ADVERTISEMENT

‍ಪದವಿ ಪರೀಕ್ಷೆ: ಜೆರಾಕ್ಸ್‌ ಸಂಕಟ

ನಿಗದಿ ಪಡಿಸಿದ ಸಂಖ್ಯೆಯಲ್ಲಿ ಬಾರದ ಪ್ರಶ್ನೆಪತ್ರಿಕೆಗಳು: ವಿದ್ಯಾರ್ಥಿಗಳ ಸಮಯ ವ್ಯರ್ಥ

ಎಂ.ಜಿ.ಬಾಲಕೃಷ್ಣ
Published 6 ಡಿಸೆಂಬರ್ 2019, 20:17 IST
Last Updated 6 ಡಿಸೆಂಬರ್ 2019, 20:17 IST
   

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಪದವಿ ಪರೀಕ್ಷೆಗಳು ಇದೇ 2ರಿಂದ ಆರಂಭವಾಗಿದ್ದು, ಕೆಲವು ಕಾಲೇಜುಗಳಿಗೆ ನಿಗದಿಪಡಿಸಿದಷ್ಟು ಪ್ರಶ್ನೆಪತ್ರಿಕೆಗಳು ಸಮಯಕ್ಕೆ ಸರಿಯಾಗಿ ಬಾರದೆ ವಿದ್ಯಾರ್ಥಿಗಳು ತೊಂದರೆಗೆ ಸಿಲುಕುತ್ತಿರುವ ಪ್ರಸಂಗ ನಡೆದಿದೆ.

‘ಪ್ರಶ್ನೆಪತ್ರಿಕೆಗಳ ಭದ್ರತೆಯ ದೃಷ್ಟಿಯಿಂದ ಪರೀಕ್ಷೆಯ ದಿನದಂದು ಬೆಳಿಗ್ಗೆ 9 ಗಂಟೆಯ ಬಳಿಕವಷ್ಟೇ ಕೈಗೆ ತಲುಪುವಂತೆ ವ್ಯವಸ್ಥೆ ಮಾಡಲಾಗಿದೆ. ಆದರೆ ನಿಗದಿತ ಸಂಖ್ಯೆಯಲ್ಲಿ ಪ್ರಶ್ನೆಪತ್ರಿಕೆ ಬಾರದ ಕಾರಣ ಕೆಲವು ವಿದ್ಯಾರ್ಥಿಗಳು ಜೆರಾಕ್ಸ್‌ ಪ್ರತಿ ಬರುವ ತನಕ ಕಾಯುಬೇಕಾಯಿತು’ ಎಂದು ನಗರದ ಕಾಲೇಜೊಂದರ ಉಪನ್ಯಾಸಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಬೆಳಿಗ್ಗೆ 9.30ರಿಂದ 12.30ರ ವರೆಗೆ ಪರೀಕ್ಷೆ ಇದೆ. ನಮ್ಮಲ್ಲಿ ಕಡಿಮೆ ಬಿದ್ದ ಪ್ರಶ್ನೆಪತ್ರಿಕೆಯನ್ನು ಜೆರಾಕ್ಸ್‌ ಮಾಡಿ ತರುವಾಗ 10.30 ಆಗಿತ್ತು. ಉಳಿದ ವಿದ್ಯಾರ್ಥಿಗಳು ಬಳಿಕ ಉತ್ತರ ಬರೆದರು. ಅವರಿಗೆ 1.30ರವರೆಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಯಿತು. ಆದರೆ ಅದರಲ್ಲೇ ಕೆಲವರು ಪುನರಾವರ್ತಿತ ವಿದ್ಯಾರ್ಥಿಗಳೂ ಇದ್ದರು. ಅವರಿಗೆ ಮಧ್ಯಾಹ್ನ 2 ಗಂಟೆಯಿಂದ ಪರೀಕ್ಷೆ ಇತ್ತು.

ADVERTISEMENT

ವಿಶ್ವವಿದ್ಯಾಲಯ ಮಾಡಿದ ಎಡವಟ್ಟಿನಿಂದ ಇಂತಹ ವಿದ್ಯಾರ್ಥಿಗಳು ತೊಂದರೆಗೆ ಸಿಲುಕಿದರು. ಅವರಿಗೆ ಕೊನೆಯ ಕ್ಷಣದಲ್ಲಿ ಪುನರಾವಲೋಕನ ಮಾಡಲೂ ಅವಕಾಶ ಸಿಗಲಿಲ್ಲ’ ಎಂದು ಅವರು ವಿವರಿಸಿದರು.

ಈ ಬಗ್ಗೆ ಕುಲಪತಿ ಪ್ರೊ.ಕೆ.ಆರ್‌.ವೇಣುಗೋಪಾಲ್‌ ಅವರನ್ನು ಸಂಪರ್ಕಿಸಿದಾಗ, ‘ಕಡಿಮೆ ಪ್ರಶ್ನೆಪತ್ರಿಕೆಗಳು ಹೋಗಿರಲು ಸಾಧ್ಯವೇ ಇಲ್ಲ, ಎಲ್ಲಾ ಕಾಲೇಜುಗಳು ಮೊದಲಾಗಿಯೇ ವಿದ್ಯಾರ್ಥಿಗಳ ಪಟ್ಟಿಯನ್ನು ನೀಡಿರುತ್ತವೆ. ಅದಕ್ಕೆ ತಕ್ಕಂತೆ ಪ್ರಶ್ನೆಪತ್ರಿಕೆಗಳನ್ನು ರವಾನಿಸಲಾಗುತ್ತದೆ. ಸುಮಾರು 700 ಕಾಲೇಜುಗಳ ಪೈಕಿ ಒಂದೆರಡು ಕಾಲೇಜುಗಳಲ್ಲಿ ಇಂತಹ ಪ್ರಸಂಗ ನಡೆದಿರಲೂಬಹುದು. ಆದರೆ ಝೆರಾಕ್ಸ್‌ ಮಾಡಲು ಎಷ್ಟು ಹೊತ್ತು ಬೇಕು? ಎರಡೇ ನಿಮಿಷದಲ್ಲಿ ಅದು ಸಾಧ್ಯವಿದೆಯಲ್ಲ?’ ಎಂದು ಪ್ರತಿಕ್ರಿಯಿಸಿದರು.

ತಕ್ಷಣ ಸಭೆ: ‘ಒಂದೆರಡು ಕಾಲೇಜುಗಳಲ್ಲಿ ಈ ರೀತಿ ಎಡವಟ್ಟು ಆದರೂ ಅದು ತಪ್ಪೇ. ಇದರ ಬಗ್ಗೆ ತಕ್ಷಣ ಪರೀಕ್ಷಾ ವಿಚಕ್ಷಾಧಿಕಾರಿಗಳ ಸಭೆ ಕರೆದು, ಎಲ್ಲಿ ತಪ್ಪಾಗಿದೆ ಎಂಬುದನ್ನು ಪರಿಶೀಲಿಸುತ್ತೇವೆ. ಮುಂದೆ ಹೀಗೆ ಆಗದಂತೆ ಕ್ರಮ ಕೈಗೊಳ್ಳುತ್ತೇವೆ’ ಎಂದು ಪರೀಕ್ಷಾಂಗ ಕುಲಸಚಿವ ಡಾ.ಸಿ.ಶಿವರಾಜ್‌ ಹೇಳಿದರು.

ಪರೀಕ್ಷಾ ವ್ವವಸ್ಥೆ: ಕೆಲ ಲೋಪಗಳು

*ಮೊಬೈಲ್‌, ವಾಚ್‌ ಕೊಂಡೊಯ್ಯಲು ಅವಕಾಶ ಇಲ್ಲ, ಆದರೆ ಅದೆಷ್ಟೋ ಪರೀಕ್ಷಾ ಕೊಠಡಿಗಳಲ್ಲಿ ಗೋಡೆ ಗಡಿಯಾರ ಇಲ್ಲ, ಇದರಿಂದಾಗಿ ಸಮಯ ಪರಿಪಾಲನೆಗೆ ಕಷ್ಟ

*500ಕ್ಕಿಂತ ಅಧಿಕ ವಿದ್ಯಾರ್ಥಿಗಳಿರುವಲ್ಲಿ ಇಬ್ಬರು ಪರೀಕ್ಷಾ ಮೇಲ್ವಿಚಾರಕರು ಇರಬೇಕು, ಆ ನಿಯಮ ಪಾಲನೆಯಾಗುತ್ತಿಲ್ಲ

*ಪರೀಕ್ಷೆ ನಡುವೆ ವಿಶ್ರಾಂತಿ ಕೊಠಡಿಗೆ ತೆರಳಲು ಅವಕಾಶ ಇದ್ದು, ಚೀಟಿ ತಂದವರು ಅಲ್ಲಿ ಎಸೆದುಬರುವ ಸಾಧ್ಯತೆ ಇದೆ–ಇದನ್ನು ಗಮನಿಸುವ ವ್ಯವಸ್ಥೆ ಇಲ್ಲ

*ಕೆಲವು ಸರ್ಕಾರಿ ಕಾಲೇಜುಗಳ ಗೋಡೆಗಳು ಬರಹಗಳಿಂದ ತುಂಬಿರುತ್ತಿದ್ದು, ವಿದ್ಯಾರ್ಥಿಗಳಿಗೆ ನಕಲು ಮಾಡಲು ನೆರವಾಗುವ ಸಾಧ್ಯತೆ ಇದೆ

*20 ಕಾಲೇಜಿಗೆ ಒಂದು ತನಿಖಾ ದಳ ಇದ್ದರಷ್ಟೇ ಪರಿಣಾಮಕಾರಿ, 35ರಿಂದ 40 ಕಾಲೇಜುಗಳಿಗೆ ಒಂದು ತಂಡ ಇದ್ದರೆ ಎಲ್ಲ ಕಾಲೇಜುಗಳಿಗೆ ತೆರಳುವ ಸಾಧ್ಯತೆ ಇಲ್ಲ

*ಉತ್ತರ ಪತ್ರಿಕೆಗಳನ್ನು ಅಂಚೆ ಮೂಲಕ ರವಾನಿಸುವ ಪದ್ಧತಿ ಈಗಲೂ ಇದೆ, ಇದರಿಂದ ಮೌಲ್ಯಮಾಪನದ ಸಮಯಕ್ಕೆ ಸರಿಯಾಗಿ ದೊರಕದೆ ಇರುವ ಸಾಧ್ಯತೆ ಇದೆ.

ಏಕೆ ಈ ಎಡವಟ್ಟು?

ಪರೀಕ್ಷಾ ಶುಲ್ಕ ಕಟ್ಟಲು ಅಂತಿಮ ದಿನಾಂಕ ಮೀರಿದ ಮೇಲೂ ದಂಡ ಶುಲ್ಕ ಪಾವತಿಸಲು ಅವಕಾಶ ಕಲ್ಪಿಸಿ ಪರೀಕ್ಷಾ ದಿನಾಂಕ ಹತ್ತಿರ ಬರುವ ತನಕವೂ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಆದರೆ ಅಷ್ಟರೊಳಗೆಯೇ ಪ್ರಶ್ನೆಪತ್ರಿಕೆ ಎಷ್ಟು ಮುದ್ರಿಸಬೇಕು ಎಂಬ ಲೆಕ್ಕಾಚಾರ ಮಾಡಿ ಕಳುಹಿಸಿ ಆಗಿರುತ್ತದೆ. ಕೊನೆಯ ಹಂತದಲ್ಲಿ ಬರುವ ವಿದ್ಯಾರ್ಥಿಗಳಿಗೆ ಇದರಿಂದಾಗಿ ಪ್ರಶ್ನೆಪತ್ರಿಕೆ ಕೊರತೆ ಉಂಟಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಕಾಲೇಜಿನಲ್ಲಿರುವ ವಿದ್ಯಾರ್ಥಿಗಳ ಮಾಹಿತಿ ವಿಶ್ವವಿದ್ಯಾಲಯಗಳಿಗೆ ಇರಬೇಕು ಎಂಬ ನಿಯಮ ಇದೆ. ಆದರೆ ಅದರ ಕೊರತೆಯ ಫಲವಾಗಿಯೇ ಪ್ರಶ್ನೆಪತ್ರಿಕೆಯ ಪೂರೈಕೆಯಲ್ಲಿನ ಎಡವಟ್ಟು ಗೋಚರವಾಗುತ್ತಿದೆ.

ವರ್ಷಕ್ಕೊಮ್ಮೆ ವಿಶ್ವವಿದ್ಯಾಲಯ ವತಿಯಿಂದ ಕಾಲೇಜುಗಳಿಗೆ ತೆರಳುವ ಸ್ಥಳೀಯ ಮೇಲ್ವಿಚಾರಣಾ ಸಮಿತಿ (ಎಲ್‌ಐಸಿ) ಮೂಲಸೌಲಭ್ಯ, ಇತರ ಅಗತ್ಯ ಮಾಹಿತಿಯನ್ನು ಪಡೆಯುವ ಬದಲಿಗೆ ಸ್ವ ಹಿತಾಸಕ್ತಿ ಕಾಪಾಡಿಕೊಂಡು ಬರುವ ಕಾರಣವೇ ಇಂತಹ ಸಮಸ್ಯೆಗಳು ಹಾಗೆಯೇ ಉಳಿದುಬಿಡುತ್ತಿವೆ ಎಂಬ ಆರೋಪ ಕೇಳಿಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.