ADVERTISEMENT

ಪ್ರತಿಭಟನೆಗೆ ಅನುಮತಿ ಪಡೆಯದ ಎಬಿವಿಪಿ: ರಸ್ತೆಯಲ್ಲಿ ಬಿದ್ದು ಯುವತಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 31 ಜನವರಿ 2022, 9:51 IST
Last Updated 31 ಜನವರಿ 2022, 9:51 IST
ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ಪ್ರತಿಭಟನೆ: ರಸ್ತೆಯಲ್ಲಿ ಬಿದ್ದು ಯುವತಿಗೆ ಗಾಯ
ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ಪ್ರತಿಭಟನೆ: ರಸ್ತೆಯಲ್ಲಿ ಬಿದ್ದು ಯುವತಿಗೆ ಗಾಯ    

ಬೆಂಗಳೂರು: ‘ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಲು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕಾರ್ಯಕರ್ತರು ಅನುಮತಿ ಪಡೆದಿರಲಿಲ್ಲ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ಲಘು ಲಾಠಿ ಪ್ರಹಾರ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ‘ಬೆಂಗಳೂರು ವಿಶ್ವವಿದ್ಯಾಲಯ ಸಂಶೋಧನಾ ವಿದ್ಯಾರ್ಥಿಗಳ ಸಂಘಟನೆ ಹಾಗೂ ಎಬಿವಿಪಿ ನಡುವೆ ಗಲಾಟೆ ಆಗುವ ಸಾಧ್ಯತೆ ಇತ್ತು. ಅದನ್ನು ತಪ್ಪಿಸಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದ್ದಾರೆ’ ಎಂದಿದ್ದಾರೆ.

‘ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದ ಮೆಟ್ಟಿಲು ಬಳಿ ಬೆಂಗಳೂರು ವಿಶ್ವವಿದ್ಯಾಲಯ ಸಂಶೋಧನಾ ವಿದ್ಯಾರ್ಥಿಗಳ ಸಂಘಟನೆ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದರು. 'ಗಣರಾಜ್ಯೋತ್ಸವ ದಿನದಂದು ಅಂಬೇಡ್ಕರ್ ಅವರಿಗೆ ಅವಮಾನ ಮಾಡಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದ್ದರು.

‘ಅದೇ ಸಂದರ್ಭದಲ್ಲೇ ಸ್ಥಳಕ್ಕೆ ಸ್ಥಳಕ್ಕೆ ಬಂದಿದ್ದ ಎಬಿವಿಪಿ ಕಾರ್ಯಕರ್ತರು, ಆಡಳಿತ ಮಂಡಳಿ ಕಚೇರಿಯೊಳಗೆ ನುಗ್ಗಲು ಯತ್ನಿಸಿದರು. ಅದನ್ನು ಪ್ರಶ್ನಿಸಿದ್ದ ಸಂಶೋಧನಾ ವಿದ್ಯಾರ್ಥಿಗಳ ಸಂಘಟನೆಯವರು, ‘ವಿವಿಗೆ ಸಂಬಂಧವಿಲ್ಲದವರು ಇವರು. ಒಳಗೆ ಬಿಡಬಾರದು’ ಎಂದಿದ್ದರು. ಅದೇ ವಿಚಾರವಾಗಿ ಜಗಳ ಶುರುವಾಯಿತು. ತಳ್ಳಾಟವೂ ನಡೆಯಿತು. ಜಗಳ ಬಿಡಿಸಲು ಹೋದ ಎಸಿಪಿ ಕೋದಂಡರಾಮ ಅವರ ಕೈಗೂ ಪೆಟ್ಟಾಯಿತು’ ಎಂದೂ ಪೊಲೀಸ್ ಅಧಿಕಾರಿ ತಿಳಿಸಿದರು.

‘ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಆದರೆ, ರಕ್ತ ಗಾಯವಾಗುವಷ್ಟು ಯಾರಿಗೂ ಹೊಡೆದಿಲ್ಲ. ಗಾಯವಾಗಿದೆ ಎನ್ನಲಾದ ಯುವತಿ, ರಸ್ತೆಯಲ್ಲಿ ಬಿದ್ದು ತಲೆಗೆ ಪೆಟ್ಟು ಮಾಡಿಕೊಂಡಿದ್ದಾರೆ. ಘಟನೆ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಈಗಾಗಲೇ ಮಾಹಿತಿ ನೀಡಲಾಗಿದೆ’ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.