ಬೆಂಗಳೂರು: ಪ್ರವರ ಥಿಯೇಟರ್ ಮತ್ತು ಅಶ್ವಘೋಷ ಥಿಯೇಟರ್ ಟ್ರಸ್ಟ್ ಜಂಟಿಯಾಗಿ ‘ಬೆಂಗಳೂರು ಕಿರುನಾಟಕೋತ್ಸವ’ 5ನೇ ಆವೃತ್ತಿಯ ಅಂತಿಮ ಸ್ಪರ್ಧೆಯನ್ನು ಇದೇ ಶನಿವಾರ (ಜುಲೈ 12) ಸಂಜೆ 6 ಗಂಟೆಗೆ ಮಲ್ಲತ್ತಹಳ್ಳಿಯ ಕಲಾ ಗ್ರಾಮದಲ್ಲಿರುವ ಸಾಂಸ್ಕೃತಿಕ ಸಮುಚ್ಚಯದಲ್ಲಿ ಹಮ್ಮಿಕೊಂಡಿದೆ.
ಈ ನಾಟಕೋತ್ಸವವು ‘ಪ್ರಜಾವಾಣಿ’ ಮಾಧ್ಯಮ ಸಹಯೋಗದಲ್ಲಿ ನಡೆಯಲಿದೆ. ‘ಸಮಗ್ರತೆ’ ನಾಟಕೋತ್ಸವದ ವಿಷಯವಾಗಿದೆ. ಮೊದಲ ಹಂತದ ಸ್ಪರ್ಧೆಯಲ್ಲಿ 13 ತಂಡಗಳು ಭಾಗವಹಿಸಿದ್ದವು. ಆರು ತಂಡಗಳು ಅಂತಿಮ ಸ್ಪರ್ಧೆಗೆ ಆಯ್ಕೆಯಾಗಿವೆ.
ರಂಗಕರ್ಮಿ ಬಿ. ಸುರೇಶ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕಿ ಬನಶಂಕರಿ ವಿ. ಅಂಗಡಿ ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ ಅವರು ಅಂತಿಮ ಸ್ಪರ್ಧೆಯ ಸಮಾರಂಭದಲ್ಲಿ ಅತಿಥಿಗಳಾಗಿ ಭಾಗವಹಿಸುತ್ತಾರೆ.
ದೃಶ್ಯಕಾವ್ಯ ತಂಡದ ‘ನೀಲಿ-ನೀರು’, ರಂಗಚಿರಂತನ ತಂಡದ ‘ಅಕ್ಕ’, ಖಾಲಿರಂಗ ತಂಡದ ‘ಈ ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ, ವೀಕೆಂಡ್ ಥಿಯೇಟರ್‌ನ ‘3/4’, ರಿ-ವ್ಯೂ ಥಿಯೇಟರ್ ಕಲೆಕ್ಟಿವ್ ತಂಡದ ‘ವಿಧುರ’ ಹಾಗೂ ಸ್ಪಷ್ಟ ಥಿಯೇಟರ್ ತಂಡದ ‘ಪಲ್ಸ್’ ನಾಟಕ ಅಂತಿಮ ಪ್ರದರ್ಶನಕ್ಕೆ ಆಯ್ಕೆಯಾಗಿವೆ.
ಅತ್ಯುತ್ತಮ ನಾಟಕ ಸೇರಿ ಹತ್ತು ಪ್ರಶಸ್ತಿಗಳನ್ನು ಕಿರುನಾಟಕೋತ್ಸವ ಒಳಗೊಂಡಿದ್ದು, ₹ 2,500ರಿಂದ ₹ 10,000ದವರೆಗೆ ನಗದು ಬಹುಮಾನ ನೀಡಲಾಗುತ್ತದೆ ಎಂದು ಕಿರುನಾಟಕೋತ್ಸವದ ಕಲಾತ್ಮಕ ನಿರ್ದೇಶಕ ಹನು ರಾಮಸಂಜೀವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.