ಬೆಂಗಳೂರು: ಅಧಿಕಾರಿಗಳು, ಸಿಬ್ಬಂದಿ ಮತ್ತು ವಾಹನ ಮಾಲೀಕರು ಸೇರಿ ವಾಹನಗಳ ವಿಸ್ತೀರ್ಣವನ್ನು ಕಡಿಮೆ ತೋರಿಸಿ ಸರ್ಕಾರಕ್ಕೆ ತೆರಿಗೆ ವಂಚಿಸಿದ್ದಾರೆ ಎಂದು ತನಿಖಾ ತಂಡ ನೀಡಿದ್ದ ವರದಿ ಆಧರಿಸಿ ತಪ್ಪೆಸಗಿದ ಅಧಿಕಾರಿಗಳನ್ನು ಪತ್ತೆ ಹಚ್ಚಲು ಸಾರಿಗೆ ಇಲಾಖೆ ಮುಂದಾಗಿದೆ.
ಎಲೆಕ್ಟ್ರಾನಿಕ್ ಸಿಟಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ಖಾಸಗಿ ಸೇವಾ ವಾಹನಗಳು ಹಾಗೂ ಮ್ಯಾಕ್ಸಿಕ್ಯಾಬ್ ವಾಹನಗಳ ವಿಸ್ತೀರ್ಣ ವನ್ನು ಸರಿಯಾಗಿ ದಾಖಲಿಸುತ್ತಿಲ್ಲ ಎಂಬ ದೂರುಗಳು ಬಂದಿದ್ದವು. ಇದನ್ನು ಆಧರಿಸಿ ಸಾರಿಗೆ ಆಯುಕ್ತರು ಜಂಟಿ ಆಯುಕ್ತರ ನೇತೃತ್ವದ ತಪಾಸಣಾ ತಂಡ ವನ್ನು ರಚಿಸಿದ್ದರು. ಕಡತ ಪರಿಶೀಲನೆ, ವಾಹನ ತಪಾಸಣೆಗಳ ಬಳಿಕ ಈ ತಂಡವು ವರದಿಯನ್ನು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರಿಗೆ 2023ರ ಜೂನ್‌ನಲ್ಲಿ ನೀಡಿತ್ತು. 24 ವಾಹನಗಳ ತಪಾಸಣೆ ನಡೆಸಿದಾಗ ₹21.12 ಲಕ್ಷ ವಂಚನೆ ಆಗಿರುವುದು ಗೊತ್ತಾಗಿದ್ದು, 3,240 ವಾಹನಗಳ ತಪಾಸಣೆ ನಡೆಯ ಬೇಕಿದೆ ಎಂದು ವರದಿಯಲ್ಲಿ ತಿಳಿಸಲಾಗಿತ್ತು.
‘ವರದಿ ಬಂದ ಬಳಿಕ ಲೆಕ್ಕ ಪರಿಶೋಧನೆ ನಡೆಸಬೇಕಿತ್ತು. ಆದರೆ, ನಮ್ಮಲ್ಲಿ ಲೆಕ್ಕ ಪರಿಶೋಧನಾ ತಂಡ ಇಲ್ಲದ ಕಾರಣ ರಾಜ್ಯ ಲೆಕ್ಕ ಪರಿಶೋಧನಾ ಇಲಾಖೆಗೆ ಒಪ್ಪಿಸಲಾಗಿತ್ತು. ಅವರು ಪರಿಶೋಧನೆ ಮಾಡಿ ವರದಿ ನೀಡಿದ್ದಾರೆ. ಆದರೆ, ತಪ್ಪಿತಸ್ಥ ಅಧಿಕಾರಿಗಳು ಯಾರು ಎಂಬುದು ತನಿಖಾ ತಂಡದ ವರದಿಯಲ್ಲಾಗಲಿ, ಲೆಕ್ಕ ಪರಿಶೋಧನಾ ಇಲಾಖೆಯ ವರದಿಯಲ್ಲಾಗಲಿ ಇಲ್ಲ. ಅದಕ್ಕಾಗಿ ತಪ್ಪಿತಸ್ಥ ಅಧಿಕಾರಿಗಳನ್ನು ಪತ್ತೆ ಮಾಡಲು ಬೆಂಗಳೂರು ನಗರ ಜಂಟಿ ಸಾರಿಗೆ ಆಯುಕ್ತರಿಗೆ ಜುಲೈ 8ರಂದು ಸೂಚಿಸಲಾಗಿದೆ’ ಎಂದು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಹೆಚ್ಚುವರಿ ಆಯುಕ್ತ (ಆಡಳಿತ) ಬಿ.ಪಿ. ಉಮಾಶಂಕರ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
2005ರಿಂದ ವಂಚನೆ ಮಾಡುತ್ತಾ ಬಂದಿರುವುದು ಗೊತ್ತಾಗಿದೆ. ನಿಖರ ತೆರಿಗೆಯನ್ನು ಲೆಕ್ಕ ಹಾಕಿ ನಷ್ಟವಾಗಿರುವು ದನ್ನು ವಸೂಲಿ ಮಾಡಬಹುದು. ತಪ್ಪು ಮಾಡಿರುವ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬಹುದು ಎಂದು ವರದಿಯಲ್ಲಿ ಸಲಹೆ ನೀಡಲಾಗಿದೆ. 1,345 ಮ್ಯಾಕ್ಸಿಕ್ಯಾಬ್, 1,826 ಖಾಸಗಿ ಸೇವಾ ವಾಹನಗಳು ಸೇರಿ 3,271 ವಾಹನಗಳಿಗೆ ಸಂಬಂಧಿಸಿದ ದಾಖಲೆ ಗಳನ್ನು ಪರಿಶೀಲಿಸಲು ಕಡತಗಳನ್ನು ನೀಡುವಂತೆ ತಪಾಸಣಾ ತಂಡ ಕೇಳಿ ಕೊಂಡಿತ್ತು. ಪ್ರಾದೇಶಿಕ ಅಧಿಕಾರಿಗಳು 628 ಮ್ಯಾಕ್ಸಿಕ್ಯಾಬ್ ಮತ್ತು 983 ಖಾಸಗಿ ಸೇವಾ ವಾಹನಗಳ ಕಡತಗಳನ್ನಷ್ಟೇ ಒದಗಿಸಿದ್ದರು. 1,660 ವಾಹನಗಳ ಕಡತ ಗಳನ್ನು ನೀಡಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ. ಪರಿಶೀಲನೆಗೆ ನೀಡದ ಕಡತಗಳ ಬಗ್ಗೆಯೂ ತನಿಖೆ ಆಗಬೇಕಿದೆ ಎಂದು ತಿಳಿಸಿದರು.
ಕೋಟ್ಯಂತರ ರೂಪಾಯಿ ತೆರಿಗೆ ವಂಚಿಸಿರುವ ಈ ಪ್ರಕರಣದ ಬಗ್ಗೆ ಕ್ರಮ ಕೈಗೊಳ್ಳಲು, ಶೀಘ್ರ ತನಿಖೆ ನಡೆಸಲು ಸಾರಿಗೆ ಇಲಾಖೆಯು ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಜಂಟಿ ಆಯುಕ್ತರ ನೇತೃತ್ವದ ತನಿಖಾ ತಂಡವು ಲಭ್ಯವಾದ ವಾಹನಗಳಿಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಿತ್ತು. ಅವುಗಳಿಂದ ₹21.12 ಲಕ್ಷ ತೆರಿಗೆ ವಂಚನೆ ಆಗಿರುವುದನ್ನು ಪತ್ತೆ ಹಚ್ಚಿತ್ತು. ಎಲ್ಲ ವಾಹನಗಳ ಕಡತ ಪರಿಶೀಲನೆ ನಡೆಸಿದರೆ ಕೋಟ್ಯಂತರ ರೂಪಾಯಿ ತೆರಿಗೆ ವಂಚಿಸಿರುವುದು ಬಯಲಾಗಲಿದೆ ಎಂದು ವರದಿಯಲ್ಲೇ ತಿಳಿಸಲಾಗಿದೆ.
628 ಮ್ಯಾಕ್ಸಿಕ್ಯಾಬ್‌ಗಳಿಗೆ ಸಂಬಂಧಿಸಿದಂತೆ ನಮೂನೆ 20ರಲ್ಲಿ 580 ವಾಹನಗಳ ವಿಸ್ತೀರ್ಣ ನಮೂದಿಸಲಾಗಿದೆ. 48 ವಾಹನಗಳ ವಿಸ್ತೀರ್ಣವೇ ದಾಖಲಾಗಿಲ್ಲ. ಅದೇ ರೀತಿ 981 ಇತರ ವಾಹನಗಳ ಪೈಕಿ 901 ವಾಹನಗಳ ವಿಸ್ತೀರ್ಣ ನಮೂದಿಸಲಾಗಿದೆ. 82 ವಾಹನಗಳ ವಿಸ್ತೀರ್ಣ ಇಲ್ಲ. ನಮೂದಾಗಿರುವ ವಿಸ್ತೀರ್ಣ ಕೂಡ ಒಂದೇ ಮಾದರಿಯ ವಾಹನಗಳಿಗೆ ಭಿನ್ನವಾಗಿರುವುದು ಕಂಡು ಬಂದಿದೆ.
ಮೊದಲ ಹಂತದಲ್ಲಿ ಕೆಲವು ವಾಹನಗಳನ್ನು ತಪಾಸಣೆ ನಡೆಸಲು ನಿರ್ಧರಿಸಲಾಗಿತ್ತು. 117 ವಾಹನಗಳನ್ನು ಹಾಜರು ಪಡಿಸಲು ಈ ತಂಡವು ಮೋಟಾರು ವಾಹನ ನಿರೀಕ್ಷಕರಿಗೆ ಸೂಚಿಸಿತ್ತು. ನಿರೀಕ್ಷಕರು ಕೇವಲ 31 ವಾಹನಗಳನ್ನು ಹಾಜರುಪಡಿಸಿದ್ದರು. ಅದರಲ್ಲಿ 7 ವಾಹನಗಳ ಮೂಲ ಕಡತಗಳನ್ನು ಹಾಜರುಪಡಿಸಿರಲಿಲ್ಲ. ಉಳಿದ 24 ವಾಹನಗಳನ್ನು ತಪಾಸಣೆ ನಡೆಸಿ ಕಡತ ಪರಿಶೀಲಿಸಿದಾಗ 1 ಚದರ ಅಡಿಯಿಂದ 6 ಚದರ ಅಡಿವರೆಗೆ ವಿಸ್ತೀರ್ಣದಲ್ಲಿ ವ್ಯತ್ಯಾಸ ಕಂಡು ಬಂದಿದೆ. 3,240 ವಾಹನಗಳ ಕಡತ ಪರಿಶೀಲನೆ ಮತ್ತು ಭೌತಿಕ ತಪಾಸಣೆ ನಡೆಸಲು ಸಾಧ್ಯವಾಗಿಲ್ಲ ಎಂದು ತಂಡವು ವರದಿಯಲ್ಲಿ ತಿಳಿಸಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.