ADVERTISEMENT

ಬೆಂಗಳೂರು | ‘ಕತೆಗೆ ಕಾಲ–ದೇಶ–ಭಾಷೆಯ ಕಟ್ಟುಪಾಡೇಕೆ’

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2025, 23:14 IST
Last Updated 20 ಏಪ್ರಿಲ್ 2025, 23:14 IST
ಸಂವಾದದಲ್ಲಿ ಶೈನಿ ಆ್ಯಂಟನಿ, ಬಾನು ಮುಷ್ತಾಕ್, ದೀಪಾ ಭಸ್ತಿ 
–ಪ್ರಜಾವಾಣಿ ಚಿತ್ರ
ಸಂವಾದದಲ್ಲಿ ಶೈನಿ ಆ್ಯಂಟನಿ, ಬಾನು ಮುಷ್ತಾಕ್, ದೀಪಾ ಭಸ್ತಿ  –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಕತೆಯೊಂದು ಜಗತ್ತಿನ ಯಾವುದೇ ಕಾಲ–ದೇಶಗಳೊಂದಿಗೆ ಬೆಸೆದುಕೊಳ್ಳಲು ಭಾಷೆಯೇ ಮುಖ್ಯವಾಗುತ್ತದೆ. ಅದೇ ಸಂದರ್ಭದಲ್ಲಿ ಭಾಷಿಕ ಕಟ್ಟುಪಾಡುಗಳನ್ನು ಒಡೆದುಹಾಕುವ ಯತ್ನಗಳೂ ಅಷ್ಟೇ ಮುಖ್ಯವಾಗುತ್ತವೆ. ಕನ್ನಡ, ಉರ್ದು, ಹಿಂದಿ ಅಥವಾ ಈ ಎಲ್ಲ ಭಾಷೆಗಳ ಸೊಗಡನ್ನು ಉಳಿಸಿಕೊಂಡು ಇಂಗ್ಲಿಷ್‌ಗೆ ಅನುವಾದ ಮಾಡಿದಾಗಲೂ ಕತೆಯು, ಮೂಲದಷ್ಟೇ ಶಕ್ತವಾಗಿರುತ್ತದೆ...’

ಬಾನು ಮುಷ್ತಾಕ್‌ ಅವರ ಆಯ್ದ ಕತೆಗಳ ಆಂಗ್ಲರೂಪ ‘ಹಾರ್ಟ್‌ ಲ್ಯಾಂಪ್‌’ ಕುರಿತು ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರದಲ್ಲಿ (ಬಿಐಸಿ) ಭಾನುವಾರ ನಡೆದ ಸಂವಾದದಲ್ಲಿ ವ್ಯಕ್ತವಾದ ಅಭಿಪ್ರಾಯಗಳ ಕೂಡುರೂಪವಿದು.

ನಗರದ ಆಗಸಕ್ಕೆ ಕವಿದಿದ್ದ ಮೋಡದ ಮಧ್ಯೆ ಬಿಐಸಿಯಲ್ಲಿ, ಬಾನು ಮುಷ್ತಾಕ್‌ ಮತ್ತು ಅವರ ಕತೆಗಳನ್ನು ಇಂಗ್ಲಿಷ್‌ನಲ್ಲಿ ಕಟ್ಟಿಕೊಟ್ಟಿರುವ ಅನುವಾದಕಿ ದೀಪಾ ಭಸ್ತಿ ಅವರ ಮಾತುಗಳನ್ನು ಕೇಳಲು ಓದುಗರು ಕಿಕ್ಕಿರಿದು ತುಂಬಿದ್ದರು. ಸಂವಾದ ನಡೆಸಿಕೊಟ್ಟ ಶೈನಿ ಆ್ಯಂಟಿನಿ ಅವರು ಮುಂದಿಟ್ಟ ಪ್ರಶ್ನೆಗೆ ಲೇಖಕಿ ಮತ್ತು ಅನುವಾದಕಿ ಇಬ್ಬರೂ ಉತ್ತರಿಸುತ್ತಲೇ, ಸಭಿಕರೊಂದಿಗೂ ಮಾತಿಗಿಳಿದರು.

ADVERTISEMENT

ಮುಸ್ಲಿಂ ಸಮುದಾಯದ ಲೇಖಕಿ ಕನ್ನಡದಲ್ಲಿ ಬರೆಯುವ ಬಗ್ಗೆ ಸಭಿಕರಿಂದ ಬಂದ ಪ್ರಶ್ನೆಗೆ ಬಾನು ಅವರು, ‘ನಮ್ಮ ಕತೆಯನ್ನು ನೀನೇಕೆ ಕನ್ನಡದಲ್ಲಿ ಬರೆಯುತ್ತೀಯ ಎಂದು ನನ್ನ ಸಮುದಾಯದ ಹಲವು ಮಂದಿ ನನ್ನನ್ನು ಪ್ರಶ್ನಿಸುತ್ತಲೇ ಇರುತ್ತಾರೆ. ನಮ್ಮ ಮಧ್ಯೆ ಇಲ್ಲದೇ ಇರುವ ಇಂತಹ ಗೋಡೆಗಳನ್ನು ನಾವೇಕೆ ಕಟ್ಟಿಕೊಳ್ಳಬೇಕು’ ಎಂದು ಮರುಪ್ರಶ್ನೆ ಹಾಕಿದರು.

‘ಬೇರೆ ಬೇರೆ ಸಮುದಾಯಗಳ ಸಾಮಾಜಿಕ ಸ್ಥಿತಿಯ ಅರಿವಿನ ಬಗ್ಗೆ ಪರಸ್ಪರರ ಮಧ್ಯೆ ಇರಬಹುದಾದ ಅಂತರವನ್ನು ನನ್ನ ಕತೆಗಳು ಇಲ್ಲವಾಗಿಸುತ್ತವೆ ಎಂದು ನಾನು ನಂಬಿದ್ದೇನೆ’ ಎಂದರು.

ಕನ್ನಡ, ಉರ್ದು ಮತ್ತು ಹಿಂದಿ ಮಿಶ್ರಿತ ಇಂಗ್ಲಿಷ್‌ ಅನ್ನು ಅನುವಾದಕ್ಕೆ ಆಯ್ಕೆ ಮಾಡಿಕೊಂಡದ್ದರ ಬಗೆಗಿನ ಪ್ರಶ್ನೆಯನ್ನು ಸಭಿಕರು ದೀಪಾ ಭಸ್ತಿ ಎದುರಿಟ್ಟರು. ದೀಪಾ, ‘ಹಾರ್ಟ್‌ ಲ್ಯಾಂಪ್‌ನಲ್ಲಿರುವುದು ನಮಗೆಲ್ಲರಿಗೂ ಅರ್ಥವಾಗಬಲ್ಲ ಮತ್ತು ಮನಸ್ಸಿಗೆ ನಾಟಬಲ್ಲ ಇಂಗ್ಲಿಷ್‌. ಅದನ್ನು ಬ್ರಿಟನ್‌ ಇಂಗ್ಲಿಷ್‌ನಲ್ಲಿ ಅನುವಾದಿಸಿಬಿಟ್ಟರೆ, ಅದರಲ್ಲಿನ ನಾಟುವ ಶಕ್ತಿ ಇಲ್ಲದೇ ಹೋಗುತ್ತದೆ’ ಎಂದರು.

ಮಾತನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದ ಬಾನು ಅವರು, ‘ಇಂಗ್ಲಿಷ್‌ ಜನರ ಜೀವನವನ್ನು ಅರ್ಥಮಾಡಿಕೊಳ್ಳಲು ನಾವು ಅವರದ್ದೇ ಭಾಷೆಯಲ್ಲಿ ಬಹಳಷ್ಟು ಓದಿದ್ದೇವೆ. ಅವರೂ ನಮ್ಮನ್ನು ನಮ್ಮ ಭಾಷೆಯಲ್ಲೇ ಅರ್ಥಮಾಡಿಕೊಳ್ಳಬೇಕಲ್ಲವೇ? ಅಂತಹದ್ದೊಂದು ಅವಕಾಶವನ್ನು ದೀಪಾ ಭಸ್ತಿ ಅವರ ಅನುವಾದ ಒದಗಿಸಿಕೊಡುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.