ಲದೇ ₹5 ಕೋಟಿ ಮೌಲ್ಯದ ಮನೆ ಸೇರಿ ಇತರೆ ಆಸ್ತಿಯನ್ನೂ ಮಂಗಳಾ ಅವರ ಹೆಸರಿಗೆ ಬರೆದಿದ್ದರು ಎಂದು ಮೂಲಗಳು ಹೇಳಿವೆ.

‘ಆರೋಪಿಗೆ ಆನ್‌ಲೈನ್‌ನಲ್ಲಿ ಬೆಟ್ಟಿಂಗ್ ಆಡುವ ಅಭ್ಯಾಸವಿತ್ತು. ಅಲ್ಲದೇ ಮೋಜು–ಮಸ್ತಿಗೆ ಎಂದು ಪಬ್‌ಗೂ ತೆರಳುತ್ತಿದ್ದರು. ಬಾಯ್‌ಫ್ರೆಂಡ್‌ಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದರು. ಅದಕ್ಕಾಗಿ ಸಾಲ ಮಾಡಿದ್ದರು. ₹40 ಲಕ್ಷ ಸಾಲವನ್ನು ಆಶಾ ಅವರೇ ತೀರಿಸಿದ್ದರು. ಅದಾದ ಮೇಲೂ ಬೆಟ್ಟಿಂಗ್‌ ಆಡುವುದನ್ನು ಆರೋಪಿ ಬಿಟ್ಟಿರಲಿಲ್ಲ. ತಮ್ಮ ಹೆಸರಿಗೆ ಬರೆದಿದ್ದ ಮನೆಯನ್ನೂ ಆರೋಪಿ ಮಾರಾಟ ಮಾಡಿದ್ದರು’ ಎಂದು ಪೊಲೀಸರು ಹೇಳಿದರು.

‘ಸಾಲ ತೀರಿಸುವ ಉದ್ದೇಶದಿಂದ ಮನೆಯಲ್ಲಿದ್ದ ಚಿನ್ನಾಭರಣವನ್ನು ಮಂಗಳಾ ಕಳವು ಮಾಡಿ ಕೀಯನ್ನು ನಿರ್ಜನ ಪ್ರದೇಶದಲ್ಲಿ ಎಸೆದಿದ್ದರು. ಕೀ ಕಳೆದಿರಬಹುದು ಎಂದು ಭಾವಿಸಿದ್ದ ಆಶಾ ಅವರು ದೀಪಾವಳಿ ಸಂದರ್ಭದಲ್ಲಿ ನಕಲಿ ಕೀ ಮೂಲಕ ಬೀರು ತೆಗೆಸಿದಾಗ 450 ಗ್ರಾಂ ಚಿನ್ನ ಹಾಗೂ 3 ಕೆ.ಜಿ ಬೆಳ್ಳಿ ಕಳ್ಳತನವಾಗಿರುವುದು ಗೊತ್ತಾಗಿತ್ತು’ ಎಂದು ಪೊಲೀಸರು ಹೇಳಿದರು.

‘ಅಪರಿಚಿತರು ಮನೆಗೆ ನುಗ್ಗಿ ಕಳ್ಳತನ ಮಾಡಿರಬಹುದೆಂದು ಭಾವಿಸಿ ಜೆ.ಪಿ.ನಗರ ಠಾಣೆಗೆ ಆಶಾ ಅವರು ದೂರು ನೀಡಿದ್ದರು. ತನಿಖೆ ವೇಳೆ ಅನುಮಾನಗೊಂಡ ಪೊಲೀಸರು ಮಂಗಳಾ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಆಗ ಮಂಗಳಾ ಚಿನ್ನಾಭರಣ ಕಳ್ಳತನ ಮಾಡಿರುವುದು ಗೊತ್ತಾಗಿತ್ತು’ ಎಂದು ಮೂಲಗಳು ಹೇಳಿವೆ. 

ವಿದೇಶದಲ್ಲಿ ಜನ್ಮದಿನ ಆಚರಣೆ
‘ಮಂಗಳಾ ಅವರನ್ನು ವಿದೇಶಕ್ಕೆ ಕರೆದೊಯ್ದು ಅಲ್ಲಿ ಜನ್ಮದಿನವನ್ನು ಆಚರಣೆ ಮಾಡಲಾಗಿತ್ತು. ಹುಡುಗನನ್ನು ನೋಡಿ ಮದುವೆ ಮಾಡಿಸುವ ಯೋಜನೆಯನ್ನೂ ಆಶಾ ಹೊಂದಿದ್ದರು’ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.