ADVERTISEMENT

ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ನಿವಾರಣೆಗೆ ಕ್ರಮ: ಪ್ರತ್ಯೇಕ ನಿಗಮ

ಬೆಂಗಳೂರು ಮಹಾನಗರ ಭೂಸಾರಿಗೆ ಪ್ರಾಧಿಕಾರ ಮಸೂದೆ–2022

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2022, 4:57 IST
Last Updated 24 ಸೆಪ್ಟೆಂಬರ್ 2022, 4:57 IST
ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಉಂಟಾಗಿರುವ ದೃಶ್ಯ ಶುಕ್ರವಾರ ಕಂಡುಬಂತು -ಪ್ರಜಾವಾಣಿ ಚಿತ್ರ/ ರಂಜು ಪಿ
ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಉಂಟಾಗಿರುವ ದೃಶ್ಯ ಶುಕ್ರವಾರ ಕಂಡುಬಂತು -ಪ್ರಜಾವಾಣಿ ಚಿತ್ರ/ ರಂಜು ಪಿ   

ಬೆಂಗಳೂರು: ಬೆಂಗಳೂರು ನಗರದಲ್ಲಿ ವಾಹನಗಳ ಸಂಚಾರದ ಅಭಿವೃದ್ಧಿ, ಕಾರ್ಯಾಚರಣೆ, ನಿರ್ವಹಣೆ, ಮೇಲುಸ್ತುವಾರಿ ಮತ್ತು ಮೇಲ್ವಿಚಾರಣೆಗಾಗಿ ಬೆಂಗಳೂರು ಮಹಾನಗರ ಭೂಸಾರಿಗೆ ನಿಗಮ ರಚನೆ ಉದ್ದೇಶದಿಂದ ‘ಬೆಂಗಳೂರು ಮಹಾನಗರ ಭೂಸಾರಿಗೆ ಪ್ರಾಧಿಕಾರ ಮಸೂದೆ–2022’ ಅನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಧಾನಸಭೆಯಲ್ಲಿ ಶುಕ್ರವಾರ ಮಂಡಿಸಿದರು.

ನಗರದ ಸಂಚಾರ ದಟ್ಟಣೆ ನಿವಾರಿಸುವುದಕ್ಕಾಗಿ ಪ್ರಾಧಿಕಾರವೊಂದನ್ನು ರಚಿಸುವುದಾಗಿ ಬಸವರಾಜ ಬೊಮ್ಮಾಯಿ ಅವರು ಬಜೆಟ್‌ನಲ್ಲಿ ಪ್ರಕಟಿಸಿದ್ದರು.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಮಹಾನಗರ ವಲಯ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಸಂಚಾರ ಪೊಲೀಸ್‌, ಬಿಎಂಟಿಸಿ, ಬಿಬಿಎಂಪಿ, ಮೆಟ್ರೋ ರೈಲ್ವೇ ನಿಗಮ ಮತ್ತು ಸಾರಿಗೆ ಇಲಾಖೆ ಸೇರಿ ವಿವಿಧ ಏಜೆನ್ಸಿಗಳನ್ನು ಈ ಪ್ರಾಧಿಕಾರದ ವ್ಯಾಪ್ತಿಗೆ ತಂದು ವಿಸ್ತೃತ ಯೋಜನೆಗಳನ್ನು ರೂಪಿಸಲಾಗುವುದು.

ADVERTISEMENT

ಮಸೂದೆಯ ಪ್ರಮುಖ ಅಂಶಗಳು

* ವಾಹನ ನಿಲುಗಡೆ ನೀತಿ, ಮೋಟಾರು ವಾಹನೇತರ ಸಾರಿಗೆ ನೀತಿ, ಸಾಗಣೆ ಆಧಾರಿತ ಅಭಿವೃದ್ಧಿ ನೀತಿ, ಬಹುಮಾದರಿ ಸಂಯೋಜಿತ ನೀತಿ, ಸರಕು ಸಾಗಣೆ ನೀತಿ ಮತ್ತು ಇತರೆ ಸಂಚಾರ ನೀತಿ ರೂಪಿಸಲಾಗುವುದು

* ನಗರ ಸಂಚಾರ ಪ್ರದೇಶದಲ್ಲಿ ಯೋಜಿತ ಅಭಿವೃದ್ಧಿಗಾಗಿ ಒಂದು ಸಮಗ್ರ ಯೋಜನೆಯನ್ನು ಸಿದ್ಧಪಡಿಸುವುದು

* ವಿವಿಧ ಮಾದರಿಗಳ ಮೂಲ ಸೌಕರ್ಯ, ಸೌಲಭ್ಯಗಳು ಮತ್ತು ಕಾಮಗಾರಿಗಳು, ನಗರದಲ್ಲಿ ಸಂಪೂರ್ಣವಾದ ರಸ್ತೆ ಜಾಲ (ಒಂದು ಚ.ಕಿ.ಮೀ ಗ್ರಿಡ್‌ ಆದ್ಯತೆಯನ್ನು ಒಳಗೊಂಡಿರಬೇಕು), ಸಾರ್ವಜನಿಕ ಸಾರಿಗೆಯ ಈಗಿನ ಮತ್ತು ಉದ್ದೇಶಿತ ಮಾರ್ಗದ ಯೋಜನೆಗಳು, ಪ್ರಯಾಣದ ಬೇಡಿಕೆ ಆಧಾರದ ಮೇಲೆ ಸ್ಥಾಪಿಸಲಾದ ರಸ್ತೆಗಳ ಶ್ರೇಣಿ, ಶ್ರೇಣಿಯ ಎಲ್ಲಾ ಮಟ್ಟಗಳ ರಸ್ತೆಗಳನ್ನು ನಿರ್ಮಿಸುವುದಕ್ಕೆ ಬೇಕಾದ ಮಾನದಂಡಗಳು

* ಪಾದಚಾರಿ ಮಾರ್ಗ, ಸೈಕಲ್‌ ಟ್ರಾಕ್‌ಗಳು, ಒಳಚರಂಡಿಗಳು ಮತ್ತು ಅವುಗಳ ನಿರ್ವಹಣೆಯ ಮಾನದಂಡ

* ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ 2016 ರ ಮೇರೆಗೆ ಪರಿಭಾಷಿಸಲಾದಂತೆ, ನಿರ್ದಿಷ್ಟ ಮಾನದಂಡದ ಅಂಗವಿಕಲತೆ ಇರುವ ಮತ್ತು ಅಂಗವಿಕಲ ವ್ಯಕ್ತಿಗಳಿಗಾಗಿ ಸಂಚಾರ ಮತ್ತು ಸಾರಿಗೆ ಸುಲಭವಾಗಿ ಲಭ್ಯವಾಗುವಂತೆ ಮಾಡುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.