ADVERTISEMENT

ಬೆಂಗಳೂರು ಡೇರಿ ಆಡಳಿತ ಮಂಡಳಿ: ಎಂ.ಡಿ ಮರುನೇಮಕ ಪ್ರಸ್ತಾವಕ್ಕೆ ಆಕ್ಷೇಪ

ಮುಖ್ಯಮಂತ್ರಿ ನಿರ್ದೇಶನಕ್ಕೂ ಬೆಲೆ ನೀಡದ ಬೆಂಗಳೂರು ಡೇರಿ ಆಡಳಿತ ಮಂಡಳಿ– ಆರೋಪ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2019, 20:00 IST
Last Updated 4 ಮಾರ್ಚ್ 2019, 20:00 IST
   

ಬೆಂಗಳೂರು: ಮೇ 31ರಂದು ವಯೋ ನಿವೃತ್ತಿ ಹೊಂದಲಿರುವ ಬೆಂಗಳೂರು ಡೇರಿ ವ್ಯವಸ್ಥಾಪಕ ನಿರ್ದೇಶಕ (ಎಂ.ಡಿ) ಡಿ.ಸಿ. ನಾಗರಾಜಯ್ಯ ಅವರನ್ನು ಎರಡು ವರ್ಷ ಅವಧಿಗೆ ಮರುನೇಮಕ ಮಾಡಿಕೊಳ್ಳುವ ಆಡಳಿತ ಮಂಡಳಿ ಪ್ರಸ್ತಾವ ವಿವಾದಕ್ಕೆ ಕಾರಣವಾಗಿದೆ.

ಮರು ನೇಮಕ ಪ್ರಸ್ತಾವ ಮಂಗಳವಾರ (ಮಾರ್ಚ್‌ 5) ನಡೆಯಲಿರುವ ಆಡಳಿತ ಮಂಡಳಿ ಸಭೆಯಲ್ಲಿ ನಿರ್ದೇಶಕರ ಮಧ್ಯೆ ಬಿಸಿಬಿಸಿ ಚರ್ಚೆಗೆ ವಸ್ತುವಾಗುವ ಸಾಧ್ಯತೆ ಇದೆ.

ಈ ಪ್ರಸ್ತಾವದ ವಿರುದ್ಧ ಆಡಳಿತ ಮಂಡಳಿಯ ಚುನಾಯಿತ ನಿರ್ದೇಶಕ ಪಂಚಲಿಂಗಯ್ಯ ಅವರು ಫೆ. 19ರಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಫೆ. 21 ಪತ್ರ ಬರೆದಿರುವ ಮುಖ್ಯಮಂತ್ರಿ, ನಾಗರಾಜಯ್ಯ ಅವರ ಮರು ನೇಮಿಸುವ ಮಂಡಳಿಯ ನಿರ್ಣಯವನ್ನು ಅಂಗೀಕರಿಸದಂತೆ ಸಂಬಂಧಪಟ್ಟವರಿಗೆ ಸೂಚಿಸುವಂತೆ ತಿಳಿಸಿದ್ದಾರೆ.

ADVERTISEMENT

‘ನಾಗರಾಜಯ್ಯ ಅವರನ್ನು ಮರುನೇಮಕ ಮಾಡುವುದು ಸೂಕ್ತವಲ್ಲ. ಅವರ ಬದಲು ಬೆಂಗಳೂರು ಸಹಕಾರ ಹಾಲು ಒಕ್ಕೂಟದ ಅಥವಾ ಕರ್ನಾಟಕ ಹಾಲು ಮಹಾಮಂಡಲದ (ಕೆಎಂಎಫ್‌) ಹಿರಿಯ ಅಧಿಕಾರಿಯನ್ನು ಆ ಹುದ್ದೆಗೆ ನೇಮಿಸಲು ಕ್ರಮ ತೆಗೆದುಕೊಳ್ಳಬೇಕು’ ಎಂದೂ ತಮ್ಮ ಪತ್ರದಲ್ಲಿ ಮುಖ್ಯಮಂತ್ರಿ ತಿಳಿಸಿದ್ದಾರೆ. ಮುಖ್ಯಮಂತ್ರಿಯ ಈ ನಿರ್ದೇಶನಕ್ಕೂ ಬೆಲೆ ನೀಡದೆ ಕರ್ತವ್ಯದಲ್ಲಿ ಮುಂದುವರಿಸುವ ಕುರಿತಂತೆ ಮಂಡಳಿ ಸಭೆಗೆ ಪ್ರಸ್ತಾವ ಮಂಡಿಸಿರುವುದಕ್ಕೆ ಆಡಳಿತ ಮಂಡಳಿಯಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಈ ಸಂಬಂಧ ಡೇರಿಯ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದಿರುವ ಪಂಚಲಿಂಗಯ್ಯ, ‘ನಾಗರಾಜಯ್ಯ ಮರುನೇಮಕ ಕ್ರಮವನ್ನು ವಿರೋಧಿಸಬೇಕು’ ಎಂದು ಮನವಿ ಮಾಡಿದ್ದಾರೆ.

‘ನಿವೃತ್ತಿ ಹೊಂದುತ್ತಿರುವ ನಾಗರಾಜಯ್ಯ ಅವರನ್ನು ಮರುನೇಮಕ ಮಾಡುವ ಕುರಿತು ಜನವರಿ ತಿಂಗಳ ಕೊನೆಯಲ್ಲಿ ನಡೆದ ಆಡಳಿತ ಮಂಡಳಿಯ ಸಭಾ ನಡಾವಳಿಯಲ್ಲಿ ದಾಖಲಿಸಲಾಗಿದೆ. ಆದರೆ, ಸಭೆಯ ಕಾರ್ಯಸೂಚಿಯಲ್ಲೇ ಈ ವಿಷಯ ಇರಲಿಲ್ಲ. ಅಲ್ಲದೆ, ಸಭೆಯಲ್ಲೂ ಚರ್ಚಿಸಿಲ್ಲ’ ಎಂದು ಅಧಿಕಾರಿಗಳಿಗೆ ಬರೆದ ಪತ್ರದಲ್ಲಿ ಅವರು ಉಲ್ಲೇಖಿಸಿದ್ದಾರೆ.

‘ಮಂಡಳಿಯ ಅಧ್ಯಕ್ಷರಾದ ಆಂಜನಪ್ಪ ಮತ್ತು ಕೆಎಂಎಫ್‌ ಪದಚ್ಯುತ ಅಧ್ಯಕ್ಷ ಪಿ. ನಾಗರಾಜು ಅವರ ನೆರವಿನಿಂದ ಮತ್ತೆ ಅದೇ ಹುದ್ದೆಯಲ್ಲಿ ಮುಂದುವರಿಯಲು ನಾಗರಾಜಯ್ಯ ಮುಂದಾಗಿದ್ದಾರೆ. ಮಂಡಳಿ ಸಭೆಯಲ್ಲಿ ಚರ್ಚೆ ನಡೆಯದ ಅನೇಕ ವಿಚಾರಗಳನ್ನು ನಂತರ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು ಸಭಾ ನಡಾವಳಿಯಲ್ಲಿ ಸೇರಿಸಿರುವುದನ್ನು ಆರಂಭದಿಂದಲೂ ನಾನು ವಿರೋಧಿಸಿದ್ದೇನೆ’

‘ಅನೈತಿಕ ಮಾರ್ಗದಲ್ಲಿ ನಾಗರಾಜಯ್ಯ ಅವರನ್ನು ಮುಂದುವರಿಸುವುದು ಯಾವ ನ್ಯಾಯ’ ಎಂದೂ ಅವರು ಪತ್ರದಲ್ಲಿ ‍ಪ್ರಶ್ನಿಸಿದ್ದಾರೆ.

* ಮರು ನೇಮಕ ಪ್ರಸ್ತಾವ ಅಕ್ರಮವಾಗಿದೆ. ಮಂಗಳವಾರ ನಡೆಯಲಿರುವ ಆಡಳಿತ ಮಂಡಳಿ ಸಭೆಯೂ ಕಾನೂನುಬಾಹಿರವಾಗಿದೆ. ಹೀಗಾಗಿ, ನಾನು ಭಾಗವಹಿಸುವುದಿಲ್ಲ

- ಪಂಚಲಿಂಗಯ್ಯ, ಬೆಂಗಳೂರು ಡೇರಿ ಆಡಳಿತ ಮಂಡಳಿ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.