ADVERTISEMENT

ತಾಯಿ ಹತ್ಯೆ: ಅಂಡಮಾನ್‌ಗೆ ತೆರಳಿದ್ದ ಮಗಳು, ಪ್ರಿಯಕರನ ಬಂಧನ

‘ಪ್ರೇಮ’ವೇ ಕೊಲೆಗೆ ಕಾರಣ?

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2020, 19:39 IST
Last Updated 5 ಫೆಬ್ರುವರಿ 2020, 19:39 IST
ಅಮೃತಾ
ಅಮೃತಾ   

ಬೆಂಗಳೂರು:‌ ಅಮ್ಮನನ್ನು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ಅಮೃತಾಳನ್ನು ಆಕೆಯ ಪ್ರಿಯಕರನ ಜೊತೆ ಅಂಡಮಾನ್ ನಿಕೋಬಾರ್‌ನ ಪೋರ್ಟ್‌ ಬ್ಲೇರ್‌ನಲ್ಲಿ ಕೆ.ಆರ್. ಪುರ ಪೊಲೀಸರು ಬಂಧಿಸಿದ್ದಾರೆ.

ಕೆ.ಆರ್. ಪುರದ ಅಕ್ಷಯನಗರ ನಿವಾಸಿ ಅಮೃತಾ (32) ಮತ್ತು ಶ್ರೀಧರ್ ರಾವ್ (35) ಬಂಧಿತರು.

ಪೊಲೀಸರನ್ನು ಇಬ್ಬರನ್ನೂ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿ, ನಗರಕ್ಕೆ ಗುರುವಾರ ಕರೆದುಕೊಂಡು ಬರಲಿದ್ದಾರೆ.

ADVERTISEMENT

‘ಫೆ. 2ರಂದು ನಸುಕಿನಲ್ಲಿ ನಿದ್ದೆಯಲ್ಲಿದ್ದ ತಾಯಿ ನಿರ್ಮಲಾ ಅವರನ್ನು ಕೊಲೆ ಮಾಡಿ, ಕೊಠಡಿಯಲ್ಲಿದ್ದ ಸಹೋದರ ಹರೀಶ್‍ ಅವರ ಹತ್ಯೆಗೆ ಯತ್ನಿಸಿದ್ದ ಅಮೃತಾ, ಬಳಿಕ ಶ್ರೀಧರ್ ಜತೆ ಪರಾರಿಯಾಗಿದ್ದಳು. ಈ ಕೃತ್ಯಕ್ಕೆ ಅಮೃತಾ ಮತ್ತು ಶ್ರೀಧರ್‌ ನಡುವಿನ ಪ್ರೇಮ ಪ್ರಕರಣವೇ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಆದರೂ, ಆರೋಪಿಗಳ ವಿಚಾರಣೆ ನಡೆಸಿದಾಗ ಸ್ಪಷ್ಟ ಕಾರಣ ಗೊತ್ತಾಗಲಿದೆ’ ಎಂದು ಪೊಲೀಸರು ತಿಳಿಸಿದರು.

‘ದಾವಣಗೆರೆಯ ನಿರ್ಮಲಾ ಕೆಲವು ವರ್ಷಗಳಿಂದ ಅಮೃತಾ ಮತ್ತು ಹರೀಶ್ ಜತೆ ಅಕ್ಷಯನಗರದಲ್ಲಿ ವಾಸವಾಗಿದ್ದರು. ಮಾರತ್ತಹಳ್ಳಿಯ ಕಂಪನಿಯೊಂದರಲ್ಲಿ ಅಮೃತಾ ಸಾಫ್ಟ್‌ವೇರ್‌ ಎಂಜಿನಿಯರ್. ಆಕೆಯ ಸಹೋದರ ಹರೀಶ್ ಕೂಡಾ ಸಾಫ್ಟ್‌ವೇರ್‌ ಎಂಜಿನಿಯರ್ ಆಗಿದ್ದರು. 10 ತಿಂಗಳ ಹಿಂದೆ ಅಮೃತಾ ಕೆಲಸ ಮಾಡುತ್ತಿದ್ದ ಕಂಪನಿ ಬದಲಿಸಿದ್ದು, ಮನೆಯಲ್ಲೇ ಕುಳಿತು ಲ್ಯಾಪ್‍ಟಾಪ್‍ನಲ್ಲಿ ಕೆಲಸ ಮಾಡುವುದಾಗಿ ತಾಯಿ ಬಳಿ ಹೇಳಿಕೊಂಡಿದ್ದಳು. ಆದರೆ, ಕೆಲಸ ಮಾಡದೆ ಸ್ನೇಹಿತರ ಜತೆ ಚಾಟಿಂಗ್ ಮಾಡುತ್ತಿದ್ದಳು. ಆದರೆ, ಪ್ರತಿ ತಿಂಗಳು ಮನೆಗೆ ಹಣ ಕೊಡುತ್ತಿದ್ದಳು. ಹೀಗೆ ಕೊಡುತ್ತಿದ್ದ ಹಣ ಸಂಬಳವೇ ಅಥವಾ ಸಾಲದ ಪಡೆದ ಹಣವೇ ಎನ್ನುವುದು ಗೊತ್ತಾಗಿಲ್ಲ’ ಎಂದು ಪೊಲೀಸರು ಹೇಳಿದರು.

ವಿಮಾನ ನಿಲ್ದಾಣ ಬಳಿ ಬೈಕ್ ಪತ್ತೆ

‘ಕೃತ್ಯದ ಬಳಿಕ ಬ್ಯಾಗ್ ಸಹಿತ ಮನೆಯಿಂದ ಹೊರಟ ಅಮೃತಾ, ಮನೆ ಸಮೀಪದ ಬೈಕಿನಲ್ಲಿ ಬಂದ ಪ್ರಿಯಕರ ಶ್ರೀಧರ್ ರಾವ್ ಜತೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗಿದ್ದಾಳೆ. ಬೆಂಗಳೂರಿನಿಂದ ಅಂಡಮಾನ್‍ಗೆ 6.30ಕ್ಕೆ ಹೊರಟ ವಿಮಾನದಲ್ಲಿ ಇಬ್ಬರೂ ತೆರಳಿದ್ದಾರೆ. ಶ್ರೀಧರ್ ಚಲಾಯಿಸಿದ ಬೈಕ್ ವಿಮಾನ ನಿಲ್ದಾಣದ ಬಳಿ ಪತ್ತೆಯಾಗಿದೆ’ ಎಂದು ಪೊಲೀಸರು ಹೇಳಿದರು.

ಹೈದರಬಾದ್‌ ಬದಲು ಅಂಡಮಾನ್‌ಗೆ!

ಪ್ರಾಥಮಿಕ ವಿಚಾರಣೆ ವೇಳೆ ಹರೀಶ್‌, ‘ತಾಯಿ ಮತ್ತು ನನ್ನನ್ನು ಫೆ. 2ರಂದು ಬೆಳಿಗ್ಗೆ ಹೈದರಬಾದ್‍ಗೆ ಕರೆದುಕೊಂಡು ಹೋಗುವುದಾಗಿ ಅಮೃತಾ ಹೇಳಿದ್ದಳು’ ಎಂದು ಪೊಲೀಸರಿಗೆ ತಿಳಿಸಿದ್ದರು. ಆದರೆ, ಹೈದರಾಬಾದ್‍ಗೆ ತೆರಳಲು ಅಮೃತಾ ಟಿಕೆಟ್ ಕಾದಿರಿಸಿರಲಿಲ್ಲ. ಅದರ ಬದಲು, ತನಗೆ ಮತ್ತು ಪ್ರಿಯಕರನಿಗೆ ಅಂಡಮಾನ್‍ಗೆ ತೆರಳಲು ಟಿಕೆಟ್ ಮಾಡಿದ್ದಳು. ಈ ವಿಷಯ ಗೊತ್ತಾಗುತ್ತಿದ್ದಂತೆ ಅಂಡಮಾನ್‍ಗೆ ತೆರಳಿದ ಕೆ.ಆರ್. ಪುರ ಠಾಣೆ ಇನ್‌ಸ್ಪೆಕ್ಟರ್‌ ಅಂಬರೀಷ್‌, ವಿಮಾನ ನಿಲ್ದಾಣ ಸಮೀಪದಲ್ಲೇ ಇಬ್ಬರನ್ನು ಬಂಧಿಸಿದ್ದಾರೆ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.