ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ 60ನೇ ಘಟಿಕೋತ್ಸವ ಇದೇ 8ರಂದು (ಬುಧವಾರ) ನಗರದ ಸೆಂಟ್ರಲ್ ಕಾಲೇಜು ಆವರಣದ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ನಡೆಯಲಿದ್ದು, 30,300 ವಿದ್ಯಾರ್ಥಿಗಳು ಪದವಿ ಪ್ರಮಾಣಪತ್ರ ಪಡೆಯಲಿದ್ದಾರೆ. ಪದವಿ, ಪಿಎಚ್.ಡಿ ಪಡೆಯುತ್ತಿರುವವರಲ್ಲಿ ವಿದ್ಯಾರ್ಥಿನಿಯರೇ ಹೆಚ್ಚಾಗಿದ್ದಾರೆ.
ಘಟಿಕೋತ್ಸವದಲ್ಲಿ 9,878 ವಿದ್ಯಾರ್ಥಿಗಳು, 13,510 ವಿದ್ಯಾರ್ಥಿನಿಯರು ಸೇರಿ 23,388 ಮಂದಿ ಪದವಿ, 64 ಪುರುಷ ಹಾಗೂ 76 ಮಹಿಳಾ ಅಭ್ಯರ್ಥಿಗಳು ಸೇರಿ 140 ಮಂದಿ ಪಿಎಚ್.ಡಿ ಪದವಿ ಪಡೆಯುವರು ಎಂದು ಬೆಂಗಳೂರು ವಿಶ್ವವಿದ್ಯಾಲಯ ಕುಲಪತಿ ಎಂ.ಎಸ್.ಜಯಕರ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
19,819 ವಿದ್ಯಾರ್ಥಿಗಳು ಉನ್ನತ ಶ್ರೇಣಿ, 7,186 ವಿದ್ಯಾರ್ಥಿಗಳು ಪ್ರಥಮ, 763 ವಿದ್ಯಾರ್ಥಿಗಳು ದ್ವಿತೀಯ, 158 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಸ್ವಾಯತ್ತ ಕಾಲೇಜಿನ 2,312 ವಿದ್ಯಾರ್ಥಿಗಳು ಪದವಿ ಪಡೆಯಲಿದ್ದಾರೆ ಎಂದು ವಿವರಿಸಿದರು.
ಬುಧವಾರ 11.30ಕ್ಕೆ ರಾಜ್ಯಪಾಲ ಥಾವರಚಂದ್ ಗೆಹಲೋತ್, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಪದವಿ ಪ್ರದಾನ ಮಾಡಲಿದ್ದು, ವಿಜ್ಞಾನಿ ಪ್ರಹ್ಲಾದ್ ರಾಮರಾವ್ ಘಟಿಕೋತ್ಸವ ಭಾಷಣ ಮಾಡುವರು ಎಂದರು.
ಪ್ರೇಮಾಗೆ 11 ಪದಕ
ಒಟ್ಟು 218 ವಿದ್ಯಾರ್ಥಿಗಳು ಚಿನ್ನದ ಪದಕ ಹಾಗೂ ನಗದು ಬಹುಮಾನ ಪಡೆಯವರು. ಪದವಿಯಲ್ಲಿ 31 ವಿದ್ಯಾರ್ಥಿಗಳು ಹಾಗೂ 55 ವಿದ್ಯಾರ್ಥಿನಿಯರು ಚಿನ್ನದ ಪದಕ, 15 ವಿದ್ಯಾರ್ಥಿಗಳು ಹಾಗೂ 25 ವಿದ್ಯಾರ್ಥಿನಿಯರು ನಗದು ಬಹುಮಾನ ಪಡೆಯುವರು. ಸ್ನಾತಕೋತ್ತರ ವಿಭಾಗದಲ್ಲಿ 25 ವಿದ್ಯಾರ್ಥಿಗಳು, 46 ವಿದ್ಯಾರ್ಥಿನಿಯರು ಚಿನ್ನದ ಪದಕ, 21 ವಿದ್ಯಾರ್ಥಿಗಳು ಹಾಗೂ 40 ವಿದ್ಯಾರ್ಥಿನಿಯರು ನಗದು ಬಹುಮಾನ ಸ್ವೀಕರಿಸುವರು ಎಂದು ತಿಳಿಸಿದರು.
ಸ್ನಾತಕೋತ್ತರ ಪದವಿಯಲ್ಲಿ ಕನ್ನಡ ವಿಭಾಗದ ಎಸ್.ಪ್ರೇಮಾ ಅತ್ಯಧಿಕ 11 ಪದಕ ಪಡೆಯಲಿದ್ದಾರೆ. ಭೌತ ವಿಜ್ಞಾನ ವಿಭಾಗದ ಕೆ.ಎಂ.ರುಫಿಯ, ರಸಾಯನ ವಿಜ್ಞಾನ ವಿಭಾಗದ ಬಿ.ಎಸ್.ವಿದ್ಯಾಶ್ರೀ ತಲಾ ಏಳು ಪದಕ ಪಡೆಯುವರು. ಪ್ರಾಣಿ ಶಾಸ್ತ್ರ ವಿಭಾಗದ ಬಿ.ಎಂ.ಗೌತಮಿ, ಗಣಿತದಲ್ಲಿ ಆರ್.ಲಿಖಿತಕುಮಾರಿ ತಲಾ 6, ಅರ್ಥಶಾಸ್ತ್ರ ವಿಭಾಗದ ಎಂ.ವಿಕಾಸ್, ಇತಿಹಾಸ ವಿಭಾಗದ ಎ.ಎನ್.ಹರ್ಷ ತಲಾ 5 ಪದಕ ಪಡೆಯುವರು.
ಸ್ನಾತಕ ವಿಭಾಗದಲ್ಲಿ ಸಿವಿಲ್ ಎಂಜಿನಿಯರ್ ವಿಭಾಗದ ಎಸ್.ಹೇಮಂತ 7, ಬಿಕಾಂನಲ್ಲಿ ಎಸ್.ದಿವ್ಯ 6, ಹಾಗೂ ಮೆಕಾನಿಕಲ್ ವಿಭಾಗದ ಎಂ.ರಜತ್ ಹಾಗೂ ಬಿಬಿಎದಲ್ಲಿ ಟಿ.ಸಹನಾ ಜಾಧವ್ ಅವರು ತಲಾ 5 ಚಿನ್ನದ ಪದಕ ಸ್ವೀಕರಿಸುವರು ಎಂದು ಹೇಳಿದರು.
ಅಂಬೇಡ್ಕರ್ ಚಿನ್ನದ ಪದಕ
ಎಸ್.ದಿವ್ಯಾ, ಕೆ.ಜಿ.ಮಾನಸ, ಡಿ.ಎಚ್.ನಂದಿನಿ, ಆರ್.ಚೇತನ್, ಎಸ್.ಭರತ್‌ಕುಮಾರ್ ಅವರು ಬಿ.ಆರ್.ಅಂಬೇಡ್ಕರ್ ಚಿನ್ನದ ಪದಕವನ್ನು ಸ್ವೀಕರಿಸುವರು. ಇದಲ್ಲದೇ ಎಸ್‌ಎಫ್ ಕಾಲೇಜಿನ ಎಸ್.ಸ್ವರೂಪ್, ಸೆಂಟ್ ಕ್ಲಾರೆಟ್ ಕಾಲೇಜಿನ ರಂಜಿತ ಜಾಧವ್ ಅವರಿಗೆ ಅತ್ಯುತ್ತಮ ಕ್ರೀಡಾಪಟು ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದರು.
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಶೇ 55ರಷ್ಟು ಅಧ್ಯಾಪಕರ ಹುದ್ದೆಗಳು ಖಾಲಿಯಿವೆ. ಅವುಗಳನ್ನು ತುಂಬಲು ಸರ್ಕಾರದ ಅನುಮತಿ ಕೋರಲಾಗಿದೆ. ಅತಿಥಿ ಉಪನ್ಯಾಸಕರ ನೇಮಕದಲ್ಲಿ ಗೊಂದಲವಾಗಿಲ್ಲಎಂ.ಎಸ್.ಜಯಕರ್ ಕುಲಪತಿ
ಮೂವರಿಗೆ ಗೌರವ ಡಾಕ್ಟರೇಟ್
‘ವಿಧಾನ ಸಭೆಯ ಸ್ವೀಕರ್ ಯು.ಟಿ.ಖಾದರ್ ವಿಧಾನ ಪರಿಷತ್‌ನ ಮಾಜಿ ಸದಸ್ಯ ಡಿ.ಮಾದೇಗೌಡ ಉದ್ಯಮಿ ಟಿ.ಬಿ.ಪ್ರಸನ್ನ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತದೆ. ವಿವಿಧ ಕ್ಷೇತ್ರಗಳಲ್ಲಿನ ಸಾಧನೆ ಗುರುತಿಸಿ 14 ಮಂದಿ ಹೆಸರನ್ನು ಗೌರವ ಡಾಕ್ಟರೇಟ್‌ಗೆ ಸಿಂಡಿಕೇಟ್ ಶಿಫಾರಸು ಮಾಡಿತ್ತು. ಇದರಲ್ಲಿ ಮೂವರ ಹೆಸರಿಗೆ ರಾಜ್ಯಪಾಲರು ಸಮ್ಮತಿ ಸೂಚಿಸಿದ್ದಾರೆ’ ಎಂದು ಕುಲಪತಿ ಜಯಕರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.