
ಬೆಂಗಳೂರು: ಬೆಂಗಳೂರು ನಗರದ ತಿಗಳರಪೇಟೆಯಲ್ಲಿರುವ ಧರ್ಮರಾಯಸ್ವಾಮಿ ದೇವಾಲಯಕ್ಕೆ ಹರಕೆಯಾಗಿ ಬಂದಿದ್ದ ನೆಕ್ಲೆಸ್ ಅನ್ನು ಕೊಂಡೊಯ್ದಿದ್ದ ಅಧಿಕಾರಿಯನ್ನು ಅಮಾನತುಗೊಳಿಸಿ ಹಿಂದೂ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಶ್ರೀ ರಾಯ ರಾಯ ಸಮೂಹ ದೇವಾಲಯಗಳ ಕಾರ್ಯನಿರ್ವಾಹಕ ಅಧಿಕಾರಿ (ಇಒ) ಕೆ. ನಾಗರಾಜು ಅವರ ಆಡಳಿತ ವ್ಯಾಪ್ತಿಯಲ್ಲಿ ಧರ್ಮರಾಯಸ್ವಾಮಿ ದೇವಾಲಯ ಇದೆ. 2025ರ ಜುಲೈ 9ರಿಂದ ನಾಗರಾಜು ಕಾರ್ಯನಿರ್ವಹಿಸುತ್ತಿದ್ದಾರೆ. ದೇವಾಲಯಕ್ಕೆ ಹರಕೆಯಾಗಿ ಬಂದಿರುವ ಚಿನ್ನದ ನೆಕ್ಲೆಸ್ ಕಳುವಾಗಿತ್ತು. ಕೆಲ ದಿನಗಳ ನಂತರ ಅದನ್ನು ಹುಂಡಿಯಲ್ಲಿ ಹಾಕಿರುವುದು, ಮೂಲ ನೆಕ್ಲೆಸ್‌ಗಿಂತಲೂ ವ್ಯತ್ಯಾಸ ಇರುವುದು ಗೊತ್ತಾಗಿತ್ತು. ಇದಕ್ಕೆ, ನಾಗರಾಜು ಅವರೇ ಕಾರಣ ಎಂಬ ಆರೋಪ ಎದುರಾಗಿತ್ತು.
‘ಈ ಪ್ರಕರಣದಲ್ಲಿ ಮೇಲ್ನೋಟಕ್ಕೆ ನಾಗರಾಜು ಅವರ ಕರ್ತವ್ಯ ಲೋಪ ಕಂಡು ಬಂದಿದೆ. ಈ ಬಗ್ಗೆ ಇಲಾಖಾ ವಿಚಾರಣೆ ಕಾಯ್ದಿರಿಸಿ ಅಮಾನತುಗೊಳಿಸಲಾಗಿದೆ’ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಪ್ರಕರಣ ಏನು?
‘ವಿಶ್ವವಿಖ್ಯಾತ ಬೆಂಗಳೂರು ಕರಗ ನಡೆಯುವ ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ, 2025ರ ಅಕ್ಟೋಬರ್ 6ರಂದು ಹುಂಡಿ ಎಣಿಕೆ ಸಂದರ್ಭದಲ್ಲಿ ಚಿನ್ನದ ನೆಕ್ಲೆಸ್ ಪತ್ತೆಯಾಗಿತ್ತು. ಅದನ್ನು ಇಒ ನಾಗಾರಾಜು ಅವರು ಯಾವುದೇ ಅನುಮತಿ ಪಡೆಯದೆ ತಮ್ಮ ಜೇಬಿಗೆ ಹಾಕಿಕೊಂಡು ಹೋಗಿದ್ದಾರೆ ಎಂದು ಮುಜರಾಯಿ ಇಲಾಖೆಯ ಅಧಿಕಾರಿಗಳೇ ನನಗೆ ಮಾಹಿತಿ ನೀಡಿದ್ದರು’ ಎಂದು ಧರ್ಮರಾಯಸ್ವಾಮಿ ದೇವಾಲಯದ ನಿಕಟಪೂರ್ವ ಆಡಳಿತ ಮಂಡಳಿಯ ಅಧ್ಯಕ್ಷ ಕೆ. ಸತೀಶ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಬೆಳಿಗ್ಗೆ ಮಾಹಿತಿ ನೀಡಿದರು.
‘ಈ ಬಗ್ಗೆ ಅನುಮಾನ ಬಂದಾಗ, ಮಾಹಿತಿ ಹಕ್ಕು ಕಾಯ್ದೆಯಡಿ ಸಿಸಿ ಟಿವಿ ದೃಶ್ಯಾವಳಿಗಳನ್ನು ಪಡೆಯಲು ಪ್ರಯತ್ನಿಸಲಾಯಿತು. ಫೆ.2ರಂದು ಈ ದೃಶ್ಯ ಹಾಗೂ ಮಾಹಿತಿಗಳನ್ನು ನೀಡಲಾಯಿತು. ಅವುಗಳನ್ನು ಪರಿಶೀಲಿಸಿದಾಗ ನೆಕ್ಲೆಸ್ ಕೊಂಡೊಯ್ದಿರುವುದು ಬಹಿರಂಗವಾಯಿತು. ಅ.6ರಂದು ಕೊಂಡೊಯ್ದು, ಮೂರು ದಿನದ ನಂತರ, ಅ.10ರಂದು ನೆಕ್ಲೆಸ್ ಅನ್ನು ಹುಂಡಿಗೆ ಹಾಕಿರುವ ದೃಶ್ಯಾವಳಿಗಳೂ ಲಭ್ಯವಾದವು. 122 ಗ್ರಾಂ ನೆಕ್ಲೆಸ್ ಬದಲಿಗೆ, ಅದೇ ವಿನ್ಯಾಸದಲ್ಲಿ 68 ಗ್ರಾಂ ನೆಕ್ಲೆಸ್ ಅನ್ನು ವಾಪಸ್ ಹುಂಡಿಗೆ ಹಾಕಲಾಗಿದೆ’ ಎಂದು ದೂರಿದರು.
‘ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ 36 ಸಾವಿರ ದೇವಸ್ಥಾನಗಳಿದ್ದು, ಯಾವುದೇ ದೇವಾಲಯದ ಹೊರಗೆ ಅದರ ಆಸ್ತಿಯನ್ನು ಕೊಂಡೊಯ್ಯಬೇಕಾದರೆ ಅದಕ್ಕೆ ಅಗತ್ಯ, ನಿಗದಿತ ಪ್ರಕ್ರಿಯೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಆದರೆ ನಿಯಮ ಪಾಲಿಸದೆ ಚಿನ್ನವನ್ನು ಜೇಬಿಗೆ ಹಾಕಿಕೊಂಡು ಹೋಗಿದ್ದಾರೆ’ ಎಂದು ಹೇಳಿದರು.
ಈ ಬೆಳವಣಿಗೆ ಬೆನ್ನಲ್ಲೇ, ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತ ಶರತ್ ಬಿ. ಅವರು ಕೆ. ನಾಗರಾಜು ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.