ADVERTISEMENT

ಲೇಖಕಿ ಬಿ.ಟಿ. ಲಲಿತಾ ನಾಯಕ್ ಸೇರಿ 31 ಮಂದಿಗೆ ಬಂಜಾರ ಅಕಾಡೆಮಿ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2025, 22:53 IST
Last Updated 5 ಫೆಬ್ರುವರಿ 2025, 22:53 IST
ಬಿ.ಟಿ. ಲಲಿತಾ ನಾಯಕ್
ಬಿ.ಟಿ. ಲಲಿತಾ ನಾಯಕ್   

ಬೆಂಗಳೂರು: ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯು 2023 ಮತ್ತು 2024ನೇ ಸಾಲಿನ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ‘ಶ್ರೀ ಸಂತ ಸೇವಾಲಾಲ್ ಪ್ರಶಸ್ತಿ’ಗೆ ಲೇಖಕಿ ಬಿ.ಟಿ. ಲಲಿತಾ ನಾಯಕ್ ಆಯ್ಕೆಯಾಗಿದ್ದಾರೆ. 

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಕಾಡೆಮಿ ಅಧ್ಯಕ್ಷ ಎ.ಆರ್. ಗೋವಿಂದಸ್ವಾಮಿ, ‘ರಾಜ್ಯ ಸರ್ಕಾರವು ಕಳೆದ ವರ್ಷ ‘ಶ್ರೀ ಸಂತ ಸೇವಾಲಾಲ್ ಪ್ರಶಸ್ತಿ’ ಸ್ಥಾಪಿಸಿದೆ. ಈ ಪ್ರಶಸ್ತಿಯು ₹ 1 ಲಕ್ಷ ನಗದು ಒಳಗೊಂಡಿದೆ. ಇದೇ ಮೊದಲ ಬಾರಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಬಂಜಾರ ಸಮುದಾಯದಲ್ಲಿ ವಿಶೇಷ ಸಾಧನೆ ಮಾಡಿದ ಹಾಗೂ ಸಾಹಿತ್ಯಕ್ಕೆ ಕೊಡುಗೆ ನೀಡಿರುವ ಬಿ.ಟಿ. ಲಲಿತಾ ನಾಯಕ್ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇದರಿಂದ ಪ್ರಶಸ್ತಿಯ ಗೌರವವೂ ಹೆಚ್ಚಲಿದೆ. ಎರಡು ವರ್ಷಗಳಿಂದ ಗೌರವ ಪ್ರಶಸ್ತಿಗೆ ತಲಾ ಐವರು ಹಾಗೂ ವಾರ್ಷಿಕ ಪ್ರಶಸ್ತಿಗೆ ತಲಾ ಹತ್ತು ಮಂದಿಯನ್ನು ಆಯ್ಕೆ ಮಾಡಲಾಗಿದೆ’ ಎಂದು ತಿಳಿಸಿದರು. 

2023ನೇ ಸಾಲಿನ ಗೌರವ ಪ್ರಶಸ್ತಿಗೆ ಸಾಹಿತಿಗಳಾದ ಕೃಷ್ಣಪ್ಪಾ ಭಿಕ್ಕಪ್ಪಾ ಪವಾರ (ಶಿರಸಿ), ಸಣ್ಣರಾಮ (ಶಿವಮೊಗ್ಗ), ನಾಟಕಕಾರ ಶಂಕರ್ ಎಚ್. ಲಮಾಣಿ (ಬಾಗಲಕೋಟೆ), ವಾಝ ಕಲಾವಿದ ಬಾಬು ಲಚ್ಚು ರಾಠೋಡ (ಬರಟಗಿ) ಹಾಗೂ ಭಜನೆ ಕಲಾವಿದ ರಾಮಚಂದ್ರ ಭಗವಾನ್ ದಾಸ್ (ವಿಜಯನಗರ) ಆಯ್ಕೆಯಾಗಿದ್ದಾರೆ ಎಂದು ಮಾಹಿತಿ ನೀಡಿದರು. 

ADVERTISEMENT

2024ನೇ ಸಾಲಿನ ಗೌರವ ಪ್ರಶಸ್ತಿಗೆ ಜಾನಪದ ವೈದ್ಯೆ ಪುಟ್ಟಿಬಾಯಿ ಲಕ್ಷ್ಮಣ ನಾಯಕ್ (ಚಿತ್ರದುರ್ಗ), ಗಾಯಕ ಮಹದೇವ ದಮಳ ಚವ್ಹಾಣ (ಕಲಬುರ್ಗಿ), ಕಲಾವಿದ ಪಿ. ಲಕ್ಷ್ಮಣ ನಾಯಕ್ (ಕೊಪ್ಪಳ), ನೃತ್ಯ ಕಲಾವಿದೆ ಸೀತವ್ವ ಲಮಾಣಿ (ಧಾರವಾಡ) ಹಾಗೂ ಭಾಷಾ ಜಾಗೃತಿಗೆ ಸಂಬಂಧಿಸಿದಂತೆ ರಾಘವೇಂದ್ರ ನಾಯಕ್ (ದಾವಣಗೆರೆ) ಅವರನ್ನು ಆಯ್ಕೆ ಮಾಡಲಾಗಿದೆ ಎಂದರು. 

‘ಗೌರವ ಪ್ರಶಸ್ತಿಯು ತಲಾ ₹ 50 ಸಾವಿರ ನಗದು ಒಳಗೊಂಡಿದ್ದರೆ, ವಾರ್ಷಿಕ ಪ್ರಶಸ್ತಿಯು ತಲಾ ₹ 25 ಸಾವಿರ ನಗದು ಹೊಂದಿದೆ. ಇಲ್ಲಿನ ಬಂಜಾರ ಭವನದಲ್ಲಿ ಮಾರ್ಚ್ ತಿಂಗಳಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಸಲು ನಿರ್ಧರಿಸಿದ್ದೇವೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.