ADVERTISEMENT

ವಿಜ್ಞಾನ ಸಾಹಿತ್ಯಕ್ಕೆ ಕನ್ನಡದಲ್ಲಿ ಮಹತ್ವ ಕಮ್ಮಿ: ಲೇಖಕಿ ಶಾಂತಲಾ ಅನಿಲ್‌

ಸುಕೃತ ಎಸ್.
Published 19 ಡಿಸೆಂಬರ್ 2021, 19:52 IST
Last Updated 19 ಡಿಸೆಂಬರ್ 2021, 19:52 IST
ಗೋಷ್ಠಿಯಲ್ಲಿ ವಿಠಲ್‌ ಶೆಣೈ ಮಾತನಾಡಿದರು. ಶಾಂತಲಾ ಅನಿಲ್‌ ಇದ್ದಾರೆ   – ಪ್ರಜಾವಾಣಿ ಚಿತ್ರ
ಗೋಷ್ಠಿಯಲ್ಲಿ ವಿಠಲ್‌ ಶೆಣೈ ಮಾತನಾಡಿದರು. ಶಾಂತಲಾ ಅನಿಲ್‌ ಇದ್ದಾರೆ   – ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ವಿಜ್ಞಾನ ಸಾಹಿತ್ಯಕ್ಕೆ ಬೆಂಗಾಲಿ, ಮರಾಠಿ ಭಾಷೆಯಲ್ಲಿ ಇರುವಷ್ಟು ಮಹತ್ವ ಕನ್ನಡದಲ್ಲಿ ಇಲ್ಲ. ಕನ್ನಡ ಮನಸ್ಸುಗಳೂ ವಿಜ್ಞಾನ ಸಾಹಿತ್ಯವನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದು ಲೇಖಕಿ ಶಾಂತಲಾ ಅನಿಲ್‌ ಹೇಳಿದರು.

‘3019 AD’ ವಿಜ್ಞಾನ ಪುಸ್ತಕದ ಲೇಖಕಿಯಾಗಿರುವ ಅವರು ‘ಎಲ್ಲೆ ಇಲ್ಲದ ಕಲ್ಪನೆ’ ಎಂಬ ಗೋಷ್ಠಿಯಲ್ಲಿ ಅನಿಸಿಕೆ ಹಂಚಿಕೊಂಡರು.

‘ವಿಜ್ಞಾನದ ಸಾಹಿತ್ಯ ರಚನೆ ಸವಾಲಿನಿಂದ ಕೂಡಿದೆ. ಇಂಗ್ಲಿಷ್‌ನಲ್ಲಿ ಇರುವಷ್ಟು ವಿಜ್ಞಾನ ಪದ ಸಂಪತ್ತು ಕನ್ನಡದಲ್ಲಿ ಇಲ್ಲ. ಪುಸ್ತಕ ಬರೆಯುವ ಹೊತ್ತಿಗೆ ಈ ಸಮಸ್ಯೆ ತುಂಬಾ ಕಾಡಿತು’ ಎಂದರು.

ADVERTISEMENT

‘ವಿಜ್ಞಾನ ಸಾಹಿತ್ಯ ಎಂದರೆ, ಗೊತ್ತಿರುವ ಕೆಲವು ವಿಷಯಗಳನ್ನೇ ಇಟ್ಟುಕೊಂಡು ಮುಂದೊಂದು ದಿನ ಹೀಗೂ ಆಗಬಹುದು ಎನ್ನುವ ಕಲ್ಪನೆಯೊಂದಿಗೆ ಬರೆಯುವುದು. ಅದರರ್ಥ ಹಾಗೆಯೇ ಆಗುತ್ತದೆ ಎಂದಲ್ಲ. ನನ್ನ ‘3019 AD’ ಪುಸ್ತಕವೂ ಅಂತಹದ್ದೇ. 1000 ವರ್ಷದ ನಂತರ ಭೂಮಿ ಹೇಗಿರಬಹುದು. ವಿಜ್ಞಾನ, ತಂತ್ರಜ್ಞಾನ ಇನ್ನಷ್ಟು ವಿಕಾಸಗೊಂಡಂತೆ ಜನರ ಬದುಕು ಹೇಗೆಲ್ಲಾಬದಲಾಗಬಹುದು ಎಂಬುದರ ಕುರಿತ ವಿವರ ಈ ಕೃತಿಯಲ್ಲಿ ಇದೆ’ ಎಂದರು.

‘ವಿಜ್ಞಾನ ಕುರಿತ ಸಾಹಿತ್ಯ ಎಂದರೆ, ಅಲ್ಲಿ ವಿಜ್ಞಾನಕ್ಕೆ ಸಂಬಂಧಿಸಿದ ವಿಚಾರಗಳು ಮಾತ್ರ ಇರುವುದಿಲ್ಲ, ಸಾಮಾಜಿಕ ವಿಷಯವನ್ನು ಇಟ್ಟುಕೊಂಡೇ ಈ ಪುಸ್ತಕ ಬರೆದಿದ್ದೇನೆ’ ಎಂದರು.

ಕ್ರಿಪ್ಟೊ ಕರೆನ್ಸಿ ಕುರಿತಾದ ‘ನಿಗೂಢ ನಾಣ್ಯ’ ಪುಸ್ತಕದ ಲೇಖಕ ವಿಠಲ್ ಶೆಣೈ, ‘ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯಗಳನ್ನು ಜನರಿಗೆ ತಿಳಿಯುವಂತೆ ಕಟ್ಟಿಕೊಡುವುದು ಸುಲಭವಲ್ಲ. ಆದ್ದರಿಂದ ಕಥೆಯ ಮೂಲಕ ತಂತ್ರಜ್ಞಾನದ ವಿಷಯವನ್ನು ಹೇಳುವ ಮಾದರಿಯನ್ನು ಅನುಸರಿಸಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.