
‘ಮರಕ್ಕೆ ಸುತ್ತಿರುವ ಕೇಬಲ್ ತೆರವುಗೊಳಿಸಿ’
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ಮಾರ್ಗದಲ್ಲಿ ಇರುವ ಕೊಡಿಗೇಹಳ್ಳಿ ವೃತ್ತದ ಸರ್ವೀಸ್ ರಸ್ತೆಯ ಸಿಗ್ನಲ್‌ನ ಎಡ ಭಾಗದಲ್ಲಿರುವ ಮರವೊಂದಕ್ಕೆ ಕೇಬಲ್ ಸುತ್ತಲಾಗಿದೆ. ಬೆಂಗಳೂರು ನಗರದಲ್ಲಿ ಕೇಬಲ್ ಹಾವಳಿ ಹೆಚ್ಚಾಗಿರುವುದಕ್ಕೆ ಇದೇ ಸಾಕ್ಷಿ. ನಿತ್ಯ ಈ ರಸ್ತೆಯ ಮೂಲಕ ಲಕ್ಷಾಂತರ ಜನ ಸಂಚರಿಸುತ್ತಾರೆ. ಮರಕ್ಕೆ ಕೇಬಲ್ ಸುತ್ತಿರುವ ಕಾರಣ ನಗರದ ಸೌಂದರ್ಯಕ್ಕೆ ಧಕ್ಕೆ ಆಗುತ್ತಿದೆ. ಸಂಬಂಧಪಟ್ಟ ಪಾಲಿಕೆ ಅಧಿಕಾರಿಗಳು ಮರಗಳಿಗೆ ಸುತ್ತಿರುವ ಕೇಬಲ್ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು.
- ಅಶ್ವಥನಾರಾಯಣ, ಕೊಡಿಗೇಹಳ್ಳಿ ನಿವಾಸಿ
‘ಕಸ ವಿಲೇವಾರಿ ಮಾಡಿ’
ನಗರದಲ್ಲಿನ ಅಪಾರ್ಟ್‌ಮೆಂಟ್‌ಗಳಲ್ಲಿ ಉತ್ಪತ್ತಿ ಆಗುವ ಕಸವನ್ನು ವಿಲೇವಾರಿ ಮಾಡಲು ಸರ್ಕಾರವು, ಖಾಸಗಿ ವ್ಯಕ್ತಿಗಳಿಗೆ ಅವಕಾಶ ನೀಡಿದೆ. ಇವರು ಪ್ರತಿ ತಿಂಗಳು ಒಂದು ಮನೆಗೆ ₹ 100 ನೀಡುವಂತೆ ತಾಕೀತು ಮಾಡುತ್ತಿದ್ದಾರೆ. ಕೆಲ ಐಷಾರಾಮಿ ಅಪಾರ್ಟ್‌ಮೆಂಟ್‌ನ ನಿವಾಸಿಗಳು ಹಣ ನೀಡುತ್ತಾರೆ. ಆದರೆ ಬಿಡಿಎ, ಕೆಎಚ್‌ಬಿಯಿಂದ ಸೂರು ಇಲ್ಲದವರಿಗೆ ಸೂರು ಎಂಬ ತತ್ವದ ಅಡಿಯಲ್ಲಿ ಹಂಚಿಕೆಯಾದ ಮನೆಗಳ ನಿವಾಸಿಗಳಿಂದ ₹100 ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಹಣ ನೀಡದವರ ಮನೆಯ ಕಸವನ್ನು ವಿಲೇವಾರಿ ಮಾಡುತ್ತಿಲ್ಲ.
- ಕೆ.ನಾಗಲಿಂಗಪ್ಪ, ಬಿಡಿಎ ಅಪಾರ್ಟ್‌ಮೆಂಟ್ ಮೈಲಸಂದ್ರ ಗೇಟ್ ಕೆಂಗೇರಿ
‘ಪಾದಚಾರಿ ಮಾರ್ಗದಲ್ಲಿ ಬೃಹತ್ ಕೊಳವೆ’
ಚಾಮರಾಜಪೇಟೆಯ ಐದನೇ ಮುಖ್ಯರಸ್ತೆಯ ಪಾದಚಾರಿ ಮಾರ್ಗದಲ್ಲಿ ಜಲ ಮಂಡಳಿಯವರು ದೊಡ್ಡ ಕೊಳವೆಗಳನ್ನು ಇಟ್ಟಿದ್ದಾರೆ. ಇದರಿಂದ ಸಾರ್ವಜನಿಕರ ಓಡಾಟಕ್ಕೆ ತೊಂದರೆ ಆಗಿದೆ. ಇದರ ಜೊತೆಗೆ ಪಾದಚಾರಿ ಮಾರ್ಗದ ಪಕ್ಕದಲ್ಲಿಯೇ ವಾಹನಗಳನ್ನು ನಿಲುಗಡೆ ಮಾಡಿದ್ದು, ಸಾರ್ವಜನಿಕರು ಮುಖ್ಯರಸ್ತೆಯಲ್ಲಿ ನಡೆದು ಹೋಗುವ ಅಪಾಯ ಎದುರಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಇಲ್ಲಿ ಇಟ್ಟಿರುವ ಕೊಳವೆ ಹಾಗೂ ವಾಹನ ನಿಲುಗಡೆ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು.
- ಪತ್ತಂಗಿ ಎಸ್. ಮುರಳಿ, ಪಾದಚಾರಿ
‘ಪಾದಚಾರಿ ಮಾರ್ಗದಲ್ಲಿ ಕಸದ ರಾಶಿ’
ಪದ್ಮನಾಭನಗರದ ಜ್ಞಾನ ವಿಜ್ಞಾನ ಶಾಲೆ ಮುಂಭಾಗದ ಪಾದಚಾರಿ ಮಾರ್ಗದಲ್ಲಿ ರಾಶಿಗಟ್ಟಲೇ ಕಸ ಹಾಕಲಾಗಿದೆ. ಇದರಿಂದ ಇಡೀ ಪ್ರದೇಶ ಗಬ್ಬೆದ್ದು ನಾರುತ್ತಿದ್ದು, ಸೊಳ್ಳೆಗಳ ಉತ್ಪತ್ತಿ ತಾಣವಾಗಿದೆ. ಶಾಲೆಗೆ ತೆರಳುವ ಮಕ್ಕಳು ಸೇರಿದಂತೆ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುತ್ತಿದ್ದಾರೆ. ಸ್ಥಳೀಯ ನಿವಾಸಿಗಳು ತಮ್ಮ ಮನೆಯಲ್ಲಿ ಉತ್ಪತ್ತಿ ಆಗುವ ಕಸವನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಕೊಂಡು ಬಂದು ಇಲ್ಲಿ ಎಸೆದು ಹೋಗುತ್ತಿದ್ದಾರೆ. ಪಾಲಿಕೆಯ ಸಿಬ್ಬಂದಿ ಇಲ್ಲಿ ಬಿದ್ದಿರುವ ಕಸದ ರಾಶಿಯನ್ನು ಕೂಡಲೇ ವಿಲೇವಾರಿ ಮಾಡಬೇಕು.
- ಪದ್ಮನಾಭನಗರದ ನಿವಾಸಿಗಳು
‘ಸಿಗ್ನಲ್ ಅಳವಡಿಕೆ: ಹೆಚ್ಚಿದ ದಟ್ಟಣೆ’
ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಹಾಗೂ ಸುರಕ್ಷತೆಯ ದೃಷ್ಟಿಯಿಂದ ಸಿಗ್ನಲ್‌ಗಳನ್ನು ಅಳವಡಿಕೆ ಮಾಡಲಾಗಿದೆ. ಇತ್ತೀಚೆಗೆ ನಾಗರಬಾವಿ ವೃತ್ತದಲ್ಲಿ ನೂತನ ಸಿಗ್ನಲ್ ಅಳವಡಿಸಿದ್ದಾರೆ. ಇದರ ಜೊತೆಗೆ ನಾಗರಬಾವಿಯಿಂದ ಚಂದ್ರಾ ಬಡಾವಣೆಗೆ ಸಂಪರ್ಕ ಕಲ್ಪಿಸುವ ಮದ್ದೂರಮ್ಮ ದೇವಸ್ಥಾನದ ಹತ್ತಿರ ಮತ್ತೊಂದು ಸಿಗ್ನಲ್ ಹಾಕಿದ್ದಾರೆ. 100 ರಿಂದ 200 ಮೀಟರ್ ಅಂತರದಲ್ಲಿ ಎರಡು ಸಿಗ್ನಲ್‌ಗಳನ್ನು ಅಳವಡಿಕೆ ಮಾಡಿದ್ದರಿಂದ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ಈ ರೀತಿ ಸಿಗ್ನಲ್‌ಗಳನ್ನು ಅಳವಡಿಸಿದರೆ ಸಂಚಾರ ದಟ್ಟಣೆ ಕಡಿಮೆ ಆಗಬೇಕು. ಆದರೆ, ಇಲ್ಲಿ ದಟ್ಟಣೆ ಹೆಚ್ಚುತ್ತಿದ್ದು, ವಾಹನ ಸವಾರರಿಗೆ ಸಮಸ್ಯೆ ಆಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು.
- ಪೂಜಾ ಎಸ್., ಚಂದ್ರಾ ಲೇಔಟ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.