ADVERTISEMENT

ಸಂಬಳದ ಹಣ ಕೇಳಿದ್ದಕ್ಕೆ ಕೊಂದು, ಶವ ಸುಟ್ಟ ಆರೋಪಿಗಳು!

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2020, 12:12 IST
Last Updated 18 ಮಾರ್ಚ್ 2020, 12:12 IST
ಆರೋಪಿ
ಆರೋಪಿ   

ಬೆಂಗಳೂರು: ವ್ಯಕ್ತಿಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿ ದೇಹವನ್ನು ಸುಟ್ಟುಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮಮೂರ್ತಿನಗರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಚಿಂತಾಮಣಿ ತಾಲ್ಲೂಕಿನ ಚಿಕ್ಕಕಟ್ಟಿಗೆನಹಳ್ಳಿ ನಿವಾಸಿ ಟಿ. ಕೃಷ್ಣ ಅಲಿಯಾಸ್ ಟೋರಿ ಕೃಷ್ಣ (43) ಮತ್ತು ಹಲಸೂರಿನ ಕೃಷ್ಣ ಅಲಿಯಾಸ್ ಮಾಯಾಕೃಷ್ಣ (41) ಬಂಧಿತರು. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಒಂದು ಆಟೊ, ಒಂದು ಟಿವಿಎಸ್, ಸ್ಟಾರ್ ಸಿಟಿ ಬೈಕ್, ಚಾಕು ಮತ್ತು ಸೈಜ್ ಕಲ್ಲನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆರೋಪಿಗಳು ಮಾರ್ಚ್ 10ರಂದು ಶ್ರೀನಿವಾಸ್ ಎಂಬವರನ್ನು ಕೊಲೆ ಮಾಡಿ, ಮೃತದೇಹವನ್ನು ಸುಟ್ಟು ಹಾಕಿದ್ದರು. ಈ ಹಿನ್ನೆಲೆಯಲ್ಲಿ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ADVERTISEMENT

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಿದ್ದರು.

ಮೃತ ಶ್ರೀನಿವಾಸ್ ಮತ್ತು ಆರೋಪಿಗಳಿಗೆ ಸಂಬಳ ನೀಡುವ ವಿಚಾರದಲ್ಲಿ ಪದೇ ಪದೇ ಜಗಳ ನಡೆಯುತ್ತಿತ್ತು. ಇದೇ 9ರಂದು ಶ್ರೀನಿವಾಸ್, ಆರೋಪಿಗಳಿಗೆ ಕರೆ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಸಂಬಳದ ಹಣ ನೀಡುವಂತೆ ಕೇಳಿದ್ದ ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ಆರೋಪಿಗಳ ಪೈಕಿ ಟಿ. ಕೃಷ್ಣ, ಇದೇ 9ರಂದು ಮಾದಪ್ಪ ಲೇಔಟ್ ಬಳಿ ಇರುವ ತರುಣ್ ಪ್ಯಾಕರ್ಸ್ ಆ್ಯಂಡ್ ಮೂವರ್ಸ್ ಬಳಿಗೆ ತೆರಳಿ ಶ್ರೀನಿವಾಸ್​ ಜೊತೆ ಜಗಳ ಮಾಡಿದ್ದ.

ಅದೇ ದಿನ ರಾತ್ರಿ ಶ್ರೀನಿವಾಸ್ ಮಲಗಿದ್ದ ಸ್ಥಳಕ್ಕೆ ಹೋಗಿದ ಟಿ. ಕೃಷ್ಣ, ತಲೆ ಮೇಲೆ ಮೂರು ಬಾರಿ ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿದ್ದಾನೆ. ಮರುದಿನ ಮಾಯಾಕೃಷ್ಣನನ್ನೂ ಜೊತೆಗೆ ಕರೆದುಕೊಂಡ ಟಿ. ಕೃಷ್ಣ, ಮೃತದೇಹವನ್ನು ರಾಂಪುರ ಕೆರೆಗೆ ಹಾಕಲು ಯತ್ನಿಸಿದ್ದಾನೆ. ಆದರೆ, ಶವವನ್ನು ಎತ್ತಲು ಸಾಧ್ಯವಾಗದೆ ಇಬ್ಬರೂ ಆ ಯತ್ನ ಕೈಬಿಟ್ಟಿದ್ದರು.

ಬಳಿಕ ಅದೇ ದಿನ ರಾತ್ರಿ 11.30ರ ಸುಮಾರಿಗೆ ಆರೋಪಿಗಳಿಬ್ಬರೂ ಸೇರಿ ಮೃತದೇಹಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸುಡಲು ಯತ್ನಿಸಿದ್ದಾರೆ. ಆರೋಪಿಗಳು ಈ ಹಿಂದೆ ಕೂಡಾ ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಗೊತ್ತಾಗಿದೆ. ಆರೋಪಿಗಳನ್ನು ತೀವ್ರ ತನಿಖೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.