ಪ್ರಾತಿನಿಧಿಕ ಚಿತ್ರ
ಬೆಂಗಳೂರು: ರಾಜ್ಯದ ಎಲ್ಲಾ ಜಿಲ್ಲೆ, ತಾಲ್ಲೂಕು ಹಾಗೂ ಮಹಾನಗರ ಪಾಲಿಕೆಗಳಲ್ಲಿ ಕಾರ್ಮಿಕ ಸೌಲಭ್ಯ ಕೇಂದ್ರಗಳನ್ನು ಸ್ಥಾಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಅಗ್ರಹಿಸಿ ನ.26ರಂದು ಬೆಂಗಳೂರು ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಅಸುರಕ್ಷಿತ ಕಾರ್ಮಿಕ ಐಕ್ಯ ಆಂದೋಲನ ತಿಳಿಸಿದೆ.
ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಂದೋಲನದ ಪದಾಧಿಕಾರಿಗಳಾದ ಸುಷ್ಮಾ ವರ್ಮಾ, ಕಿರಣ್ ಕಮಲ್ ಪ್ರಸಾದ್, ಗುರುರಾಜು, ಕಲೀಮುಲ್ಲಾ, ಸಮೀರ್ ಮಿಂಚ್, ‘ಅಸಂಘಟಿತ ಕಾರ್ಮಿಕರಿಗೆ ಪ್ರತ್ಯೇಕ ಸಾಮಾಜಿಕ ಭದ್ರತಾ ಮಂಡಳಿ ಸ್ಥಾಪಿಸಬೇಕು. ಕೆಲಸದ ಅವಧಿ ಎಂಟು ಗಂಟೆ ನಿಗದಿಪಡಿಸಬೇಕು. ಹೆಚ್ಚುವರಿ ಕೆಲಸ ಮಾಡಿದರೆ ಹೆಚ್ಚು ವೇತನ ನೀಡಬೇಕು’ ಎಂದು ಆಗ್ರಹಿಸಿ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದರು.
‘ಅಸಂಘಟಿತ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗೆ ಕನಿಷ್ಠ ವೇತನವನ್ನು ನಿಗದಿಪಡಿಸಿ, ಅನುಷ್ಠಾನಗೊಳಿಸಬೇಕು. ನರೇಗಾ ಯೋಜನೆಯಡಿ ಹಿಂದುಳಿದ ಎಲ್ಲಾ ತಾಲ್ಲೂಕುಗಳಲ್ಲಿ ವರ್ಷಕ್ಕೆ 200 ದಿನಗಳವರೆಗೆ ಕೆಲಸ ನೀಡಬೇಕು. ಕಾರ್ಮಿಕರನ್ನು ಜೀತಗಾರರಂತೆ ನಡೆಸಿಕೊಳ್ಳುತ್ತಿರುವ ಹೀನ ಪದ್ಧತಿಗೆ ಕಡಿವಾಣ ಹಾಕಬೇಕು. ಮಾಜಿ ಜೀತಗಾರರ ಪುನರ್‌ವಸತಿ ಯೋಜನೆ ತ್ವರಿತವಾಗಿ ಜಾರಿಗೊಳಿಸಬೇಕು’ ಎಂದು ಒತ್ತಾಯಿಸಿದರು.
‘ಅಂತರ್ ರಾಜ್ಯ ವಲಸೆ ಕಾರ್ಮಿಕರ ಕಾಯ್ದೆಯಡಿ ಎಲ್ಲಾ ವಲಸೆ ಕಾರ್ಮಿಕರ ನೋಂದಣಿಗೆ ಕ್ರಮ ಕೈಗೊಳ್ಳಬೇಕು. ಅವರ ಮಕ್ಕಳಿಗೆ ಶಿಕ್ಷಣ, ಆರೋಗ್ಯ ಹಾಗೂ ವಸತಿ ಸೌಲಭ್ಯಗಳನ್ನು ಖಾತರಿಪಡಿಸಬೇಕು. ಅಂಗನವಾಡಿ, ಬಿಸಿಯೂಟ ಹಾಗೂ ಆಶಾ ಕಾರ್ಯಕರ್ತರನ್ನು ಕಾರ್ಮಿಕರೆಂದು ಪರಿಗಣಿಸಬೇಕು’ ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.