ADVERTISEMENT

ಬೆಂಗಳೂರು: ಕಲ್ಲಂಗಡಿ, ದ್ರಾಕ್ಷಿ ಮೇಳಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2025, 14:33 IST
Last Updated 24 ಫೆಬ್ರುವರಿ 2025, 14:33 IST
ದ್ರಾಕ್ಷಿ–ಕಲ್ಲಂಗಡಿ ಮಾರಾಟ ಮೇಳದಲ್ಲಿ ದ್ರಾಕ್ಷಿ ಗೊಂಚಲು ಹಿಡಿದು ಕುತೂಹಲದಿಂದ ವೀಕ್ಷಿಸಿದ ಪುಟಾಣಿ ಮಗು
ಪ್ರಜಾವಾಣಿ ಚಿತ್ರ
ದ್ರಾಕ್ಷಿ–ಕಲ್ಲಂಗಡಿ ಮಾರಾಟ ಮೇಳದಲ್ಲಿ ದ್ರಾಕ್ಷಿ ಗೊಂಚಲು ಹಿಡಿದು ಕುತೂಹಲದಿಂದ ವೀಕ್ಷಿಸಿದ ಪುಟಾಣಿ ಮಗು ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಬೆಳೆದ ದ್ರಾಕ್ಷಿ ಮತ್ತು ಕಲ್ಲಂಗಡಿ ಹಣ್ಣುಗಳನ್ನು ರೈತರಿಂದ ನೇರವಾಗಿ ಖರೀದಿಸಿ ಹಾಪ್‌ಕಾಮ್ಸ್‌ ಮೂಲಕ ಗ್ರಾಹಕರಿಗೆ ಮಾರಾಟ ಮಾಡಲಾಗುತ್ತಿದೆ’ ಎಂದು ಶಾಸಕ ಉದಯ್ ಬಿ. ಗರುಡಾಚಾರ್ ಹೇಳಿದರು.

ತೋಟದ ಬೆಳೆಗಾರರ ಸಹಕಾರಿ ಮಾರಾಟ ಮತ್ತು ಸಂಸ್ಕರಣ ಸಂಘದ (ಹಾಪ್‌ಕಾಮ್ಸ್‌) ವತಿಯಿಂದ ಸೋಮವಾರ ಆಯೋಜಿಸಿದ್ದ ‘ದ್ರಾಕ್ಷಿ ಹಾಗೂ ಕಲ್ಲಂಗಡಿ ಮೇಳ’ ಉದ್ಘಾಟಿಸಿ ಅವರು ಮಾತನಾಡಿದರು.

‘ಬೇಸಿಗೆ ಕಾಲದಲ್ಲಿ ದ್ರಾಕ್ಷಿ ಮತ್ತು ಕಲ್ಲಂಗಡಿ ಹಣ್ಣುಗಳಿಗೆ ಬೇಡಿಕೆ ಹೆಚ್ಚು, ಆದ್ದರಿಂದ ಈ ಮೇಳವನ್ನು ಆಯೋಜಿಸಲಾಗಿದೆ. ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿ ಹೆಚ್ಚು ಹಣ್ಣುಗಳನ್ನು ಖರೀದಿಸುವುದರ ಮೂಲಕ ರೈತರಿಗೆ ನೆರವಾಗಬೇಕು’ ಎಂದರು.

ADVERTISEMENT

‘ಕರಾವಳಿ ಮತ್ತು ಮಲೆನಾಡಿನ ಪ್ರದೇಶ ಹೊರತುಪಡಿಸಿ ರಾಜ್ಯದಾದ್ಯಂತ ಬೆಳೆದ ಕಿರಣ್ ಕಲ್ಲಂಗಡಿ, ಹಳದಿ ಬಣ್ಣದ ಕಲ್ಲಂಗಡಿ, ಮತ್ತು ವಿಜಯಪುರ, ಬಾಗಲಕೋಟೆ, ಕೊಪ್ಪಳ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ, ಕೋಲಾರ ಜಿಲ್ಲೆಗಳಲ್ಲಿ ಬೆಳೆದ ಬೆಂಗಳೂರು ನೀಲಿ, ಕೃಷ್ಣ ಶರದ್, ಥಾಮ್ಸನ್ ಸೀಡ್‌ಲೆಸ್, ಸೋನಾಕ, ಸೂಪರ್ ಸೋನಾಕ, ಇಂಡಿಯನ್‌ ರೆಡ್ ಗ್ಲೋಬ್ ಸೇರಿದಂತೆ ಸುಮಾರು 12 ತಳಿಯ ದ್ರಾಕ್ಷಿ ಹಣ್ಣುಗಳನ್ನು ಮೇಳದಲ್ಲಿ ಖರೀದಿಸಬಹುದು’ ಎಂದರು.

ನಗರದಲ್ಲಿರುವ ಹಾಪ್‌ಕಾಮ್ಸ್‌ ಮಳಿಗೆಗಳಲ್ಲಿ ಮಾರ್ಚ್‌ 5ರವರೆಗೆ ರವರೆಗೆ ಶೇ 10ರಷ್ಟು ರಿಯಾಯಿತಿ ದರದಲ್ಲಿ ಹಣ್ಣುಗಳನ್ನು ಮಾರಾಟ ಮಾಡಲಾಗುತ್ತದೆ. ಮೇಳದಲ್ಲಿ ಒಂದು ಕೆ.ಜಿ. ದ್ರಾಕ್ಷಿಗೆ ಕನಿಷ್ಠ ₹76 ರಿಂದ ಗರಿಷ್ಠ ₹310 ರವರೆಗೂ ದರವಿದೆ. ಒಂದು ಕೆ.ಜಿ. ಕಲ್ಲಂಗಡಿಗೆ ಕನಿಷ್ಠ ₹22 ರಿಂದ ₹ ಗರಿಷ್ಠ ₹40ರವರೆಗೂ ಇದೆ.

ತೋಟಗಾರಿಕೆ ಇಲಾಖೆ ನಿರ್ದೇಶಕ ಡಿ.ಎಸ್. ರಮೇಶ್, ಹಾಪ್‌ಕಾಮ್ಸ್‌ ಅಧ್ಯಕ್ಷ ಗೋಪಾಲಕೃಷ್ಣ, ವ್ಯವಸ್ಥಾಪಕ ನಿರ್ದೇಶಕ ಉಮಾಶಂಕರ್‌ ಮಿರ್ಜಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.