ADVERTISEMENT

ಪತ್ನಿ ಹತ್ಯೆಗೆ ₹5 ಲಕ್ಷ ಸುಪಾರಿ: ಪತಿ ಸೇರಿ ಮೂವರ ಬಂಧನ

ಕಿಟಕಿ ಸರಳು ಮುರಿದು ಒಳನುಗ್ಗಿ ಕೃತ್ಯ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2019, 2:09 IST
Last Updated 24 ಡಿಸೆಂಬರ್ 2019, 2:09 IST
ಜಗನ್ನಾಥ್, ಪ್ರಶಾಂತ್, ನರೇಂದ್ರಬಾಬು
ಜಗನ್ನಾಥ್, ಪ್ರಶಾಂತ್, ನರೇಂದ್ರಬಾಬು   

ಬೆಂಗಳೂರು: ವೈಯಾಲಿಕಾವಲ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ವಿನುತಾ (34) ಎಂಬುವರ ಕೊಲೆ ಪ್ರಕರಣ ಸಂಬಂಧ, ಅವರ ಪತಿ ನರೇಂದ್ರಬಾಬು ಹಾಗೂ ಆತನ ಇಬ್ಬರು ಸ್ನೇಹಿತರನ್ನು ಪೊಲೀಸರು ಬಂಧಿಸಿದ್ದಾರೆ.

‘ಸಂಬಂಧಿಕರೇ ಆಗಿದ್ದ ವಿನುತಾ ಹಾಗೂ ನರೇಂದ್ರಬಾಬು 12 ವರ್ಷಗಳ ಹಿಂದೆ ಮದುವೆ ಆಗಿದ್ದರು. ದಂಪತಿಗೆ ಮಗು ಇದೆ. ಕೌಟುಂಬಿಕ ಹಾಗೂ ಆಸ್ತಿ ಕಲಹದಿಂದಾಗಿ ದಂಪತಿ ಪ್ರತ್ಯೇಕವಾಗಿ ವಾಸವಿದ್ದರು. ಇದರ ನಡುವೆಯೇನರೇಂದ್ರ ಬಾಬು ₹5 ಲಕ್ಷ ಸುಪಾರಿ ಕೊಟ್ಟು ಪತ್ನಿಯನ್ನು ಹತ್ಯೆ ಮಾಡಿಸಿದ್ದಾನೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ವೈಯಾಲಿಕಾವಲ್‌ನ ಮನೆಯಲ್ಲಿ ವಿನುತಾ ಒಬ್ಬಂಟಿ ಆಗಿ ನೆಲೆಸಿದ್ದರು. ಅವರು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟ ಬಗ್ಗೆ ಸಂಬಂಧಿಕರು ದೂರು ನೀಡಿದ್ದರು. ತನಿಖೆ ಕೈಗೊಂಡಾಗ ಪತಿಯ ಕೃತ್ಯ ಬಯಲಾಯಿತು’ ಎಂದರು.

ADVERTISEMENT

ಕಿಟಕಿ ಸರಳು ಮುರಿದು ಒಳನುಗ್ಗಿ ಕೃತ್ಯ: ‘ದಂಪತಿ ನಡುವೆ ವಿಚ್ಛೇದನ ಹಾಗೂ ಆಸ್ತಿ ಸಂಬಂಧ 10ಕ್ಕೂ ಹೆಚ್ಚು ಪ್ರಕರಣಗಳಿವೆ. ಠಾಣೆಯಲ್ಲೂ ದಂಪತಿ ನಡುವೆ ರಾಜಿ ಸಂಧಾನ ನಡೆದಿತ್ತು. ನ್ಯಾಯಾಲಯದಲ್ಲೂ ಕೆಲ ಪ್ರಕರಣಗಳ ವಿಚಾರಣೆ ನಡೆಯುತ್ತಿದೆ. ಮಗು ಅಜ್ಜಿ ಮನೆಯಲ್ಲಿ ಬೆಳೆಯುತ್ತಿದೆ’ ಎಂದು ಅಧಿಕಾರಿ ಹೇಳಿದರು.

‘ಪತ್ನಿಯನ್ನು ಕೊಲೆ ಮಾಡಲು ತೀರ್ಮಾನಿಸಿದ್ದ ನರೇಂದ್ರಬಾಬು (39), ಸ್ನೇಹಿತರಾದ ಹೊಸಕೋಟೆಯ ಪ್ರಶಾಂತ್ ಹಾಗೂ ಹೆಬ್ಬಾಳ ಕೆಂಪಾಪುರದ ಜಗನ್ನಾಥ್ (27) ಜೊತೆ ಸೇರಿ ಸಂಚು ರೂಪಿಸಿದ್ದ. ₹5 ಲಕ್ಷ ಸುಪಾರಿ ನೀಡುವುದಾಗಿ ಹೇಳಿದ್ದ’ ಎಂದರು.

‘ಶುಕ್ರವಾರ (ಡಿ. 20) ವಿನುತಾ ಮನೆಯಿಂದ ಹೊರಗೆ ಹೋಗಿದ್ದರು. ಅದೇ ಸಂದರ್ಭದಲ್ಲೇ ಆರೋಪಿಗಳು ಕಿಟಕಿಯ ಸರಳು ಮುರಿದು ಮನೆಯೊಳಗೆ ಹೋಗಿ ಅವಿತುಕೊಂಡು ಕುಳಿತಿದ್ದರು. ವಿನುತಾ ಮಧ್ಯಾಹ್ನ ಮನೆಗೆ ವಾಪಸು ಬಂದಿದ್ದರು. ಬಾಗಿಲು ತೆರೆದು ಒಳಗೆ ಹೋಗುತ್ತಿದ್ದಾಗಲೇ ತಲೆಗೆ ಮರದ ದೊಣ್ಣೆಯಿಂದ ಹೊಡೆದು ಆರೋಪಿಗಳು ಕೊಲೆ ಮಾಡಿದ್ದರು’ ಎಂದು ಅಧಿಕಾರಿ ಹೇಳಿದರು.

‘ಬಂಧಿತ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ ಒಳಪಡಿಸಲಾಗಿದೆ. ಪ್ರಕರಣದಲ್ಲಿ ಮತ್ತಷ್ಟು ಮಂದಿ ಶಾಮೀಲಾಗಿರುವ ಅನುಮಾನವಿದೆ. ತನಿಖೆ ಮುಂದುವರೆದಿದೆ’ ಎಂದು ಹೇಳಿದರು.

ಮನೆ ಮೇಲೆಯೇ ವಾಸವಿದ್ದ ಆರೋಪಿ

‘ಬಂಧಿತ ಆರೋಪಿ ಪ್ರಶಾಂತ್, ಆಟೊ ಚಾಲಕ. ವಿನುತಾ ಅವರ ಮನೆಯ ಮೇಲಿನ ಕೊಠಡಿಯಲ್ಲೇ ಆತ ವಾಸವಿದ್ದ. ಮತ್ತೊಬ್ಬ ಆರೋಪಿ ಜಗನ್ನಾಥ್ ಸಹ ಆಟೊ ಚಾಲಕ’ ಎಂದು ಕೇಂದ್ರ ವಿಭಾಗದ ಡಿಸಿಪಿ ಚೇತನ್‌ಸಿಂಗ್ ರಾಥೋಡ್ ಹೇಳಿದರು.

‘ವಿನುತಾ ಸಾವಿನ ಸಂಬಂಧ ಅಕ್ಕ–ಪಕ್ಕದ ಮನೆಯವರ ಬಳಿ ವಿಚಾರಿಸಲಾಗಿತ್ತು. ಅವರೇ ಪ್ರಶಾಂತ್ ಬಗ್ಗೆ ಸುಳಿವು ನೀಡಿದ್ದರು. ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.