ADVERTISEMENT

ಕಾಲುದಾರಿ ಈಗ ಸುಸಜ್ಜಿತ ಫುಟ್‌ಪಾತ್‌

ಅಂದಾಜು ₹25 ಲಕ್ಷ ವೆಚ್ಚದಲ್ಲಿ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 24 ಜುಲೈ 2019, 18:49 IST
Last Updated 24 ಜುಲೈ 2019, 18:49 IST
ಈ ಹಿಂದೆ ಇದ್ದ ಕಾಲುದಾರಿ
ಈ ಹಿಂದೆ ಇದ್ದ ಕಾಲುದಾರಿ   

ಬೆಂಗಳೂರು: ನಗರದ ಕುಂದಲಹಳ್ಳಿ ಕೆರೆಯ ಬಳಿ ಮಣ್ಣಿನ ಗುಡ್ಡೆ ಹಾಗೂ ಕಸದ ರಾಶಿಗಳ ನಡುವೆ ಸಂಚರಿಸುತ್ತಿದ್ದ ಪಾದಚಾರಿಗಳು ಇನ್ನು ಇಲ್ಲಿ ನಿರಾತಂಕವಾಗಿ ಹೆಜ್ಜೆ ಹಾಕಬಹುದು. ಸ್ಥಳೀಯರ ಸತತ ಪ್ರಯತ್ನದಿಂದಾಗಿ ಇಲ್ಲಿ ಸುಸಜ್ಜಿತ ಪಾದಚಾರಿ ಮಾರ್ಗ ನಿರ್ಮಿಸಲಾಗಿದೆ.

ಕುಂದಲಹಳ್ಳಿ ಕೆರೆಯ ಆಸುಪಾಸಿನ ಐಟಿ ಕಂಪನಿಗಳ ಉದ್ಯೋಗಿಗಳಲ್ಲಿ ಎಸಿಎಸ್‌ ಬಡಾವಣೆ, ಬ್ರೂಕ್‌ಫೀಲ್ಡ್‌ ಹಾಗೂ ಕುಂದಲಹಳ್ಳಿಗಳ ನಿವಾಸಿಗಳೇ ಹೆಚ್ಚು. ಇಪಿಐಪಿ ಕೈಗಾರಿಕೆ ಪ್ರದೇಶವನ್ನು ತಲುಪಲು ಅವರು ಕೆರೆ ದಂಡೆ ಬಳಿ ಸುಮಾರು 100 ಮೀ.ಗಳಷ್ಟು ಉದ್ದದ ಕಾಲುದಾರಿ ಬಳಸುತ್ತಿದ್ದರು. ಕೆರೆಯ ದಂಡೆಯನ್ನು ಪಾಲಿಕೆ ಅಭಿವೃದ್ಧಿಪಡಿಸಿತ್ತಾದರೂ, ಕೆಲವರು ಇಲ್ಲಿ ಕಟ್ಟಡ ತ್ಯಾಜ್ಯ ಮತ್ತಿತರ ಕಸದ ರಾಶಿ ಹಾಕುತ್ತಿದ್ದರು. ನಡೆದು ಹೋಗುವರರಿಗೆ ಇವು ಕಿರಿಕಿರಿ ಉಂಟು ಮಾಡುತ್ತಿದ್ದವು. ಅಲ್ಲಿ ಪೊದೆಯೂ ಬೆಳೆದಿತ್ತು.

ಇಲ್ಲಿ ಪಾದಚಾರಿ ಮಾರ್ಗ ನಿರ್ಮಿಸುವಂತೆ ದೊಡ್ಡನೆಕ್ಕುಂದಿ ವಾರ್ಡ್‌ನ ಪಾಲಿಕೆ ಕಾರ್ಪೊರೇಟರ್‌ ಶ್ವೇತಾ ವಿಜಯಕುಮಾರ್‌ ಅವರಲ್ಲಿ ಈ ಕಂಪನಿಗಳ ಉದ್ಯೋಗಿಗಳು ಹಾಗೂ ಸ್ಥಳೀಯರು ಮನವಿ ಮಾಡಿದ್ದರು. ಕಾಲುದಾರಿ ಇದ್ದ ಸ್ವಲ್ಪ ಜಾಗವು ಖಾಸಗಿಯವರ ಸ್ವತ್ತಾಗಿತ್ತು. ಪಾದಚಾರಿ ಮಾರ್ಗ ನಿರ್ಮಾಣಕ್ಕೆ ಜಾಗ ನೀಡಲು ಅದರ ಮಾಲೀಕರು ಒಪ್ಪಿದ್ದರು. ಜನರ ಕೋರಿಕೆಗೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಹಾಗೂ ಜಿ.ಇ ಖಾಸಗಿ ಕಂಪನಿ ಕೈಜೋಡಿಸಿದವು. ಎಲ್ಲರ ಪ್ರಯತ್ನದಿಂದಾಗಿ ಮೂರೂವರೆ ತಿಂಗಳಲ್ಲೇ ಇಲ್ಲಿ ಸುಸಜ್ಜಿತ ಪಾದಚಾರಿ ಮಾರ್ಗ ಸಿದ್ಧಗೊಂಡಿತು.

ADVERTISEMENT

‘ಮಹಿಳಾ ಉದ್ಯೋಗಿಗಳೇ ಹೆಚ್ಚಾಗಿ ಈ ಕಾಲುದಾರಿ ಬಳಸುತ್ತಿದ್ದರು. ಅವರಿಗೆ ಯಾವುದೇ ಭದ್ರತೆ ಇರಲಿಲ್ಲ. ಹೀಗಾಗಿ ಸಮೀಪದಲ್ಲಿದ್ದ ಸಣ್ಣ ಕಾಲುವೆ ಮೇಲೆ ಪಾದಚಾರಿ ಮಾರ್ಗ ನಿರ್ಮಿಸಲು ಮುಂದಾದೆವು’ ಎಂದು ಸ್ಥಳೀಯ ಉದ್ಯೋಗಿ ಮಹೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಇಲ್ಲಿ ಚರಂಡಿ ಇತ್ತು. ಆದಕ್ಕೆ ಚಪ್ಪಡಿ ಹಾಸಿರಲಿಲ್ಲ. ಅದರ ಮೇಲೆ ಚಪ್ಪಡಿ ಅಳವಡಿಸಿ ಪಾದಚಾರಿ ಮಾರ್ಗ ನಿರ್ಮಿಸಿದ್ದೇವೆ. ಅದರ ಕೆಳಗಡೆ ಚರಂಡಿ ನೀರು ಸರಾಗವಾಗಿ ಹರಿಯುವಂತೆ ವ್ಯವಸ್ಥೆ ಮಾಡಿದ್ದೇವೆ’ ಎಂದು ಅವರು ಮಾಹಿತಿ ನೀಡಿದರು.

‘ಭದ್ರತೆಗೆ ಪಾದಚಾರಿ ಮಾರ್ಗದ ಎರಡೂ ಕಡೆ ತಡೆಗೋಡೆ ನಿರ್ಮಿಸಲಾಗಿದೆ. ರಾತ್ರಿ ವೇಳೆ ಸಂಚರಿಸುವವರಿಗೆ ಅನುಕೂಲವಾಗುವಂತೆ ಸೌರ ಬೀದಿದೀಪಗಳನ್ನು ಅಳವಡಿಸಲಾಗಿದೆ. ಗೋಡೆಗಳಿಗೆ ಕಬ್ಬಿಣದ ಜಾಲರಿಗಳನ್ನು ಜೋಡಿಸಲಾಗಿದೆ. ಸೈಕಲ್‌ ಸವಾರರೂ ಸುಲಭವಾಗಿ ಈ ಮಾರ್ಗದಲ್ಲಿ ಸಾಗಬಹುದು’ ಎಂದರು.

‘ಸ್ಥಳೀಯರು ಒಗ್ಗೂಡಿ ಪ್ರಯತ್ನ ನಡೆಸಿದ್ದರಿಂದಾಗಿ ಈ ಪಾದಚಾರಿ ಮಾರ್ಗ ನಿರ್ಮಾಣವಾಗಿದೆ’ ಎಂದು ಸಾಫ್ಟ್‌ವೇರ್‌ ಎಂಜಿನಿಯರ್‌ ಅಖಿಲೇಶ್‌ ಮಿಶ್ರಾ ಸಂತಸ ವ್ಯಕ್ತಪಡಿಸಿದರು.

ಈ ಪಾದಚಾರಿ ಮಾರ್ಗವನ್ನು ಜುಲೈ 26ರಂದು ಬೆಳಿಗ್ಗೆ 9.30ಕ್ಕೆ ವಾರ್ಡ್‌ ಕಾರ್ಪೊರೇಟರ್‌ ಶ್ವೇತಾ ವಿಜಯ್‌ಕುಮಾರ್‌ ಉದ್ಘಾಟಿಸಲಿದ್ದಾರೆ.

**

ನೂತನ ಪಾದಚಾರಿ ಮಾರ್ಗದಿಂದ ಕಂಪನಿಗೆ ತೆರಳಲು ಅನುಕೂಲವಾಗಿದೆ. ರಾತ್ರಿ ವೇಳೆ ಸಂಚಾರಕ್ಕೂ ಈ ಮಾರ್ಗ ಸುರಕ್ಷಿತವಾಗಿದೆ.
- ಅನುಪಮಾ, ಐಟಿ ಕಂಪನಿ ಉದ್ಯೋಗಿ

**

ರಸ್ತೆ ಸರಿ ಇಲ್ಲದ ಕಾರಣ ಬೈಕ್‌ನಲ್ಲಿ ಕಚೇರಿಗೆ ಹೋಗುತ್ತಿದ್ದೆ. ಇನ್ನು ನಡೆದುಕೊಂಡು ಹೋಗುತ್ತೇನೆ. ಇಂಧನ ಉಳಿತಾಯದ ಜೊತೆ ಆರೋಗ್ಯ ಸಂರಕ್ಷಣೆ ಆಗಲಿದೆ. -ನೀರಜ್‌, ಕುಂದಲಹಳ್ಳಿ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.