ಬೆಂಗಳೂರು: ಬೆಂಗಳೂರಿನಲ್ಲಿ ಹೊಸದಾಗಿ ಒಂದಷ್ಟು ಹಸಿರು ತಾಣಗಳನ್ನು ರೂಪಿಸುವ ಚಟುವಟಿಕೆಗಳು ಗರಿಗೆದರಿವೆ. ‘ಅಂದದೂರು ಬೆಂಗಳೂರು, ಆನಂದದ ತವರೂರು’ ಎನ್ನುವ ಆ ಹಾಡು ಮತ್ತೆ ಗುನುಗುನಿಸುವಂತೆ ಮಾಡುತ್ತಿವೆ.
ಹಲವು ದಶಕಗಳ ಹಿಂದಿನ ಹಾಡು ಮತ್ತು ಅಂದಿನ ಬೆಂಗಳೂರಿನ ಚಿತ್ರಣ ಒಂದಕ್ಕೊಂದು ಪೂರಕವಾಗಿದ್ದವು. ಮೂರು ದಶಕಗಳ ನಗರೀಕರಣದ ಭರಾಟೆಯಲ್ಲಿ ಬೆಂಗಳೂರಿನ ಆ ಹಿರಿಮೆ ಕಳೆದು ಹೋಗಿತ್ತು. ಮತ್ತೆ ಹಸಿರು ತಾಣಗಳು ಹೆಚ್ಚು ಮಾಡುವ ಪ್ರಯತ್ನಗಳು ಆರಂಭಗೊಂಡಿವೆ.
ಲಾಲ್‌ಬಾಗ್, ಕಬ್ಬನ್‌ಪಾರ್ಕ್‌ನಂತಹ ಪ್ರಮುಖ ತಾಣಗಳು ಈಗಲೂ ಬೆಂಗಳೂರಿನ ಆಕರ್ಷಣೆ. ನಗರದಲ್ಲಿ ಹತ್ತಕ್ಕೂ ಹೆಚ್ಚು ದೊಡ್ಡ ಉದ್ಯಾನಗಳು, 200ಕ್ಕೂ ಅಧಿಕ ಸಣ್ಣ ಉದ್ಯಾನಗಳಿವೆ. ಇವುಗಳನ್ನು ಸಂರಕ್ಷಿಸುವುದರ ಜೊತೆಗೆ ಹೊಸದಾಗಿ ಜೈವಿಕ ಉದ್ಯಾನಗಳನ್ನು ರೂಪಿಸುವ ಕಾರ್ಯಗಳಿಗೆ ಚಾಲನೆ ದೊರೆತಿದೆ.
ಬೆಂಗಳೂರು ಸುತ್ತಮುತ್ತ ಒತ್ತುವರಿ ಆಗಿದ್ದ ಅರಣ್ಯ ಪ್ರದೇಶ ಮಾತ್ರವಲ್ಲದೇ, ಅರಣ್ಯ ಇಲಾಖೆ ನೀಡಿದ್ದ ಉದ್ದೇಶಿತ ಉಪಯೋಗಗಳಿಗೆ ಬಳಕೆಯಾಗದ ಜಮೀನುಗಳನ್ನು ಮೂರ್ನಾಲ್ಕು ವರ್ಷಗಳಿಂದ ಹಿಂಪಡೆಯಲಾಗುತ್ತಿದೆ. ಅಲ್ಲಿ ವಿಶಾಲವಾದ ಜೈವಿಕ ಉದ್ಯಾನಗಳನ್ನು ನಿರ್ಮಿಸಿ ಶ್ವಾಸ ಪ್ರದೇಶಗಳನ್ನಾಗಿ ಮಾಡಲಾಗುತ್ತಿದೆ.
ಹೀಗಿರಲಿದೆ ಹೊಸ ಉದ್ಯಾನ
ಮೊದಲ ಹಂತದಲ್ಲಿ ಯಲಹಂಕ ಸಮೀಪದ ಮಾದಪ್ಪನಹಳ್ಳಿಯಲ್ಲಿ ವಿಶಾಲ ಉದ್ಯಾನ ನಿರ್ಮಿಸಲಾಗುತ್ತದೆ.
ದಶಕಗಳಿಂದಲೂ ಮಾದಪ್ಪನಹಳ್ಳಿಯ ಅರಣ್ಯದಲ್ಲಿ ಕರ್ನಾಟಕ ಅರಣ್ಯ ಅಭಿವೃದ್ದಿ ನಿಗಮ ನೀಲಗಿರಿ ಮರ ಬೆಳೆಸಿದೆ. ಅಲ್ಲಿ ಹೊನ್ನೆ, ಬೀಟೆ, ಜಾಲಿ, ಕಗ್ಗಲಿ, ಎಲಚಿ, ಚಿಗರೆ, ಹೊಳೆಮತ್ತಿ, ಮತ್ತಿ, ಕರಿಮತ್ತಿ ಮೊದಲಾದ 800 ಮರಗಳಿವೆ. ಇವುಗಳ ಜತೆಗೆ ಸ್ಥಳೀಯ ಪ್ರಭೇದದ ಬಿಲ್ವ, ಮಹಾಬಿಲ್ವ, ನೇರಳೆ, ಮತ್ತಿ, ಆಲ, ಅರಳಿ ಜತೆಗೆ ಪಶ್ಚಿಮಘಟ್ಟದಲ್ಲಿರುವ ಪ್ರಭೇದದ ಸಸ್ಯಗಳನ್ನು ಬೆಳೆಸುವ ಚಟುವಟಿಕೆಗಳು ಶುರುವಾಗಿವೆ.
ಇಂದಿರಾ ಗಾಂಧಿ ಜೈವಿಕ ಉದ್ಯಾನ, ವಿಶ್ವಗುರು ಬಸವಣ್ಣ ದಿವ್ಯೌಷಧೀಯ ಸಸ್ಯವನ, ಅಂಬೇಡ್ಕರ್ ಪಕ್ಷಿ ಲೋಕ, ನಾಡಪ್ರಭು ಕೆಂಪೇಗೌಡ ಕಿರು ಮೃಗಾಲಯ ಹಾಗೂ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನ ಇದರಲ್ಲಿ ಸೇರಿವೆ.
‘ಮಾದಪ್ಪನಹಳ್ಳಿಯಿಂದ 4-5 ಕಿ.ಮೀ. ದೂರದಲ್ಲಿ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ ನಿರ್ಮಿಸಿರುವ ಶಿವರಾಮಕಾರಂತ ಬಡಾವಣೆಯೂ ಇದೆ. ಇಲ್ಲಿ ಉದ್ಯಾನ ನಿರ್ಮಾಣ ಮಾಡುವುದರಿಂದ ಪರಿಸರ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶ ಇರಲಿದೆ. ಯಲಹಂಕ ಸುತ್ತಮುತ್ತ ಇರುವ ನೂರಾರು ವಸತಿ ಬಡಾವಣೆಗಳ ಜನರಿಗೆ ಇದು ಉತ್ತಮ ಶ್ವಾಸತಾಣ ಮತ್ತು ಜನಾಕರ್ಷಣೆಯ ಪ್ರವಾಸಿ ಸ್ಥಳವೂ ಆಗಲಿದೆ’ ಎಂದು ಬೆಂಗಳೂರು ನಗರ ಉಪ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರ ಕುಮಾರ್ ತಿಳಿಸಿದರು.
ಯಾವೆಲ್ಲ ಯೋಜನೆಗಳು...
ಮಾದಪ್ಪನಹಳ್ಳಿಯಲ್ಲಿ 153.39 ಎಕರೆ ಪ್ರದೇಶದಲ್ಲಿ ವಿಶಾಲ ಜೈವಿಕ ಉದ್ಯಾನ
5678.32 ಎಕರೆ ಜಾಗ ಗ್ರೇಟರ್ ಹೆಸರುಘಟ್ಟ ಮೀಸಲು ಪ್ರದೇಶ ಎಂದು ಘೋಷಣೆ
ಕಂಟೋನ್ಮೆಂಟ್‌ನ 8.61 ಎಕರೆ ಪ್ರದೇಶ ಜೀವವೈವಿಧ್ಯ ಪಾರಂಪರಿಕ ತಾಣ
ಎಚ್ಎಂಟಿಗೆ ನೀಡಿದ್ದ 280 ಎಕರೆಯಲ್ಲಿ ಜೈವಿಕ ಉದ್ಯಾನ ರೂಪಿಸಲು ಯೋಜನೆ
ಮಾದಪ್ಪನಹಳ್ಳಿ ಉದ್ಯಾನ ನಿರ್ಮಾಣಕ್ಕೆ ಮೊದಲ ಹಂತದಲ್ಲಿ ₹ 20 ಕೋಟಿ ಮಂಜೂರು ಮಾಡಿ ಡಿಪಿಆರ್ ಸಿದ್ದಪಡಿಸಲಾಗುತ್ತಿದೆ.ಈಶ್ವರ ಖಂಡ್ರೆ ಅರಣ್ಯ ಸಚಿವ
ಇಂಗಾಲದ ಡೈ ಆಕ್ಸೈಡ್ ತಗ್ಗಿಸಲು ಬೆಂಗಳೂರಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮರಗಳಿಲ್ಲ. ಹಸಿರು ಪ್ರದೇಶ ಹೆಚ್ಚಿಸುವ ಯೋಜನೆಗಳು ಶೀಘ್ರ ಜಾರಿಯಾಗಬೇಕುಎ.ಎನ್.ಯಲ್ಲಪ್ಪರೆಡ್ಡಿ ಪರಿಸರವಾದಿ
ಭಿನ್ನ ವರದಿಗಳು
ಬೆಂಗಳೂರಿನ ಹಸಿರು ಹಾದಿಯ ಕುರಿತಾಗಿ ಎರಡು ಪ್ರಮುಖ ಸಂಸ್ಥೆಗಳು ನೀಡಿರುವ ವರದಿಗಳು ನೈಜ ಸ್ಥಿತಿ ಬಿಡಿಸಿಡುತ್ತವೆ. ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಸಂಶೋಧಕರು 2024ರಲ್ಲಿ ನಡೆಸಿದ್ದ ಸಮೀಕ್ಷೆಯು ಬೆಂಗಳೂರಿನ ಹಸಿರು ಹಾದಿ ಕ್ಷೀಣಿಸಿರುವುದನ್ನು ಉಲ್ಲೇಖಿಸಿತ್ತು. ‘ಐದು ದಶಕಗಳಲ್ಲಿ ನಗರದ ಶೇ 93ರಷ್ಟು ಪ್ರದೇಶವು ಕಾಂಕ್ರೀಟ್ ಆಗಿ ಕೆರೆ ಸಹಿತ ಜಲತಾಣಗಳನ್ನು ಅರಣ್ಯ ಪ್ರದೇಶವನ್ನು ಕಳೆದುಕೊಂಡಿದೆ. ಐದು ದಶಕಗಳಿಗೆ ಹೋಲಿಸಿದರೆ ಅರಣ್ಯ ಪ್ರದೇಶ ಶೇ 88ರಷ್ಟು ಕ್ಷೀಣಿಸಿದೆ. ಕಟ್ಟಡಗಳ ನಿರ್ಮಾಣ ಹೆಚ್ಚಾಗಿರುವುದು ಈಗಿನ ಸ್ಥಿತಿಗೆ ಕಾರಣ. ಹಸಿರು ಪ್ರದೇಶ ಉಳಿಸಿಕೊಳ್ಳಲು ಆಡಳಿತಗಾರರು ಒತ್ತು ನೀಡಲೇಬೇಕು’ ಎನ್ನುವ ಸಲಹೆಯನ್ನು ನೀಡಲಾಗಿತ್ತು. ಅದೇ ರೀತಿ ಇಂಡಿಯಾ ಸ್ಟೇಟ್ ಆಫ್ ಫಾರೆಸ್ಟ್ ರಿಪೋರ್ಟ್ 2023ರ ಪ್ರಕಾರ ಬೆಂಗಳೂರಿನಲ್ಲಿ 2021ರಲ್ಲಿನ ಮೌಲ್ಯಮಾಪನಕ್ಕಿಂತ ಶೇ 0.59 ರಷ್ಟು ಅರಣ್ಯ ಹೆಚ್ಚಳವಾಗಿದೆ. ಒಟ್ಟು ಅರಣ್ಯದ ವ್ಯಾಪ್ತಿ 89.61 ಚದರ ಕಿಲೋಮೀಟರ್ ವಿಸ್ತರಿಸಿದೆ. ದೆಹಲಿ (194.15 ಕಿ.ಮೀ.) ಮತ್ತು ಮುಂಬೈ (110.84 ಕಿ.ಮೀ.) ಅರಣ್ಯ ಪ್ರದೇಶ ಹೊಂದಿದ್ದು ಮೊದಲೆರಡು ಸ್ಥಾನದಲ್ಲಿವೆ. ನಂತರದ ಸ್ಥಾನದಲ್ಲಿ ಬೆಂಗಳೂರು ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.