ADVERTISEMENT

ಮತ್ತೆ ಬರಲಿದೆ ಬೆಂಗಳೂರು ಕಾವ್ಯ ಉತ್ಸವ

​ಪ್ರಜಾವಾಣಿ ವಾರ್ತೆ
Published 17 ಜುಲೈ 2018, 11:05 IST
Last Updated 17 ಜುಲೈ 2018, 11:05 IST

ಬೆಂಗಳೂರು: ಆಟ–ಗಲಾಟಾ ಸಂಸ್ಥೆಯ ಆಶ್ರಯದಲ್ಲಿ ‘ಬೆಂಗಳೂರು ಕಾವ್ಯ ಉತ್ಸವ’ದ ಮೂರನೇ ಆವೃತ್ತಿ ಆಗಸ್ಟ್‌ 4 ಮತ್ತು 5ರಂದು ಹಳೆ ವಿಮಾನ ನಿಲ್ದಾಣ ರಸ್ತೆಯ ಲೀಲಾ ಪ್ಯಾಲೇಸ್‌ನಲ್ಲಿ ನಡೆಯಲಿದೆ.

ಕಾವ್ಯ ವಾಚನದ ಜೊತೆಗೆ ಕಾರ್ಯಾಗಾರವೂ ಇರುತ್ತದೆ. ಇಂಗ್ಲಿಷ್, ಹಿಂದಿ, ಕನ್ನಡ, ಮಲಯಾಳಂ ಬಂಗಾಳಿ ಸೇರಿದಂತೆ ವಿವಿಧ ಪ್ರಾದೇಶಿಕ ಭಾಷೆಗಳ ಕವಿತೆಗಳ ವಾಚನ ನಡೆಯಲಿದೆ.

‘ಕಳೆದ ವರ್ಷ ಉತ್ಸವ ಆಯೋಜಿಸಿದಾಗ ನಿರೀಕ್ಷೆಗೂ ಮೀರಿ ಯಶಸ್ಸು ದೊರೆತಿತ್ತು. ಸುಮಾರು ಐದು ಸಾವಿರ ಜನ ಭಾಗವಹಿಸಿದ್ದರು. ಈ ಬಾರಿ ಅದಕ್ಕಿಂತಲೂ ಹೆಚ್ಚು ಜನರ ನಿರೀಕ್ಷೆ ಇದೆ. ಹೊಸ ಹಾಗೂ ಹಳೆ ತಲೆಮಾರಿನ ಕವಿಗಳು, ಗಾಯಕರು, ಗೀತ ರಚನೆಕಾರರು ಉತ್ಸವದಲ್ಲಿ ಭಾಗವಹಿಸಲಿದ್ದಾರೆ’ ಎಂದು ಆಟ–ಗಲಾಟಾ ಸಂಸ್ಥಾಪಕ ಸುಭೋದ್ ಶಂಕರ್‌ ತಿಳಿಸಿದರು.

ADVERTISEMENT

ಶೈನಿ ಆ್ಯಂಟನಿ ಉತ್ಸವದ ನಿರ್ದೇಶಕಿ. ‘ದಿ ಆರ್ಫನೇಜ್ ಫಾರ್ ವುಡ್ಸ್’, ‘ಬೇರ್‌ಫೀಟ್ ಆ್ಯಂಡ್ ಪ್ರೆಗ್ನೆಂಟ್’, ‘ವೆನ್ ಮೀರಾ ವೆಂಟ್ ಫೋರ್ತ್ ಆ್ಯಂಡ್ ಮಲ್ಟಿಪ್ಲೈಡ್’ ಸೇರಿದಂತೆ ಹಲವು ಸಣ್ಣ ಕಥೆ ಮತ್ತು ಕಾದಂಬರಿಗಳನ್ನು ಇವರು ರಚಿಸಿದ್ದಾರೆ.

ಯಾರು ಭಾಗವಹಿಸಲಿದ್ದಾರೆ?: ಹಿರಿಯ ಸಾಹಿತಿ ಚಂದ್ರಶೇಖರ ಕಂಬಾರ, ಕಥೆಗಾರ ಎಸ್‌.ದಿವಾಕರ್‌, ಕವಿಗಳಾದ ಪ್ರತಿಭಾ ನಂದಕುಮಾರ್‌, ಡಿ.ಸಿ.ರಾಜಪ್ಪ, ಎಂ.ಆರ್‌.ಕಮಲಾ, ನಂದಿತಾ ಬೋಸ್, ನೀಲಿಂ ಕುಮಾರ್, ರಾಮಚಂದ್ರ ಗುಹಾ, ಅಮೃತಾ ಡೋಂಗ್ರೆ, ಸೌರವ್‌ ರಾಯ್‌, ಅನಾಮಿಕಾ, ಅನೀಶ್‌ ವಿದ್ಯಾಶಂಕರ್, ಉತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.

‘ಈ ಉತ್ಸವದಲ್ಲಿ ಕವಿತೆ, ಸಂವಾದ, ಕಾರ್ಯಾಗಾರಗಳು ನಡೆಯಲಿವೆ. ಉತ್ಸವದ ಎರಡನೇ ದಿನ ಮಕ್ಕಳಿಗಾಗಿ ನಾನಾ ರೀತಿಯ ಕಾರ್ಯಗಾರಗಳನ್ನು ಹಮ್ಮಿಕೊಂಡಿದ್ದೇವೆ. ವಿವಿಧ ರೀತಿಯ ಕವಿತೆಗಳ ರಚನೆ ಕುರಿತು ಆ ಕ್ಷೇತ್ರದ ಸಾಧಕರು ಮಾತನಾಡುತ್ತಾರೆ. ಕಲಾ ಪ್ರದರ್ಶನದ ಭಾಗವಾಗಿ ಕಲಾವಿದ ಆನಂದ್‌ ಪರಿಮಾಳ್ ಅವರು ತ್ಯಾಜ್ಯ ವಸ್ತುಗಳಿಗೆ ಕಲಾತ್ಮಕ ಸ್ಪರ್ಶ ನೀಡಲಿದ್ದಾರೆ’ ಎಂದು ವಿವರಿಸಿದರು.

ಹೆಚ್ಚಿನ ಮಾಹಿತಿಗೆ: http://www.bengalurupoetryfestival.org

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.