ADVERTISEMENT

ಶನಿವಾರದಿಂದ ಬೆಂಗಳೂರು ಸಾಹಿತ್ಯ ಉತ್ಸವ: ಬಿಚ್ಚಿಕೊಳ್ಳಲಿದೆ ‘ಬಹುಭಾಷಿಕ ಜಗತ್ತು’

ಪ್ರಚಲಿತ ವಿದ್ಯಮಾನಗಳ ಚರ್ಚೆ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2021, 21:47 IST
Last Updated 15 ಡಿಸೆಂಬರ್ 2021, 21:47 IST
ಬೆಂಗಳೂರು ಸಾಹಿತ್ಯ ಉತ್ಸವ
ಬೆಂಗಳೂರು ಸಾಹಿತ್ಯ ಉತ್ಸವ   

ಬೆಂಗಳೂರು: ಹಲವು ಆಡುಭಾಷೆಗಳಿಂದ ತುಂಬಿದ ಕನ್ನಡದಲ್ಲಿ ಅದೆಷ್ಟೊಂದು ಕವಲುಗಳು! ಅದಕ್ಕೇ ಅಲ್ಲವೆ, ಪೂರ್ವಸೂರಿಗಳು ನಮ್ಮ ಈ ನುಡಿಯನ್ನು ‘ಕನ್ನಡಂಗಳ್‌’ ಎಂದು ಬಹುವಚನದಲ್ಲಿ ಕರೆದಿರುವುದು. ಶನಿವಾರದಿಂದ (ಇದೇ 18ರಿಂದ) ನಡೆಯಲಿರುವ ಎರಡು ದಿನಗಳ ಬೆಂಗಳೂರು ಸಾಹಿತ್ಯ ಉತ್ಸವದಲ್ಲಿ ನಾಡಿನ ಅಂತಹ ‘ಬಹುಭಾಷಿಕ ಜಗತ್ತು’ ವಿಶೇಷವಾಗಿ ಚರ್ಚೆಗೆ ಒಳಪಡಲಿದೆ.

ಕನ್ನಡ ನಾಡಿನ ಬಹುಭಾಷಿಕ ಸಂಸ್ಕೃತಿಯ ಭವ್ಯ ‘ಸೌಧ’ವನ್ನು ಉತ್ಸವದಲ್ಲಿ ನಡೆಯಲಿರುವ ಗೋಷ್ಠಿಗಳು ಕಟ್ಟಿಕೊಡಲಿವೆ ಎನ್ನುವ ವಿಶ್ವಾಸ ಸಂಘಟಕರದ್ದಾಗಿದೆ. ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರದಲ್ಲಿ(ಬಿಐಸಿ) ಈ ಸಲದ ಉತ್ಸವ ನಡೆಯಲಿದೆ.

ಹಿಂದಿ ಹೇರಿಕೆ ಪ್ರಯತ್ನಗಳು ನಡೆದಾಗಲೆಲ್ಲ ಭಾರತದ ಬಹುಭಾಷಿಕತ್ವದ ಕುರಿತೂ ಚರ್ಚೆಗಳು ಮುನ್ನೆಲೆಗೆ ಬರುತ್ತಲೇ ಇರುತ್ತವೆ. ಬಹುಭಾಷಿಕ ಸಂಸ್ಕೃತಿಯನ್ನು ಹೇಗೆ ಕಾಪಿಟ್ಟುಕೊಳ್ಳುವುದು ಎಂಬ ವಿಷಯವಾಗಿಯೂ ವಿಚಾರ ಮಂಥನಗಳು ನಡೆಯುತ್ತಲೇ ಇರುತ್ತವೆ. ಅದರ ಮುಂದುವರಿದ ಭಾಗವಾಗಿ ಈ ಸಲದ ಉತ್ಸವದ ಮೊದಲ ದಿನ ‘ಭಾರತೀಯ ಬಹುಭಾಷಿಕತ್ವದ ಭವಿಷ್ಯ’ ಕುರಿತು ಗೋಷ್ಠಿಯನ್ನು ಏರ್ಪಡಿಸಲಾಗಿದೆ. ಹಿರಿಯ ವಿದ್ವಾಂಸ ಪುರುಷೋತ್ತಮ ಬಿಳಿಮಲೆ ಹಾಗೂ ಶಕೀರಾ ಜಬೀನ್‌ ಬಿ. ಅವರು ಚರ್ಚೆಯನ್ನು ನಡೆಸಿಕೊಡಲಿದ್ದಾರೆ.

ADVERTISEMENT

ಹಿಂದಿ ಪೂರ್ವಯುಗದ ಬೃಜ್, ಅವಧಿ, ರಾಜಸ್ಥಾನಿ, ಬಘೇಲಿ, ಭೋಜಪುರಿ, ಬುಂದೇಲಿ, ಮೈಥಿಲಿ, ಛತ್ತೀಸ್‍ಗರಿ, ಗಢವಾಲಿ, ಹರ್ಯಾನ್ವಿ, ಕನೌಜಿ, ಕುಮೌನಿ, ಮಗಧಿ, ಮಾರ್ವಾರಿ ಮೊದಲಾದ ಸುಂದರ ಭಾಷೆಗಳು ತಮ್ಮ ಅಸ್ಮಿತೆ, ಅಸ್ತಿತ್ವಕ್ಕಾಗಿ ಹುಡುಕಾಟ ನಡೆಸಿರುವ ಹೊತ್ತಿನಲ್ಲಿ ಈ ಚರ್ಚೆ ಮಹತ್ವ ಪಡೆದುಕೊಂಡಿದೆ. ಅಳಿವಿನಂಚಿನಲ್ಲಿರುವ ಭಾಷೆಗಳ ಭವಿಷ್ಯದ ಕುರಿತೂ ಸಂವಾದವನ್ನು ಏರ್ಪಡಿಸಲಾಗಿದ್ದು, ಮೊದಲ ಗೋಷ್ಠಿಗೆ ಪೂರಕ ಎನಿಸಿರುವ ಈ ಸಂವಾದ ಚರ್ಚೆಗೆ ರಂಗು ತುಂಬಲಿದೆ.

ಕೊರಗ ಹಾಗೂ ಕೊಂಕಣಿ ಭಾಷೆಗಳ ಕುರಿತೂ ವಿಶೇಷ ಚರ್ಚೆಗಳು ನಡೆಯಲಿವೆ. ಅದರಲ್ಲೂ ‘ಕೊಂಕಣಿ: ಒಂದು ಭಾಷೆ, ಹಲವು ಲಿಪಿ’ ಗೋಷ್ಠಿ ಕುತೂಹಲವನ್ನು ಕೆರಳಿಸಿದೆ. ಈ ಸಾಲಿನ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ದಾಮೋದರ ಮಾವಜೊ, ಮೆಲ್ವಿನ್‌ ರೋಡ್ರಿಗಸ್‌ ಹಾಗೂ ವಿವೇಕ ಶಾನಭಾಗ ಚರ್ಚೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಕೊಡಗು ಹಾಗೂ ತುಳುನಾಡಿನ ಪರಂಪರೆ ಕುರಿತ ಚರ್ಚೆ ಉತ್ಸವದ ಬಹುತ್ವವನ್ನು ಮತ್ತಷ್ಟು ಹೆಚ್ಚಿಸಿದೆ. ಕಲ್ಯಾಣ ಕರ್ನಾಟಕದಲ್ಲಿ ಬಳಕೆಯಲ್ಲಿರುವ ದಖನಿ ಉರ್ದು ಭಾಷೆಯ ಸೊಗಡನ್ನು ಎಂ.ಎನ್‌. ಸಯೀದ್‌ ಮತ್ತು ಕಾರ್ತಿಕ್‌ ಎಂ. ಅವರು ಕಟ್ಟಿಕೊಡಲಿದ್ದಾರೆ. ಪ್ರಚಲಿತ ಜಗತ್ತಿನ ಸಾಹಿತ್ಯದ ವಿದ್ಯಮಾನ ಎನಿಸಿದ ‘ಡಿಜಿಟಲ್‌ ಸಾಹಿತ್ಯ ಕ್ರಾಂತಿ’ ವಿಶೇಷವಾಗಿ ಚರ್ಚೆಗೆ ಒಳಪಡಲಿದೆ. ಬನಶಂಕರಿ ಕುಲಕರ್ಣಿ, ಎಸ್‌.ಶ್ರೀನಿವಾಸ ಶೆಟ್ಟಿ, ರೋಹಿಣಿ ರಂಗನಾಥನ್‌, ಕೆ.ವಿ. ಕಸ್ತೂರಿ ರಾಮ್‌ ಮತ್ತು ಪ್ರತಿಭಾ ನಂದಕುಮಾರ್‌ ಈ ಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ.

ವಿಮರ್ಶಕ ರಾಜೇಂದ್ರ ಚೆನ್ನಿ ಅವರು ‘ಸಕಲ ಜೀವಾತ್ಮಗಳ ಲೇಸನ್ನೇ ಬಯಸುತ್ತಾ’ ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ. ಹಾಲಕ್ಕಿ ಕನ್ನಡದ ವೈಶಿಷ್ಟ್ಯನ್ನು ಅಕ್ಷತಾ ಕೃಷ್ಣಮೂರ್ತಿ ಹಾಗೂ ಫಲ್ಗುಣ ಗೌಡ ತೆರೆದಿಡಲಿದ್ದಾರೆ.

ಭಾನುವಾರದ ಮೊದಲ ಗೋಷ್ಠಿಯಲ್ಲಿ ‘ಕತೆಯೆಂಬುದು ಆತ್ಮಕತೆಯೂ ಹೌದು’ ಎಂಬ ವಿಷಯವಾಗಿ ಕತೆಗಾರರಾದ ಜೋಗಿ ಮತ್ತು ಜಿ.ಎನ್‌. ಮೋಹನ್‌ ನಡೆಸುವ ಸಂವಾದ ಕುತೂಹಲ ಮೂಡಿಸಿದೆ. ಹವ್ಯಕ ಕನ್ನಡದ ಸೊಗಡು–ಸೊಲ್ಲು ಕುರಿತು ತಾಳ್ತಜೆ ವಸಂತಕುಮಾರ್‌ ಮತ್ತು ಪಾದೇಕಲ್ಲು ವಿಷ್ಣುಭಟ್ಟ ವಿಚಾರ ಮಂಡಿಸಲಿದ್ದಾರೆ. ಸಂಕೇತಿ ಕುರಿತು ದೀಪಾ ಗಣೇಶ್‌, ಬ್ಯಾರಿ ಕುರಿತು ಬಿ.ಎಂ. ಹನೀಫ್‌, ಎನ್‌.ಎ.ಎಂ. ಇಸ್ಮಾಯಿಲ್‌, ನವಾಯತಿ ಕುರಿತು ಸಯ್ಯದ್‌ ಜಮೀರುಲ್ಲಾ ಷರೀಫ್‌, ಸಯ್ಯದ್‌ ಗೌಸ್‌ ಮತ್ತು ಕುಂದಾಪ್ರ ಕನ್ನಡ ಕುರಿತು ಪಂಜು ಗಂಗೊಳ್ಳಿ, ಎಸ್‌.ಎ. ಕೃಷ್ಣಯ್ಯ, ಸುಶೀಲಾ ಪುನೀತ್‌ ಚರ್ಚೆ ನಡೆಸಲಿದ್ದಾರೆ.

‘ನಾಡಿನ ಬಹುಭಾಷಿಕ ಜಗತ್ತಿನ ಮೇಲೆ ಬೆಳಕು ಚೆಲ್ಲುವುದು ಈ ಗೋಷ್ಠಿಗಳ ಮುಖ್ಯ ಉದ್ದೇಶವಾಗಿದೆ’ ಎನ್ನುತ್ತಾರೆ ಸಂಘಟನಾ ಸಮಿತಿಯ ಸದಸ್ಯರಲ್ಲಿ ಒಬ್ಬರಾದ ಪ್ರತೀತಿ ಬಲ್ಲಾಳ.

ಕೊವಿಡ್‌ ನಂತರದ ಕಾಲಘಟ್ಟದ ಸಿನಿಮಾ ಚಟುವಟಿಕೆ, ‘ಲವ್‌ ಗೇಮ್ಸ್‌: ರೊಮ್ಯಾನ್ಸ್‌ ಇನ್‌ ರಿಯಲ್‌ ಲೈಫ್‌’, ‘ಮೆಸ್ಸಿ ವುಮೆನ್: ರೈಟಿಂಗ್ಸ್‌ ಕಾಂಪ್ಲೆಕ್ಸ್‌ ಫಿಮೇಲ್‌ ಕ್ಯಾರೆಕ್ಟರ್ಸ್‌’ ಸೇರಿದಂತೆ ವಿವಿಧ ಗೋಷ್ಠಿಗಳು ನಡೆಯಲಿವೆ. ಸಾನಿಯಾ ಮಿರ್ಜಾ ಚರ್ಚೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಪ್ರವೇಶ ಉಚಿತ
ಉತ್ಸವದ ಗೋಷ್ಠಿಗಳಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಕೊವಿಡ್‌ನ ಮಾರ್ಗಸೂಚಿ ಪಾಲಿಸುವುದು ಕಡ್ಡಾಯ. ಮೊದಲ ಬಂದವರಿಗೆ ಆದ್ಯತೆ ಮೇಲೆ ಪ್ರವೇಶ ಸಿಗಲಿದೆ. ಗೋಷ್ಠಿಗಳ ನೇರಪ್ರಸಾರ ಇರುವುದಿಲ್ಲ. ಕೆಲವು ದಿನಗಳ ಬಳಿಕ ಯುಟ್ಯೂಬ್‌ನಲ್ಲಿ ಗೋಷ್ಠಿಗಳ ಪೂರ್ಣ ಚಿತ್ರೀಕರಣವನ್ನು ಅಪ್‌ಲೋಡ್‌ ಮಾಡಲಾಗುತ್ತದೆ ಎಂದು ಉತ್ಸವದ ಸಲಹೆಗಾರರಲ್ಲಿ ಒಬ್ಬರಾದ ವಿ.ರವಿಚಂದರ್‌ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.