ADVERTISEMENT

ರೈಸ್‌ ಪುಲ್ಲಿಂಗ್‌: ಬಂಧನ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2020, 19:27 IST
Last Updated 5 ಫೆಬ್ರುವರಿ 2020, 19:27 IST

ಬೆಂಗಳೂರು: ‘ರೈಸ್ ಪುಲ್ಲಿಂಗ್’ ಹೆಸರಿನಲ್ಲಿ ಲಕ್ಷಾಂತರ ಹಣ ಪಡೆದು ವಂಚಿಸುತ್ತಿದ್ದ ಅಂತರರಾಜ್ಯ ತಂಡದ ಮೂವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಪುಣೆಯ ಸಂಗೀತ ವಿಕಾಸ್‌ ಕುಕಾಸ್‌, ಚಂದ್ರಕಾಂತ ಬನ್ಸಿಲಾಲ್ ದುಷಿಯಾ, ರಾಕೇಶ್ ಪಿ. ಬನ್ಸೋಡೆ ಬಂಧಿತರು. ತಂಡದ ಪ್ರಮುಖ ಆರೋಪಿ ಸಿದ್ದೇಶ್ವರ ಸೋನ್‌ ಕಾಂಬ್ಳೆ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದರು.

ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಲ್ಲಿ ‘ರೈಸ್‌ ಪುಲ್ಲರ್‌’ ಎಂದು ವಸ್ತುವೊಂದನ್ನು ತೋರಿಸಿ, ಆ ವಸ್ತುವನ್ನು ಕೋಟ್ಯಂತರ ಹಣ ನೀಡಿ ವಿದೇಶದಿಂದ ಖರೀದಿಸಿರುವುದಾಗಿ ಆರೋಪಿಗಳು ನಂಬಿಸುತ್ತಿದ್ದರು. ಅದನ್ನು ವಿಜ್ಞಾನಿಗಳಿಂದ ಪರೀಕ್ಷಿಸಬೇಕೆಂದು ಹೇಳಿ, ಅವರದೇ ತಂಡದ ಇತರ ಆರೋಪಿಗಳು ವಿಜ್ಞಾ
ನಿಗಳಂತೆ ನಟಿಸುತ್ತಿದ್ದರು. ಬಳಿಕ, ರೇಡಿಯೇಷನ್‌ ಸ್ಕ್ಯಾನರ್‌ ಮೂಲಕ ಈ ನಕಲಿ ವಸ್ತುವನ್ನು ಪರೀಕ್ಷಿಸಿದಂತೆ ಮಾಡಿ, ನೈಜತೆಯಿಂದ ಕೂಡಿದೆ ಎಂದು ಹೇಳುತ್ತಿದ್ದರು.

ADVERTISEMENT

‘ಈ ವಸ್ತುವನ್ನು ವಿದೇಶಿ ಕಂಪನಿಗೆ ಮಾರಾಟ ಮಾಡುತ್ತೇವೆ. ಹಣ ಬಂದ ನಂತರ, ನೀಡುವುದಾಗಿ ಅದಕ್ಕೆ ನಕಲಿ ಕಂಪನಿಯ ನಕಲಿ ಪತ್ರಗಳನ್ನು ಸೃಷ್ಟಿಸುತ್ತಿದ್ದರು. ರೈಸ್‌ ಪುಲ್ಲರ್‌ ವಸ್ತುವನ್ನು ತಪಾಸಣೆ ನಡೆಸಿದ ಶುಲ್ಕ ಎಂದು ಒಂದು ಬಾರಿಗೆ ₹ 25 ಲಕ್ಷದಿಂದ ₹ 1 ಕೋಟಿವರೆಗೆ ಸಾರ್ವಜನಿಕರಿಂದ ಪಡೆದು ಆರೋಪಿಗಳು ವಂಚಿಸುತ್ತಿದ್ದರು’ ಎಂದೂ ತಿಳಿಸಿದರು.

‘ಈ ಕೃತ್ಯಕ್ಕೆ ಸಾರ್ವಜನಿಕರನ್ನು ನಂಬಿಸಲು ಆರೋಪಿಗಳ ಪೈಕಿ ಒಬ್ಬ ವಿದೇಶಿ ಕಂಪನಿಯ ಪ್ರತಿನಿಧಿಯಂತೆ ನಟಿಸುತ್ತಿದ್ದ. ಮತ್ತೊಬ್ಬ ವಿಜ್ಞಾನಿಯಂತೆ ನಟಿಸುತ್ತಿದ್ದ. ಅದೇ ತಂಡದ ಇನ್ನೊಬ್ಬ ವ್ಯಕ್ತಿ ಗನ್‌ಮ್ಯಾನ್‌ನಂತೆ ವೇಷಭೂಷಣ ಧರಿಸಿ, ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ. ವಿಮಾನ ಮೂಲಕ ಬಂದುಹೋಗುವ ರೀತಿಯಲ್ಲಿ ವಂಚಕರು ವರ್ತಿಸುತ್ತಿದ್ದರು. ಬಂಧಿತ ಮಹಿಳೆಯನ್ನು ವಿಚಾರಣೆ ನಡೆಸಲಾಗುತ್ತಿದೆ’ ಎಂದು‌ ‌ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.