
ಬೆಂಗಳೂರು: ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್) ಕರೆದಿರುವ ಜಾಹೀರಾತು ಟೆಂಡರ್ ವಿವಾದಕ್ಕೀಡಾಗಿದೆ. ಒಬ್ಬ ವ್ಯಕ್ತಿಗೆ ಅನುಕೂಲವಾಗುವಂತೆ ಮಾಡಲು ತಾಂತ್ರಿಕ ಸ್ಕೋರಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ. ಇದು ಪಾರದರ್ಶಕತೆ ಮತ್ತು ನ್ಯಾಯಯುತ ಸ್ಪರ್ಧೆಯನ್ನು ದುರ್ಬಲಗೊಳಿಸಿದೆ ಎಂದು ಬಿಡ್ಡರ್‌ಗಳು ಆರೋಪಿಸಿದ್ದಾರೆ.
ನಮ್ಮ ಮೆಟ್ರೊಗೆ ಪ್ರಯಾಣ ದರ ಹೊರತಾದ ಆದಾಯಕ್ಕೆ ಜಾಹೀರಾತು ಪ್ರಮುಖ ಕೊಡುಗೆಯಾಗಿದೆ, ಇದು ನಿಗಮವು ತನ್ನ ಜಾಲವನ್ನು ವಿಸ್ತರಿಸುವಾಗ ಮತ್ತು ಸಾಲಗಳನ್ನು ಮರುಪಾವತಿಸುವಾಗ ಹಣ ಸಂಗ್ರಹಿಸಲು ಸಹಾಯ ಮಾಡುತ್ತದೆ. ಈ ಟೆಂಡರ್ ಬಹಳ ಹಿಂದಿನಿಂದಲೂ ಬಾಕಿ ಇತ್ತು. ಒಂದು ಸಂಸ್ಥೆಯು ಹೆಚ್ಚಿನ ಮೊತ್ತ ಉಲ್ಲೇಖಿಸದಿದ್ದರೂ, ಆ ಏಜೆನ್ಸಿಗೆ ಅನುಕೂಲವಾಗುವಂತೆ ಟೆಂಡರ್ ಪ್ರಕ್ರಿಯೆ ನಡೆಸಲಾಗಿದೆ ಎಂದು ಟೀಕೆಗಳು ಕೇಳಿಬಂದಿವೆ.
ಸುಮಾರು ಏಳು ವರ್ಷಗಳ ನಂತರ, ಬಿಎಂಆರ್‌ಸಿಎಲ್ ಮೆಟ್ರೊ ಸಂಚಾರ ಇರುವ ಮೂರು ಮಾರ್ಗ, ತಯಾರಾಗುತ್ತಿರುವ ಎರಡು ಮಾರ್ಗ ಹಾಗೂ ಮುಂದೆ ನಿರ್ಮಿಸಲು ಯೋಜಿಸಿರುವ ಮಾರ್ಗಗಳಲ್ಲಿ ಮೆಟ್ರೊ ಕಂಬಗಳು ಮತ್ತು ಪೋರ್ಟಲ್‌ಗಳಲ್ಲಿ ಜಾಹೀರಾತು ಫಲಕಗಳನ್ನು ಪ್ರದರ್ಶಿಸಲು ಟೆಂಡರ್‌ಗಳನ್ನು ಆಹ್ವಾನಿಸಿದೆ. ನೇರಳೆ, ಹಸಿರು, ಹಳದಿ, ಗುಲಾಬಿ ಮತ್ತು ನೀಲಿ ಮಾರ್ಗಗಳನ್ನು ಒಳಗೊಂಡಿರುವ ಒಪ್ಪಂದವು 12 ವರ್ಷಗಳ ಅವಧಿಗೆ ಇದ್ದು, ಅದನ್ನು ಇನ್ನೂ ಮೂರು ವರ್ಷಗಳವರೆಗೆ ವಿಸ್ತರಿಸಲು ಅವಕಾಶ ಇದೆ.
ಟೆಂಡರ್‌ಗಾಗಿ ಅಧಿಕಾರಿಗಳ ಮುಂದೆ ಪ್ರಸ್ತುತಿಗಾಗಿ 30 ಅಂಕ ನಿಗದಿಪಡಿಸಲಾಗಿದೆ. ಇದು ಅಸಹಜವಾದ ನಡೆಯಾಗಿದೆ. ಹೆಚ್ಚು ಬಿಡ್ ಮಾಡಿದವರನ್ನು ಬಿಟ್ಟು ಬೇರೆಯವರನ್ನು ಆಯ್ಕೆ ಮಾಡಲು ಈ ಅಂಕಗಳು ಕಾರಣವಾಗಬಹುದು ಎಂಬುದು ಬಿಡ್ಡರ್‌ಗಳ ದೂರು.
ಈ ರೀತಿಯ ಟೆಂಡರ್ ವ್ವವಸ್ಥೆಯಿಂದ ಬಿಎಂಆರ್‌ಸಿಎಲ್‌ಗೆ ₹ 15 ಕೋಟಿಯಿಂದ ₹ 25 ಕೋಟಿವರೆಗೆ ನಷ್ಟ ಉಂಟಾಗಬಹುದು. ಅಂಕಗಳ ವ್ಯವಸ್ಥೆಯ ಟೆಂಡರ್ ಬದಲಾಯಿಸದೇ ಇದ್ದರೆ ನಮ್ಮ ಮೆಟ್ರೊಗೆ ಆದಾಯದಲ್ಲಿ ಖೋತಾ ಆಗಲಿದೆ ಎಂದು ಜಾಹೀರಾತು ಸಂಸ್ಥೆಯ ಪ್ರತಿನಿಧಿಯೊಬ್ಬರು ತಿಳಿಸಿದರು.
ಸ್ಥಳೀಯ ಬಿಡ್ಡರ್‌ಗಳನ್ನು ಹೊರಗಿಡಲು ಟೆಂಡರ್ ಷರತ್ತುಗಳನ್ನು ಈ ರೀತಿ ನಿಗದಿಪಡಿಸಲಾಗಿದೆ ಎಂದು ಕೆಲವು ಜಾಹೀರಾತುದಾರರು ಆರೋಪಿಸಿದ್ದಾರೆ. ‘ಅಸ್ತಿತ್ವದಲ್ಲಿರುವ ಮತ್ತು ಭವಿಷ್ಯದ ಮೆಟ್ರೊ ಕಾರಿಡಾರ್‌ಗಳನ್ನು ಒಂದೇ ಪ್ಯಾಕೇಜ್‌ಗೆ ಸೇರಿಸಲಾಗಿದೆ. ಜೊತೆಗೆ, ಒಪ್ಪಂದದ ಅವಧಿ ದೀರ್ಘವಾಗಿದೆ. ಈ ಅಂಶಗಳನ್ನು ಗಮನಿಸಿದರೆ, ಹೆಚ್ಚು ಸ್ಪರ್ಧಾತ್ಮಕವಾಗಿರಬೇಕಿತ್ತು. ಆದರೆ, ಅಧಿಕಾರಿಗಳಿಗೆ ತಮಗೆ ಬೇಕಾದವರಿಗೆ ನೀಡಲು ಅವಕಾಶವಾಗುವಂತೆ ಷರತ್ತುಗಳನ್ನು ಮಾಡಲಾಗಿದೆ ಎಂದು ಅವರು ದೂರಿದರು.
ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಜೆ. ರವಿಶಂಕರ್ ಪ್ರತಿಕ್ರಿಯೆಗೆ ಲಭ್ಯರಾಗಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.