ADVERTISEMENT

ನಗರದ ರಸ್ತೆ ಗುಡಿಸಲು ಯಂತ್ರ: ಪೊರಕೆಗಳ ಬದಲಿಗೆ ಯಂತ್ರ ಬಳಕೆಗೆ ಪ್ರಾಯೋಗಿಕ ಚಾಲನೆ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2026, 15:44 IST
Last Updated 5 ಫೆಬ್ರುವರಿ 2026, 15:44 IST
ಪೊಮ್ಮಲ ಸುನೀಲ್‌ಕುಮಾರ್ ಅವರು ಸಹಕಾರನಗರದಲ್ಲಿ ಯಂತ್ರದ ಮೂಲಕ ರಸ್ತೆ ಗುಡಿಸುವ ಯೋಜನೆಗೆ ಚಾಲನೆ ನೀಡಿದರು
ಪೊಮ್ಮಲ ಸುನೀಲ್‌ಕುಮಾರ್ ಅವರು ಸಹಕಾರನಗರದಲ್ಲಿ ಯಂತ್ರದ ಮೂಲಕ ರಸ್ತೆ ಗುಡಿಸುವ ಯೋಜನೆಗೆ ಚಾಲನೆ ನೀಡಿದರು   

ಬೆಂಗಳೂರು: ರಸ್ತೆಗಳನ್ನು ಗುಡಿಸಲು ಪಾರಂಪರಿಕ ಪೊರಕೆಗಳ ಬದಲು ಯಂತ್ರಗಳನ್ನು ಬಳಸಲು ಬೆಂಗಳೂರು ಉತ್ತರ ನಗರ ಪಾಲಿಕೆ ಸಜ್ಜಾಗಿದೆ.

ಸಹಕಾರ ನಗರದ ಪಾರ್ಕ್ ಬಳಿಯ 1ನೇ ಮುಖ್ಯ ರಸ್ತೆಯಲ್ಲಿ ಪಾಲಿಕೆ ಆಯುಕ್ತ ಪೊಮ್ಮಲ ಸುನೀಲ್‌ಕುಮಾರ್ ಅವರು ಗುರುವಾರ ಯಂತ್ರ ಬಳಸಿ ಕಸ ಗುಡಿಸುವ ಮೂಲಕ ‘ಯಾಂತ್ರೀಕೃತ ಸ್ವಚ್ಛತಾ ಯಂತ್ರ’ಗಳಿಗೆ ಪ್ರಾಯೋಗಿಕವಾಗಿ ಚಾಲನೆ ನೀಡಿದರು.

‘ಉತ್ತರ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ದೈನಂದಿನ ರಸ್ತೆ ಸ್ವಚ್ಛತಾ ಕಾರ್ಯವನ್ನು ಉನ್ನತೀಕರಣಗೊಳಿಸಲು ಹಾಗೂ ಪೌರಕಾರ್ಮಿಕರ ಕೆಲಸವನ್ನು ಸುಲಭಗೊಳಿಸುವ ನಿಟ್ಟಿನಲ್ಲಿ ‘ಯಾಂತ್ರೀಕೃತ ಸ್ವಚ್ಛತಾ ಯಂತ್ರಗಳ’ ಬಳಕೆಗೆ ಚಾಲನೆ ನೀಡಲಾಗಿದೆ. ಕಸ ಗುಡಿಸುವ ಯಂತ್ರಗಳು, ಬ್ಲೋವರ್ ಮಷಿನ್, ರಸ್ತೆ ಕಸವನ್ನು ಶೇಖರಣೆ ಮಾಡಲು ಟ್ರಾಲಿ ಡಸ್ಟ್ ಬಿನ್‌ಗಳನ್ನೂ ಉಪಯೋಗಿಸಲಾಗುತ್ತದೆ. ಸುರಕ್ಷತಾ ದೃಷ್ಟಿಯಿಂದ ಟ್ರಾಫಿಕ್ ಕೋನ್‌ಗಳನ್ನು ಸಹ ಖರೀದಿಸಲಾಗಿದೆ’ ಎಂದರು.

ADVERTISEMENT

ಪೌರಕಾರ್ಮಿಕರು ಯಂತ್ರಗಳನ್ನು ಸದ್ಬಳಕೆ ಮಾಡಿಕೊಂಡು ಇನ್ನಷ್ಟು ಪರಿಣಾಮಕಾರಿಯಾಗಿ ಸ್ವಚ್ಛತಾ ಕಾರ್ಯ ನಡೆಸಬೇಕು. ಇದರ ಸಾಧಕ ಬಾಧಕಗಳನ್ನು ಗಮನಿಸಿ ಇನ್ನಷ್ಟು ಯಂತ್ರಗಳನ್ನು ಖರೀದಿಸಲು ಪ್ರಸ್ತಾವ ಸಲ್ಲಿಸಲಾಗುತ್ತದೆ ಎಂದು ನುಡಿದರು.

ಶೌಚಾಲಯ ಬಳಕೆ:

‘ಪೌರಕಾರ್ಮಿಕರು ಕರ್ತವ್ಯದ ವೇಳೆಯಲ್ಲಿ ಸಾರ್ವಜನಿಕ ಶೌಚಾಲಯಗಳು ಹತ್ತಿರದಲ್ಲಿ ಲಭ್ಯವಿರದ ಸಮಯದಲ್ಲಿ ಹೋಟೆಲ್‌ಗಳ ಶೌಚಾಲಯಗಳನ್ನು ಬಳಸಬಹುದು ಎಂದು ಈಗಾಗಲೇ ಸೂಚಿಸಲಾಗಿದೆ. ಹೋಟೆಲ್ ಮಾಲೀಕರ ಸಭೆ ನಡೆಸಿ ಪೌರಕಾರ್ಮಿಕರಿಗೆ ಶೌಚಾಲಯ ಬಳಸಲು ಅವಕಾಶ ನೀಡುವಂತೆ ಕೋರಲಾಗಿದೆ. ಆದರೆ, ಕೆಲವರು ಇದಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎನ್ನುವುದು ಗಮನಕ್ಕೆ ಬಂದಿದೆ. ಈ ವಿಷಯದಲ್ಲಿ ಯಾವುದೇ ತೊಂದರೆ ಉಂಟಾದರೂ ಹಿರಿಯ ಅಧಿಕಾರಿಗಳ ಗಮನಕ್ಕೆ ತರಬಹುದು’ ಎಂದರು.

ಗುತ್ತಿಗೆ ಅವಧಿ ಮುಗಿದಿದ್ದರೆ ಆಸ್ತಿ ವಶಕ್ಕೆ 

ಬೆಂಗಳೂರು ಕೇಂದ್ರ ನಗರ ಪಾಲಿಕೆಗೆ ಸೇರಿದ ಸ್ವತ್ತುಗಳನ್ನು ಗುತ್ತಿಗೆ ಆಧಾರದ ಮೇಲೆ ಸಾರ್ವಜನಿಕರಿಗೆ ಸಂಘ-ಸಂಸ್ಥೆಗಳಿಗೆ ನೀಡಿದ್ದು ಗುತ್ತಿಗೆ ಅವಧಿ ಮೀರಿರುವ ಆಸ್ತಿಗಳನ್ನು ಪಾಲಿಕೆ ವಶಕ್ಕೆ ತೆಗೆದುಕೊಳ್ಳುವಂತೆ ಆಯುಕ್ತ ರಾಜೇಂದ್ರ ಚೋಳನ್‌ ಸೂಚಿಸಿದರು. ಗುತ್ತಿಗೆ ಅವಧಿ ಮುಕ್ತಾಯಗೊಂಡ ಪ್ರಕರಣಗಳಲ್ಲಿ ನೋಟಿಸ್ ಜಾರಿ ಮಾಡಿ 15 ದಿನ ಅವಕಾಶ ನೀಡಬೇಕು. ಆ ಅವಧಿಯಲ್ಲಿ ಉತ್ತರ ಬಾರದಿದ್ದಲ್ಲಿ ಸ್ವತ್ತುಗಳನ್ನು ವಶಕ್ಕೆ ಪಡೆದುಕೊಳ್ಳಲು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಆದೇಶಿಸಿದರು. ಗುತ್ತಿಗೆ ಉದ್ದೇಶಕ್ಕೆ ಹೊರತುಪಡಿಸಿ ಇನ್ನಿತರೆ ವಾಣಿಜ್ಯ ಚಟುವಟಿಕೆಗಳಿಗೆ ಸ್ವತ್ತನ್ನು ಉಪಯೋಗಿಸುತ್ತಿದ್ದಲ್ಲಿ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಅರ್ಹ ಪ್ರಕರಣಗಳಲ್ಲಿ ಹೊಸ ಗುತ್ತಿಗೆ ದರದ ಅನ್ವಯ ಗುತ್ತಿಗೆ ಶುಲ್ಕ ನಿಗದಿಯೊಂದಿಗೆ ಜಾಗದ ಗುತ್ತಿಗೆ ಅವಧಿಯನ್ನು ನವೀಕರಿಸಬೇಕು ಎಂದರು. ನಗರ ಪಾಲಿಕೆಗೆ ಸೇರಿದ ಖಾಲಿ ಸ್ವತ್ತುಗಳನ್ನು ಗುರುತಿಸಿ ಅಂತಹ ಸ್ಥಳಗಳಲ್ಲಿ ನಗರ ಪಾಲಿಕೆಯ ಅಧಿಕಾರಿ ಹಾಗೂ ಸಿಬ್ಬಂದಿಗೆ ವಸತಿ ಗೃಹಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಬೇಕು. ಅಲ್ಲದೆ ವಾಣಿಜ್ಯ ಉದ್ದೇಶಕ್ಕೆ ಕಟ್ಟಡ ನಿರ್ಮಿಸಿದ್ದಲ್ಲಿ ಪಾಲಿಕೆಗೆ ಆದಾಯವೂ ಬರುತ್ತದೆ ಎಂದರು.

ಪಿಜಿ ಹೋಟೆಲ್‌ಗೆ ದಂಡ

ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯ ಪಿ.ಜಿ ಹಾಗೂ ಹೋಟೆಲ್‌ಗಳಲ್ಲಿ ಪರಿಶೀಲನೆ ಮುಂದುವರಿದಿದ್ದು ನಿಯಮ ಪಾಲಿಸದವರಿಂದ ₹257100 ದಂಡ ವಸೂಲಿ ಮಾಡಲಾಗಿದೆ ಎಂದು ಆಯುಕ್ತ ಕೆ.ಎನ್. ರಮೇಶ್ ತಿಳಿಸಿದರು. ಜಯನಗರ ಬೆಂಗಳೂರು ದಕ್ಷಿಣ ಬಿಟಿಎಂ ಲೇಔಟ್ ಹಾಗೂ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರಗಳಲ್ಲಿರುವ ಪೇಯಿಂಗ್ ಗೆಸ್ಟ್‌ (ಪಿಜಿ) ಹಾಗೂ ಹೋಟೆಲ್‌ಗಳಲ್ಲಿ ಶುದ್ಧ ಕುಡಿಯುವ ನೀರು ಶುಚಿತ್ವ ಅಡುಗೆ ಕೋಣೆ ನೈರ್ಮಲ್ಯ ಸುರಕ್ಷತೆ ಉತ್ತಮ ಶೌಚಾಲಯ ವ್ಯವಸ್ಥೆ ಅಗ್ನಿಶಾಮಕ ಸಾಧನಗಳು ಹಾಗೂ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಕೆ ಮತ್ತು ಆಹಾರ ಸುರಕ್ಷತಾ ಪ್ರಮಾಣ ಪತ್ರ ಇತ್ಯಾದಿ ಮೂಲಸೌಕರ್ಯಗಳ ಬಗ್ಗೆ ಪರಿಶೀಲನೆ ನಡೆಯಿತು. ನ್ಯೂನತೆಗಳು ಕಂಡುಬಂದಂತಹ ಉದ್ದಿಮೆಗಳಿಗೆ ನೋಟಿಸ್‌ ಜಾರಿ ಮಾಡಿ ನಿಯಮ ಉಲ್ಲಂಘಿಸಿದವರಿಗೆ ₹50600 ದಂಡ ವಿಧಿಸಲಾಗಿದೆ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.