ADVERTISEMENT

ಜೆ.ಸಿ. ರಸ್ತೆ ಕೆಸರುಮಯ: ಸಂಚಾರ ಅಯೋಮಯ

ರಸ್ತೆ ಗುಂಡಿಮಯ, ಪರಿಸರ ದೂಳುಮಯ, ಸಂಚಾರಕ್ಕೆ ಸಂಕಷ್ಟ, ವ್ಯಾಪಾರಕ್ಕೆ ಹೊಡೆತ

ಬಾಲಕೃಷ್ಣ ಪಿ.ಎಚ್‌
Published 24 ಆಗಸ್ಟ್ 2025, 22:52 IST
Last Updated 24 ಆಗಸ್ಟ್ 2025, 22:52 IST
ಸಿಂಧಿ ಕಾಲೊನಿಯಿಂದ ಜೆ.ಸಿ ರಸ್ತೆಯನ್ನು ಸಂಪರ್ಕಿಸುವ ಜಾಗದಲ್ಲಿ ಕೆಸರಿನಲ್ಲಿ ಹೂತು ಹೋಗಿದ್ದ ಗೂಡ್ಸ್ ವಾಹನವನ್ನು ಹೊರತೆಗೆಯಲು ತಳ್ಳುತ್ತಿರುವುದು ಕಂಡು ಬಂತು.
ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.
ಸಿಂಧಿ ಕಾಲೊನಿಯಿಂದ ಜೆ.ಸಿ ರಸ್ತೆಯನ್ನು ಸಂಪರ್ಕಿಸುವ ಜಾಗದಲ್ಲಿ ಕೆಸರಿನಲ್ಲಿ ಹೂತು ಹೋಗಿದ್ದ ಗೂಡ್ಸ್ ವಾಹನವನ್ನು ಹೊರತೆಗೆಯಲು ತಳ್ಳುತ್ತಿರುವುದು ಕಂಡು ಬಂತು. ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.   

ಬೆಂಗಳೂರು: ‘ಈ ಕಡೆಯಿಂದ ವಾಹನ ಎತ್ತಿ. ಟೈರ್‌ ಅಡಿ ಕಲ್ಲು ಇಡಿ. ಈಗ ಆ ಕಡೆಯಿಂದ ಎತ್ತಿ, ಆ ಟೈರ್‌ ಅಡಿಯೂ ಕಲ್ಲು ಇಡಿ. ಎಲ್ಲ ಸೇರಿ ದಬ್ಬಿ..’

ಜೆ.ಸಿ. ರಸ್ತೆಯನ್ನು ಸಂಪರ್ಕಿಸುವ ಸ್ಥಳದಲ್ಲಿ ಶನಿವಾರ ಸಿಲುಕಿದ್ದ ‘ಆಪೆ’ ಗೂಡ್ಸ್‌ ವಾಹನವನ್ನು ತಳ್ಳುತ್ತಿದ್ದಾಗ ವಾಹನ ಚಾಲಕ ಹಾಗೂ ಅವರಿಗೆ ಸಹಾಯ ಮಾಡುತ್ತಿದ್ದವರ ಮಾತು ಇದು. ಒಂದು ವಾಹನವನ್ನು ತಳ್ಳಿ ರಸ್ತೆಗೆ ತಂದು ಎರಡು ನಿಮಿಷ ಕಳೆಯುವ ಹೊತ್ತಿಗೆ ಇನ್ನೊಂದು ಗೂಡ್ಸ್‌ ವಾಹನ ಸಿಲುಕಿಕೊಂಡಿತು. ಜೆ.ಸಿ. ರಸ್ತೆಯನ್ನು ಅಗೆದು ಹಾಕಿರುವುದರಿಂದ ನಿತ್ಯವೂ ವಾಹನ ಸವಾರರು ಇತರರ ಸಹಾಯವನ್ನು ಪಡೆದುಕೊಂಡೇ ಸಂಚರಿಸಬೇಕಾದ ಪರಿಸ್ಥಿತಿ ಉದ್ಭವವಾಗಿದೆ. 

‘ನಿನ್ನೆ ಒಂದು ವಾಹನ ಕೆಸರಲ್ಲಿ ಸಿಲುಕಿ ಜಾರಿಹೋಗಿ ಪಲ್ಟಿಯಾಗಿತ್ತು. ಒಳಚರಂಡಿಗಾಗಿ ಇಲ್ಲಿ ಅಗೆದು ಸರಿಯಾಗಿ ಮುಚ್ಚದೇ ಹೋಗಿದ್ದಾರೆ. ಅರೆಬರೆ ತುಂಬಿಸಿದ್ದ ಮಣ್ಣು ಮಳೆಗೆ ಕೆಸರಿನಂತಾಗಿದೆ. ಅದರಲ್ಲಿ ವಾಹನಗಳು ಸಿಲುಕಿಕೊಳ್ಳುತ್ತಿವೆ’ ಎಂದು ಸರಕುಗಳ ಸಾಗಾಟ ವ್ಯವಹಾರ ನಡೆಸುವ ಇಬ್ರಾಹಿಂ ತಿಳಿಸಿದರು.

ADVERTISEMENT

ಪುರಭವನದ ಬಳಿ ಜಯಚಾಮರಾಜೇಂದ್ರ ರಸ್ತೆ (ಜೆ.ಸಿ. ರಸ್ತೆ) ವೈಟ್‌ಟಾಪಿಂಗ್‌ಗಾಗಿ ಅಗೆದು ಹಾಕಿರುವುದರಿಂದ ರಸ್ತೆಯ ಇಕ್ಕೆಲಗಳಲ್ಲಿ ದೂಳು ತುಂಬಿ ಹೋಗಿದೆ. ಪೈಪ್‌ಗಳನ್ನು ಅಳವಡಿಸಲು ಅಗೆದು, ಸರಿಯಾಗಿ ಮುಚ್ಚದೇ ಇರುವುದರಿಂದ ವಾಹನಗಳು ಸಿಲುಕಿಕೊಂಡು ಮುಂದಕ್ಕೆ ಹೋಗಲು ಪರದಾಡುವಂತಾಗಿದೆ ಎಂದು ಆಟೊ ಚಾಲಕ ಚೆನ್ನಿ ಪರಿಸ್ಥಿತಿ ವಿವರಿಸಿದರು.

ಮಿನರ್ವ ವೃತ್ತದಿಂದ ಪುರಭವನದವರೆಗೆ ಬಿಬಿಎಂಪಿಯಿಂದ ವೈಟ್‌ ಟಾಪಿಂಗ್‌ ಕಾಮಗಾರಿ, ಜಲಮಂಡಳಿಯಿಂದ ಒಳಚರಂಡಿ ಕೊಳವೆ ಮಾರ್ಗ ಅಳವಡಿಕೆ ಕಾಮಗಾರಿ ನಡೆಯುತ್ತಿದೆ. ಜೊತೆಗೆ ಮಳೆನೀರು ಚರಂಡಿಯನ್ನೂ ನಿರ್ಮಿಸಲಾಗುತ್ತಿದೆ. ಕೆಲವೆಡೆ ರಸ್ತೆ ಬದಿಯಲ್ಲಿ ಅಗೆದು ಪೈಪ್‌ ಹಾಕಿ ಮುಚ್ಚಿದ್ದಾರೆ. ಇನ್ನೂ ಕೆಲವು ಕಡೆಗಳಲ್ಲಿ ನೆಲ ಅಗೆದು ಹಾಗೆ ಬಿಡಲಾಗಿದೆ. ರಸ್ತೆಯ ಎರಡೂ ಕಡೆ ಒಟ್ಟೊಟ್ಟಿಗೆ ಕಾಮಗಾರಿ ನಡೆಸುತ್ತಿರುವುದರಿಂದ ವಾಹನಗಳ ಪಾರ್ಕಿಂಗ್‌ಗೂ ಸಮಸ್ಯೆಯಾಗಿದೆ.

ಯುಟಿಲಿಟಿ ಪೈಪ್‌ಗಳು, ಚರಂಡಿ ಪೈಪ್‌ಗಳನ್ನು ರಸ್ತೆ ಬದಿಯಲ್ಲಿ ರಾಶಿ ಹಾಕಲಾಗಿದೆ. ಅಲ್ಲಲ್ಲಿ ಚರಂಡಿ ಮುಚ್ಚಿರುವುದರಿಂದ ಕೊಳಚೆ ನೀರು ಅಲ್ಲಲ್ಲೇ ನಿಂತು ಗಬ್ಬು ನಾರುತ್ತಿದೆ.

‘ಕಾಮಗಾರಿ ಆರಂಭವಾಗಿ ಎಂಟು ತಿಂಗಳು ಕಳೆದಿದ್ದರೂ ಕಾಲುಭಾಗ ಕೆಲಸವೂ ಆಗಿಲ್ಲ. ಜೆ.ಸಿ. ರಸ್ತೆ ತುಂಬಾ ಗುಂಡಿಗಳು ಬಿದ್ದಿವೆ. ಅವುಗಳನ್ನು ಮುಚ್ಚುವ ಕೆಲಸವನ್ನೂ ಮಾಡಿಲ್ಲ. ಅಗೆದು ಹಾಕ್ತಾರೆ. ಹಾಗೇ ಬಿಟ್ಟು ಹೋಗುತ್ತಾರೆ. ಸಂಚಾರಕ್ಕೆ ತೊಡಕಾಗಿರುವುದರಿಂದ ವಾಹನಗಳು ನಿಧಾನವಾಗಿ ಚಲಿಸುವಂತಾಗಿದೆ. ಇದರಿಂದ ದಟ್ಟಣೆ ಉಂಟಾಗಿದೆ’ ಎಂದು ಚಾಲಕ ಸುಲೈಮಾನ್‌ ತಿಳಿಸಿದರು.

‘ದೂಳಿನಿಂದಾಗಿ ಜನರು ಸುತ್ತಮುತ್ತಲ ಅಂಗಡಿಗಳಿಗೆ ಬರುತ್ತಿಲ್ಲ. ವ್ಯಾಪಾರ ತುಂಬಾ ಕಡಿಮೆಯಾಗಿದೆ. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಬೇಕು’ ಎಂದು ವ್ಯಾಪಾರಿ ಮಹಮ್ಮದ್‌ ಅಲಿ ಆಗ್ರಹಿಸಿದರು.

ಕೊಳಚೆ ನೀರು ಸರಾಗವಾಗಿ ಹರಿಯದೇ ನಿಂತಿರುವುದು ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.
ಬೆಂಗಳೂರಿನ ಜೆ.ಸಿ ರಸ್ತೆಯಲ್ಲಿ ನಿಧಾನ ಗತಿಯಲ್ಲಿ ನಡೆಯುತ್ತಿರುವ ಕಾಮಗಾರಿಯಿಂದ ಪ್ರಯಾಣಿಕರು ದಿನನಿತ್ಯ ಪರದಾಡುತಿದ್ದಾರೆ. ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.

‘ಕಾಂಕ್ರೀಟೀಕರಣವಾದಾಗ ಸಮಸ್ಯೆ ಇತ್ಯರ್ಥ’

ವೈಟ್‌ ಟಾಪಿಂಗ್‌ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಒಳಚರಂಡಿ ಕೊಳವೆ ಅಳವಡಿಕೆ ಮಳೆನೀರಿನ ಚರಂಡಿ ನಿರ್ಮಾಣ ಸಹಿತ ಮೂಲ ಅವಶ್ಯಕತೆಗಳೊಂದಿಗೆ ಕಾಮಗಾರಿ ನಡೆಸಬೇಕಿರುವುದರಿಂದ ಸ್ವಲ್ಪ ಹೆಚ್ಚು ಸಮಯ ಹಿಡಿಯುತ್ತದೆ. ಕಾಂಕ್ರೀಟೀಕರಣವಾದಾಗ ಸಮಸ್ಯೆ ಪರಿಹಾರಗೊಳ್ಳಲಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.