
ಸಾಂದರ್ಭಿಕ ಚಿತ್ರ
ಬೆಂಗಳೂರು: ಆರೋಗ್ಯ ಇಲಾಖೆಯ ಸಹಾಯಕ ಆಡಳಿತಾಧಿಕಾರಿ ಆರ್. ವಾಣಿ ಅವರನ್ನು ದುರ್ನಡತೆ ಮತ್ತು ಕರ್ತವ್ಯ ಲೋಪದ ಆರೋಪದ ಮೇರೆಗೆ ಸರ್ಕಾರಿ ಸೇವೆಯಿಂದ ಅಮಾನತುಗೊಳಿಸಿ ಇಲಾಖೆ ಆಯುಕ್ತ ಡಿ. ರಂದೀಪ್ ಆದೇಶ ಹೊರಡಿಸಿದ್ದಾರೆ.
ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ನೇಮಕರಾಗಿದ್ದ ಅವರು, ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದರು. ಸೇವಾವಧಿಗೆ ಅನುಗುಣವಾಗಿ ಸಹಾಯಕ ಆಡಳಿತಾಧಿಕಾರಿಯಾಗಿ ಪದೋನ್ನತಿ ಹೊಂದಿದ್ದರು.
ವಾಣಿ ಅವರು ಅಕ್ರಮವಾಗಿ ಅನುಕಂಪದ ಆಧಾರದಲ್ಲಿ ಸರ್ಕಾರಿ ನೇಮಕಾತಿ ಪಡೆದಿರುತ್ತಾರೆಂದು ಸಿ.ಆರ್. ಮಂಜುನಾಥ, ಶಿವಣ್ಣ ಕೆ.ಎಚ್. ಮತ್ತು ಮಂಜುನಾಥ ನಿಲಸೋಗೆ ದೂರು ಸಲ್ಲಿಸಿದ್ದರು.
ಈ ದೂರಿಗೆ ಸಂಬಂಧಿಸಿದಂತೆ ಇಲಾಖೆಯ ಜಾಗೃತಕೋಶದ ಮುಖ್ಯ ಜಾಗೃತಾಧಿಕಾರಿ ತನಿಖೆ ನಡೆಸಿ, ವರದಿ ಸಲ್ಲಿಸಿದ್ದಾರೆ. ವಾಣಿ ಅವರು ಅನುಕಂಪದ ಆಧಾರದ ಮೇಲೆ ಪಡೆದಿರುವ ನೇಮಕಾತಿಯಲ್ಲಿ ಕರ್ನಾಟಕ ನಾಗರಿಕ ಸೇವಾ (ಅನುಕಂಪದ ಆಧಾರಿತ ನೇಮಕಾತಿ) ನಿಯಮಗಳನ್ನು ಪಾಲಿಸಿಲ್ಲ. ಇಲಾಖೆಗೆ ಸುಳ್ಳು ಆದಾಯ ದೃಢೀಕರಣ ಮಾಹಿತಿ ನೀಡಿರುತ್ತಾರೆ. ಸತ್ಯವನ್ನು ಮರೆಮಾಚಿ, ಸರ್ಕಾರಕ್ಕೆ ವಂಚಿಸಿ ನೇಮಕಗೊಂಡಿರುವುದು ಲಭ್ಯ ದಾಖಲೆಗಳು ಮತ್ತು ಸಾಕ್ಷ್ಯಗಳಿಂದ ಸಾಬೀತಾಗಿರುತ್ತದೆ ಎಂದು ವರದಿಯಲ್ಲಿ ತಿಳಿಸಿ, ಶಿಸ್ತುಕ್ರಮಕ್ಕೆ ಶಿಫಾರಸು ಮಾಡಿರುತ್ತಾರೆ ಎಂದು ರಂದೀಪ್ ಆದೇಶದಲ್ಲಿ ತಿಳಿಸಿದ್ದಾರೆ.
ತನಿಖಾ ವರದಿ ಹಾಗೂ ದಾಖಲೆಗಳನ್ನು ಪರಿಶೀಲಿಸಿದಾಗ ಇವರ ವಿರುದ್ಧದ ಆರೋಪವು ಗಂಭೀರ ಸ್ವರೂಪದಿಂದ ಕೂಡಿದೆ. ಆದ್ದರಿಂದ ತಕ್ಷಣದಿಂದ ಜಾರಿಗೆ ಬರುವಂತೆ ಇಲಾಖೆ ವಿಚಾರಣೆ ಬಾಕಿ ಇರಿಸಿ, ಅಮಾನತು ಗೊಳಿಸಲಾಗುತ್ತದೆ. ಅಮಾನತಿನ ಅವಧಿಯಲ್ಲಿ ಜೀವನಾಂಶ ಭತ್ಯೆಗೆ ಹಾಸನ ಜಿಲ್ಲಾ ಆಸ್ಪತ್ರೆಯಲ್ಲಿ ಖಾಲಿ ಇರುವ ಸಹಾಯಕ ಆಡಳಿತಾಧಿಕಾರಿ ಹುದ್ದೆಗೆ ನಿಯೋಜಿಸಲಾಗಿದೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.