ADVERTISEMENT

ಉದ್ಯಮಿ ಅಪಹರಣ: 7 ಮಂದಿ ಬಂಧನ

​ಪ್ರಜಾವಾಣಿ ವಾರ್ತೆ
Published 30 ಜನವರಿ 2020, 2:50 IST
Last Updated 30 ಜನವರಿ 2020, 2:50 IST
   

ಬೆಂಗಳೂರು: ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರನ್ನು ಅಪಹರಿಸಿದ ಕೆಲವೇ ತಾಸುಗಳಲ್ಲಿ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ರಕ್ಷಿಸಿ, ಏಳು ಮಂದಿಯನ್ನು ಬಂಧಿಸಿದ್ದಾರೆ.

ನಾಗರಬಾವಿ ನಿವಾಸಿ ಶ್ರೀನಿವಾಸ್ ರಾವ್ (50) ಅಪಹರಣಕ್ಕೆ ಒಳಗಾಗಿ, ಪೊಲೀಸರಿಂದ ರಕ್ಷಣೆಗೊಳಗಾದ ಉದ್ಯಮಿ. ಸಂಬಂಧಿಕರ ಪುತ್ರಿ ಬಗ್ಗೆ ಅವಾಚ್ಯವಾಗಿ ನಿಂದಿಸಿದರು ಎಂಬ ಕಾರಣಕ್ಕೆ ಆರೋಪಿಗಳು ಶ್ರೀನಿವಾಸ್‌ ಅವರನ್ನು ಅಪಹರಿಸಿದ್ದರು.

‘ಆಡುಗೋಡಿ ನಿವಾಸಿಗಳಾದ ಮೂರ್ತಿ, ಭರತ್, ಚರಣ್, ಪುನೀತ್, ವಿಜಯ, ಸತ್ಯನಾರಾಯಣ್,
ಸುನೀಲ್ ಬಂಧಿತರು. ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ’ ಎಂದು ಪೊಲೀಸರು ತಿಳಿಸಿದರು.

ADVERTISEMENT

ಉದ್ಯಮಿಯಾಗಿರುವ ಶ್ರೀನಿವಾಸ್ ತಮ್ಮ ಹತ್ತಿರದ ಸಂಬಂಧಿಯೊಬ್ಬರ ಪುತ್ರಿಯನ್ನು ಕೌಟುಂಬಿಕ ವಿಷಯಕ್ಕೆ ಸಂಬಂಧಿಸಿ ಎಲ್ಲರ ಎದುರು ನಿಂದಿಸಿದ್ದರು. ಇದು ಎರಡು ಕುಟುಂಬಗಳ ಮಧ್ಯೆ ವೈಷಮ್ಯ ಬೆಳೆಯಲು ಕಾರಣ
ವಾಗಿತ್ತು. ಶ್ರೀನಿವಾಸ್ ಅವರಿಗೆ ಬುದ್ಧಿ ಕಲಿಸಬೇಕೆಂದು ಆರೋಪಿಗಳು ಜ. 25ರಂದು ರಾತ್ರಿ ಎಂಟು
ಗಂಟೆ ಸುಮಾರಿಗೆ ಅವರ ಮನೆಗೆ ನುಗ್ಗಿದ್ದರು. ಶ್ರೀನಿವಾಸ್ ಮೇಲೆ ಹಲ್ಲೆ ನಡೆಸಿ, ಹೊರಗೆ ಎಳೆದು ತಂದಿದ್ದರು. ಈ ವೇಳೆ ತಂದೆಯ ರಕ್ಷಣೆಗೆ ಬಂದ ಅವರ ಮಕ್ಕಳ ಮೇಲೆಯೂ ಆರೋಪಿಗಳು ಹಲ್ಲೆ ನಡೆಸಿದ್ದರು. ಬಳಿಕ ಶ್ರೀನಿವಾಸ್ ಅವರನ್ನು ಕಾರಿನಲ್ಲಿ ಅಪಹರಿಸಿದ್ದರು.

ಸುಮನಹಳ್ಳಿ ಮಾರ್ಗವಾಗಿ ಶ್ರೀನಿವಾಸ್ ಅವರನ್ನು ಕಾರಿನಲ್ಲಿ ಅಪಹರಿಸಿಕೊಂಡು ಹೋಗುವಾಗ ಬ್ಲೇಡ್‌ನಿಂದ ಹಲ್ಲೆ ನಡೆಸಿದ್ದರು. ಈ ವೇಳೆ ಶ್ರೀನಿವಾಸ್ ಜೋರಾಗಿ ಚೀರಾಡಿದ್ದಾರೆ. ಸುಮನಹಳ್ಳಿ
ಬಳಿ ನಿಂತಿದ್ದ ಕಾಮಾಕ್ಷಿಪಾಳ್ಯ ಪೊಲೀಸರು ಕಾರು ತಡೆದು ವಿಚಾರಣೆ ನಡೆಸಿದಾಗ ಅಪಹರಣ ಬಯಲಿಗೆ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.