
ಬೆಂಗಳೂರು: ದೀಪಾವಳಿ ಹಬ್ಬ ಮುಗಿದರೂ ನಗರದಲ್ಲಿ ಪಟಾಕಿ ಅವಘಡಗಳು ನಿಂತಿಲ್ಲ. ಮಕ್ಕಳು ಸೇರಿ ವಿವಿಧ ವಯೋಮಾನದ 200ಕ್ಕೂ ಅಧಿಕ ಮಂದಿಯ ಕಣ್ಣಿಗೆ ಪಟಾಕಿ ಕಿಡಿ ಈ ವರ್ಷ ಹಾನಿ ಮಾಡಿದೆ.
ಗಾಯಗೊಂಡವರಲ್ಲಿ ಹೆಚ್ಚಿನವರು ಲಕ್ಷ್ಮಿ ಬಾಂಬ್, ಬಿಜಲಿ ಪಟಾಕಿ ಹಾಗೂ ಹೂ ಕುಂಡ ಸಿಡಿಸಿದವರಾಗಿದ್ದಾರೆ. ಮಿಂಟೊ ಕಣ್ಣಿನ ಆಸ್ಪತ್ರೆಗೆ ಇದೇ 20ರಿಂದ ಐದು ದಿನಗಳ ಅವಧಿಯಲ್ಲಿ ಪಟಾಕಿ ಸಂಬಂಧಿ ಗಾಯಕ್ಕೆ 45 ಮಂದಿ ಭೇಟಿ ನೀಡಿದ್ದಾರೆ. ಅವರಲ್ಲಿ 17 ಮಂದಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಐದು ಮಂದಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. 11 ಮಂದಿ ಒಳರೋಗಿಗಳಾಗಿ ಚಿಕಿತ್ಸೆ ಪಡೆದರೆ, ಉಳಿದವರು ಹೊರರೋಗಿ ವಿಭಾಗದಲ್ಲಿ ಚಿಕಿತ್ಸೆ ಪಡೆದು ತೆರಳಿದ್ದಾರೆ.
ಮಿಂಟೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದವರಲ್ಲಿ 20 ಮಂದಿ ಪಟಾಕಿ ಹಚ್ಚಿದವರಾದರೆ, 25 ಮಂದಿ ಪಟಾಕಿ ಸಿಡಿತವನ್ನು ವೀಕ್ಷಿಸುವ ವೇಳೆ ಗಾಯಗೊಂಡವರಾಗಿದ್ದಾರೆ. ಈ ಆಸ್ಪತ್ರೆಯಲ್ಲಿ ಪಟಾಕಿ ಗಾಯಕ್ಕೆ ಚಿಕಿತ್ಸೆ ಪಡೆದವರಲ್ಲಿ ಮಹಿಳೆಯರಿಗಿಂತ ಪುರುಷರೇ ಅಧಿಕ ಸಂಖ್ಯೆಯಲ್ಲಿದ್ದಾರೆ.
ನಾರಾಯಣ ನೇತ್ರಾಲಯದಲ್ಲಿಯೂ ಪಟಾಕಿ ಗಾಯಕ್ಕೆ ಸಂಬಂಧಿಸಿದಂತೆ ಈ ವರ್ಷ ಹಬ್ಬದ ಅವಧಿಯಲ್ಲಿ ಅಧಿಕ ಮಂದಿ ಚಿಕಿತ್ಸೆ ಪಡೆದಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 93ಕ್ಕೆ ಏರಿಕೆಯಾಗಿದೆ. 61 ಪ್ರಕರಣಗಳಲ್ಲಿ ಸ್ವಯಂಪ್ರೇರಿತ ತಪ್ಪಿನಿಂದ ಗಾಯಗಳನ್ನು ಮಾಡಿಕೊಂಡರೆ, 32 ಪ್ರಕರಣಗಳಲ್ಲಿ ಪಟಾಕಿ ಸಿಡಿತ ವೀಕ್ಷಿಸುತ್ತಿರುವವರಾಗಿದ್ದಾರೆ. ಏಳು ಮಂದಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.
ವಿಕ್ಟೋರಿಯಾ ಆವರಣದಲ್ಲಿರುವ ಸುಟ್ಟಗಾಯಗಳ ವಿಭಾಗದಲ್ಲಿ ಐವರು ಚಿಕಿತ್ಸೆ ಪಡೆದುಕೊಂಡಿದ್ದಾರೆ. ನೇತ್ರಧಾಮದಲ್ಲಿ 18, ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ 13, ಶೇಖರ್ ಕಣ್ಣಿನ ಆಸ್ಪತ್ರೆಯಲ್ಲಿ 13, ಡಾ.ಅಗರ್ವಾಲ್ಸ್ ಆಸ್ಪತ್ರೆಯಲ್ಲಿ ಆರು ಮಂದಿ ಸೇರಿ ನಗರದ ವಿವಿಧ ಕಣ್ಣಿನ ಆಸ್ಪತ್ರೆಗಳಿಂದ, 200ಕ್ಕೂ ಅಧಿಕ ಮಂದಿಗೆ ಪಟಾಕಿ ಗಾಯ ಸಂಬಂಧ ಚಿಕಿತ್ಸೆ ಒದಗಿಸಲಾಗಿದೆ.
ಈ ವರ್ಷ ಪಟಾಕಿ ಗಾಯ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ. ಸೂಕ್ತ ಮುನ್ನೆಚ್ಚರಿಕೆ ವಹಿಸದ ಪರಿಣಾಮ ಮಕ್ಕಳು ವೀಕ್ಷಕರೂ ಅಧಿಕ ಸಂಖ್ಯೆಯಲ್ಲಿ ಗಾಯಗೊಂಡಿದ್ದಾರೆಡಾ. ನರೇನ್ ಶೆಟ್ಟಿ ನಾರಾಯಣ ನೇತ್ರಾಲಯದ ನಿರ್ದೇಶಕ
ಪಟಾಕಿ ಸಿಡಿತದಿಂದ ಮಕ್ಕಳೇ ಅಧಿಕ ಸಂಖ್ಯೆಯಲ್ಲಿ ಗಾಯಗೊಂಡಿದ್ದಾರೆ. ಮಿಂಟೊ ಕಣ್ಣಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದವರಲ್ಲಿ 24 ಮಂದಿ ವಯಸ್ಕರಾದರೆ 21 ಮಕ್ಕಳು ಪಟಾಕಿ ಕಿಡಿಯಿಂದಾದ ಕಣ್ಣಿನ ಗಾಯಕ್ಕೆ ಚಿಕಿತ್ಸೆ ಪಡೆದಿದ್ದಾರೆ. ಹಲವರ ಕಣ್ಣಿನ ರೆಪ್ಪೆಗಳು ಸುಟ್ಟಿವೆ. ನಾರಾಯಣ ನೇತ್ರಾಲಯದಲ್ಲಿ ಚಿಕಿತ್ಸೆ ಪಡೆದವರಲ್ಲಿ 37 ಮಂದಿ ವಯಸ್ಕರಾದರೆ 56 ಮಂದಿ 18 ವರ್ಷದೊಳಗಿನವರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.