ADVERTISEMENT

ಆಕರ್ಷಣೆಯ ಕೇಂದ್ರವಾದ ಕಮರ್ಷಿಯಲ್‌ ಸ್ಟ್ರೀಟ್‌- ಜಾಗತಿಕ ದರ್ಜೆ ರಸ್ತೆ ಅಭಿವೃದ್ಧಿ

ಬಾಕಿ ಕಾಮಗಾರಿ ಬೇಗ ಪೂರ್ಣಗೊಳಿಸಲು ಒತ್ತಾಯ

ಗುರು ಪಿ.ಎಸ್‌
Published 26 ಜುಲೈ 2021, 3:49 IST
Last Updated 26 ಜುಲೈ 2021, 3:49 IST
ನಗರದಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿ ಅಭಿವೃದ್ಧಿಪಡಿಸಿರುವ ಕಮರ್ಷಿಯಲ್ ಸ್ಟ್ರೀಟ್‌ ರಸ್ತೆಯ ನೋಟ -ಪ್ರಜಾವಾಣಿ ಚಿತ್ರ/ ರಂಜು ಪಿ
ನಗರದಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿ ಅಭಿವೃದ್ಧಿಪಡಿಸಿರುವ ಕಮರ್ಷಿಯಲ್ ಸ್ಟ್ರೀಟ್‌ ರಸ್ತೆಯ ನೋಟ -ಪ್ರಜಾವಾಣಿ ಚಿತ್ರ/ ರಂಜು ಪಿ   

ಬೆಂಗಳೂರು: ಶಿವಾಜಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಕಮರ್ಷಿಯಲ್‌ ಸ್ಟ್ರೀಟ್‌ ಈಗ ಜಾಗತಿಕ ದರ್ಜೆಯ ರಸ್ತೆಯಂತೆ ಕಂಗೊಳಿಸುತ್ತಿದೆ. ಆದರೆ, ರಸ್ತೆಯ ಕಾಮಗಾರಿ ಮುಕ್ತಾಯವಾಗುವುದಕ್ಕೂ ಮುನ್ನವೇ ಉದ್ಘಾಟನೆಯಾಗಿರುವುದರಿಂದ ಹಲವು ಸಮಸ್ಯೆಗಳು ಹಾಗೆಯೇ ಉಳಿದುಕೊಂಡಿವೆ.

ಸ್ಮಾರ್ಟ್‌ ಸಿಟಿ ಯೋಜನೆಯಡಿ ಕಮರ್ಷಿಯಲ್‌ ಸ್ಟ್ರೀಟ್‌ನ 458 ಮೀಟರ್‌ವರೆಗಿನ ಭಾಗವನ್ನು ಟೆಂಡರ್ ಶ್ಯೂರ್‌ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಇದಕ್ಕಾಗಿ ₹ 5.4 ಕೋಟಿ ವೆಚ್ಚ ಮಾಡಲಾಗಿದೆ. ವಿವಿಧ ಬಣ್ಣ ಮತ್ತು ವಿನ್ಯಾಸದ ಕಲ್ಲು ಹಾಸುಗಳನ್ನು ಅಳವಡಿಸಲಾಗಿರುವ ರಸ್ತೆ, ವಿಶಾಲವಾದ ಪಾದಚಾರಿ ಮಾರ್ಗಗಳು, ಹೊಸ ವಿನ್ಯಾಸದ ವಿದ್ಯುತ್ ಕಂಬಗಳು, ಆಲಂಕಾರಿಕ ಗಿಡಗಳು ಗಮನ ಸೆಳೆಯುತ್ತಿವೆ.

ಚರ್ಚ್‌ಸ್ಟ್ರೀಟ್‌ನಂತೆಯೇ ಅಂದವಾಗಿ ಕಾಣುತ್ತಿರುವ ಈ ರಸ್ತೆಯು ಹೊಸ ಅನುಭವವನ್ನು ನೀಡುತ್ತದೆ ಎಂದು ಸಾರ್ವಜನಿಕರು ಸಂತಸ ವ್ಯಕ್ತಪಡಿಸುತ್ತಾರೆ.

ADVERTISEMENT
ನಗರದಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿ ಅಭಿವೃದ್ಧಿಪಡಿಸಿರುವ ಕಮರ್ಷಿಯಲ್ ಸ್ಟ್ರೀಟ್‌ ರಸ್ತೆಯ ನೋಟ -ಪ್ರಜಾವಾಣಿ ಚಿತ್ರ/ ರಂಜು ಪಿ

ಒಂದು ವರ್ಷದಿಂದ (2020ರ ಮಾರ್ಚ್‌) ನಡೆಯುತ್ತಿದ್ದ ಕಾಮಗಾರಿ, ನಂತರ ಲಾಕ್‌ಡೌನ್‌ನಿಂದ ವ್ಯಾಪಾರ–ವಹಿವಾಟು ಕುಸಿದು ನಷ್ಟ ಕಂಡಿದ್ದ ವರ್ತಕರು, ಈಗ ವಿಶ್ವದರ್ಜೆಯಾಗಿ ಕಮರ್ಷಿಯಲ್‌ ಸ್ಟ್ರೀಟ್‌ ಮಾರ್ಪಾಡಾಗಿರುವುದನ್ನು ಕಂಡು ಖುಷಿಯಾಗಿದ್ದಾರೆ. ಸುಂದರ ರಸ್ತೆಯಿಂದಾಗಿ ತಮ್ಮ ವ್ಯಾಪಾರ–ವಹಿವಾಟು ಕೂಡಾ ಸುಧಾರಿಸಬಹುದು ಎಂಬ ಸಂತಸದಲ್ಲಿ ವರ್ತಕರು ಇದ್ದಾರೆ.

ನಗರದ ಪ್ರಮುಖ ಹಾಗೂ ಹಳೇಯ ವ್ಯಾಪಾರ ವಹಿವಾಟಿನ ತಾಣ ಎನಿಸಿರುವ ಈ ಪ್ರದೇಶ 150 ವರ್ಷಗಳ ಇತಿಹಾಸ ಹೊಂದಿದೆ. ಇಲ್ಲಿ ಇದುವರೆಗೂ ಈ ಮಟ್ಟದ ಪ್ರಮುಖ ಅಭಿವೃದ್ಧಿ ಕಾಮಗಾರಿಗಳು ನಡೆದಿರಲಿಲ್ಲ. ಸ್ವಾತಂತ್ರ್ಯ ಬಂದ ನಂತರ ಇದೇ ಮೊದಲ ಬಾರಿ ಮುಖ್ಯಮಂತ್ರಿಯೊಬ್ಬರು (ಬಿ.ಎಸ್. ಯಡಿಯೂರಪ್ಪ) ಕಮರ್ಷಿಯಲ್‌ ಸ್ಟ್ರೀಟ್‌ಗೆ ಭೇಟಿ ನೀಡಿ, ಮರು ಅಭಿವೃದ್ಧಿಗೆ ಚಾಲನೆ ನೀಡಿದ್ದಾರೆ ಎಂದು ಸ್ಮರಿಸುತ್ತಾರೆ ಸ್ಥಳೀಯರು.

ವಾಹನ ನಿಲುಗಡೆಯೇ ಸಮಸ್ಯೆ:ರಸ್ತೆಯಲ್ಲಿ ವಾಹನ ನಿಲುಗಡೆಗೆ ಅವಕಾಶ ನೀಡಬೇಕೆ, ಬೇಡವೇ ಎಂಬ ಬಗ್ಗೆ ಇನ್ನೂ ಚರ್ಚೆ ನಡೆಯುತ್ತಿದೆ. ವಾಹನ ನಿಲುಗಡೆಗೆ ಅವಕಾಶ ಇರುವ ಅಥವಾ ಇಲ್ಲದಿರುವ ಕುರಿತ ಮಾಹಿತಿ ಫಲಕಗಳನ್ನು ರಸ್ತೆಯಲ್ಲಿ ಅಳವಡಿಸಿಲ್ಲ. ಕೆಲವೊಮ್ಮೆ ವಾಹನಗಳನ್ನು ನಿಲ್ಲಿಸಲು ಅವಕಾಶ ನೀಡುತ್ತಾರೆ. ಮತ್ತೆ ಕೆಲವೇ ಹೊತ್ತಿನಲ್ಲಿ ‘ಅವಕಾಶ ಇಲ್ಲ’ ಎಂದು ಪೊಲೀಸರು ಹೇಳುತ್ತಿದ್ದಾರೆ. ಇದು ಸಾರ್ವಜನಿಕರಲ್ಲಿ ಮತ್ತು ವರ್ತಕರಲ್ಲಿ ಗೊಂದಲ ಮೂಡಿಸುತ್ತಿದೆ.

ರಸ್ತೆಯ ಬದಿಯಲ್ಲಿಯೇ ವಾಹನ ನಿಲ್ಲಿಸುವುದಕ್ಕೆ ವ್ಯವಸ್ಥೆ ಮಾಡಬೇಕು ಎಂದು ಕೆಲವರು ಸಲಹೆ ನೀಡಿದರು. ಇಲ್ಲಿ ವಾಹನ ನಿಲುಗಡೆಗೆ ಅವಕಾಶ ನೀಡಿದರೆ ರಸ್ತೆಯ ಸೌಂದರ್ಯವೇ ಹಾಳಾಗುತ್ತದೆ ಎಂಬುದು ಇನ್ನು ಕೆಲವರ ಅಭಿಪ್ರಾಯ.

‘ವಾಹನ ನಿಲುಗಡೆಯ ಸಮಸ್ಯೆ ಶೀಘ್ರದಲ್ಲಿಯೇ ಮುಕ್ತಾಯವಾಗಬಹುದು. ಸಣ್ಣ–ಪುಟ್ಟ ತೊಂದರೆಗಳೇನೇ ಇದ್ದರೂ ಗುಣಮಟ್ಟದ ಕಾಮಗಾರಿ ನಡೆದಿದೆ. ರಸ್ತೆಯ ಉಳಿದ ಭಾಗದಲ್ಲಿನ ಕಾಮಗಾರಿಯೂ ಬೇಗ ಪೂರ್ಣಗೊಂಡು, ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾದರೆ ಅನುಕೂಲವಾಗುತ್ತದೆ’ ಎಂದು ವರ್ತಕ ವಿಕ್ಟರ್‌ ಹೇಳಿದರು.

ಒಂದೇ ಮಳೆಗೆ ಹದಗೆಟ್ಟ ಪಾದಚಾರಿ ಮಾರ್ಗ

ಮುಖ್ಯಮಂತ್ರಿ ಯಡಿಯೂರಪ್ಪ ಅವರು ಉದ್ಘಾಟಿಸಿರುವ 500 ಮೀಟರ್‌ವರೆಗಿನ ರಸ್ತೆ ಮಾತ್ರ ಅಭಿವೃದ್ಧಿ ಹೊಂದಿದೆ. ಆದರೆ, ಅಕ್ಕ–ಪಕ್ಕದ ರಸ್ತೆಗಳಲ್ಲಿ ಅಭಿವೃದ್ಧಿ ಕಾರ್ಯ ಈಗಲೂ ನಡೆಯುತ್ತಿದೆ. ಬಿದ್ದ ಒಂದೇ ಜೋರು ಮಳೆಗೆ, ನಿರ್ಮಾಣ ಹಂತದಲ್ಲಿರುವ ರಸ್ತೆಗಳ ಪಾದಚಾರಿ ಮಾರ್ಗದಲ್ಲಿ ನೆಲಹಾಸುಗಳು ಕಿತ್ತು ಹೋಗಿವೆ.

ಕಾಮಗಾರಿ ಪ್ರಗತಿಯಲ್ಲಿರುವ ಕಮರ್ಷಿಯಲ್‌ ರಸ್ತೆಯ ಮತ್ತೊಂದು ಭಾಗದಲ್ಲಿ ಪಾದಚಾರಿ ಮಾರ್ಗವು ಮಳೆಯಿಂದ ಹಾಳಾಗಿರುವುದು ಪ್ರಜಾವಾಣಿ ಚಿತ್ರ

ಮಳೆಯ ನೀರು ಮಳಿಗೆಗಳ ಒಳಗೆ ನುಗ್ಗುತ್ತಿದೆ. ಕಮರ್ಷಿಯಲ್‌ ಸ್ಟ್ರೀಟ್‌ನ ಪೂರ್ಣ ಭಾಗ ಮತ್ತು ಅಕ್ಕ–ಪಕ್ಕದ ರಸ್ತೆಗಳ ಅಭಿವೃದ್ಧಿ ಕಾರ್ಯವೂ ಬೇಗ ಪೂರ್ಣಗೊಳ್ಳಬೇಕು ಎಂದು ವರ್ತಕರು ಒತ್ತಾಯಿಸುತ್ತಾರೆ.

ಸಾರ್ವಜನಿಕರು–ವರ್ತಕರು ಏನಂತಾರೆ ?

‘ಚರ್ಚ್‌ ಸ್ಟ್ರೀಟ್‌ನಲ್ಲಿ ಓಡಾಡಿದಂತಿದೆ’

ಕಮರ್ಷಿಯಲ್‌ ಸ್ಟ್ರೀಟ್‌ನಲ್ಲಿ ಓಡಾಡುತ್ತಿದ್ದರೆ, ಚರ್ಚ್‌ಸ್ಟ್ರೀಟ್‌ನಲ್ಲಿ ಓಡಾಡಿದಂತೆ ಭಾಸವಾಗುತ್ತದೆ. ಉತ್ತಮವಾಗಿ ಅಭಿವೃದ್ಧಿ ಪಡಿಸಿದ್ದಾರೆ. ಖರೀದಿಗೆ ಹೆಚ್ಚು ಆಯ್ಕೆಗಳು ಇಲ್ಲಿವೆ.

- ಸ್ಫೂರ್ತಿ, ಗ್ರಾಹಕಿ

***

‘ವಿಶಾಲ ಫುಟ್‌ಪಾತ್‌ನಿಂದ ಖುಷಿ’

ಮೊದಲು ಈ ರಸ್ತೆ ತುಂಬಾ ಇಕ್ಕಟ್ಟಾಗಿತ್ತು. ಓಡಾಡುವುದಕ್ಕೇ ಆಗುತ್ತಿರಲಿಲ್ಲ. ಈಗ ಪಾದಚಾರಿ ಮಾರ್ಗಗಳು ವಿಶಾಲವಾಗಿದ್ದು, ಓಡಾಡಲು, ಶಾಪಿಂಗ್ ಮಾಡಲು ಖುಷಿ ಎನಿಸುತ್ತದೆ.

- ದೀಪಿಕಾ, ಗ್ರಾಹಕಿ

***

‘ಪರ್ಯಾಯ ವ್ಯವಸ್ಥೆ ಆಗಲಿ’

ರಸ್ತೆಗಿಂತ ಸ್ವಲ್ಪ ದೂರದಲ್ಲಿ ವಾಹನ ನಿಲುಗಡೆಗೆ ಅವಕಾಶ ಮಾಡಿಕೊಟ್ಟು, ಅಲ್ಲಿಂದ ಎಲೆಕ್ಟ್ರಿಕ್‌ ವಾಹನದಲ್ಲಿ ಹಿರಿಯರನ್ನು ಕರೆತರುವ ವ್ಯವಸ್ಥೆ ಮಾಡಿದರೆ ಅನುಕೂಲವಾಗುತ್ತದೆ

‌- ಅಜಿತ್, ಗ್ರಾಹಕ

***

‘ಸರ್ಕಾರಕ್ಕೆ ಧನ್ಯವಾದ’

ಕಮರ್ಷಿಯಲ್‌ ಸ್ಟ್ರೀಟ್‌ ಅನ್ನು ವಿಶ್ವದರ್ಜೆಯ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಿರುವ ರಾಜ್ಯ ಸರ್ಕಾರಕ್ಕೆ ಅಭಿನಂದನೆ. ವ್ಯಾಪಾರ–ವಹಿವಾಟು ಹೆಚ್ಚಾಗುವ ನಿರೀಕ್ಷೆ ಇದ್ದು, ವರ್ತಕರೆಲ್ಲ ಸಂತಸಗೊಂಡಿದ್ದಾರೆ

- ಸಂಜಯ್‌ ಮೋಟ್ವಾನಿ, ಕಮರ್ಷಿಯಲ್‌ ಸ್ಟ್ರೀಟ್‌ ಅಸೋಸಿಯೇಷನ್ ಅಧ್ಯಕ್ಷ

***

‘ರಸ್ತೆಯ ಒಂದು ಪಾರ್ಶ್ವದಲ್ಲಿ ನಿಲುಗಡೆ ಇರಲಿ’

ರಸ್ತೆಯ ಉಳಿದ ಕಾಮಗಾರಿಯೂ ಬೇಗ ಮುಗಿಯಬೇಕು. ಈ ಮೊದಲಿನಂತೆ, ರಸ್ತೆಯ ಒಂದು ಬದಿಯಾದರೂ ವಾಹನ ನಿಲುಗಡೆಗೆ ಅವಕಾಶ ನೀಡಿದರೆ ಅನುಕೂಲವಾಗುತ್ತದೆ

- ಗೋಪಿ, ಪ್ರೆಸ್ಟೀಜ್ ಮಳಿಗೆ ವ್ಯವಸ್ಥಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.