ADVERTISEMENT

ಬ್ಯಾಂಕ್‌ ಗ್ಯಾರಂಟಿ: ₹1.90 ಕೋಟಿ ವಂಚನೆ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2025, 19:55 IST
Last Updated 5 ಆಗಸ್ಟ್ 2025, 19:55 IST
<div class="paragraphs"><p>ವಂಚನೆ</p></div>

ವಂಚನೆ

   

ಬೆಂಗಳೂರು: ಬ್ಯಾಂಕ್‌ ಗ್ಯಾರಂಟಿ ಕೊಡಿಸುವುದಾಗಿ ಆಮಿಷವೊಡ್ಡಿ ಗುತ್ತಿಗೆದಾರರೊಬ್ಬರಿಗೆ ₹1.90 ಕೋಟಿ ವಂಚಿಸಲಾಗಿದೆ.  

ಗಂಗಾನಗರದ ನಿವಾಸಿ, ಗುತ್ತಿಗೆದಾರ ಹೇಮಂತ್‌ ಮುದ್ದಪ್ಪ ಅವರ ದೂರು ಆಧರಿಸಿ, ಸಿಸಿಬಿ ಪೊಲೀಸರು ಚೆನ್ನೈನ ಬಲರಾಮನ್, ಅರಸು ಸುಬ್ರಮಣ್ಯಂ ಅಲಿಯಾಸ್ ಸಂಜಯ್ ಎಂಬುವವರ ವಿರುದ್ಧ ಪ‍್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. 

ADVERTISEMENT

‘ಹೇಮಂತ್ ಅವರು 2023ರಲ್ಲಿ ಮೈಸೂರು ಮಹಾನಗರ ಪಾಲಿಕೆ ಹಾಗೂ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯ ಘನ ತ್ಯಾಜ್ಯ ಸಂಸ್ಕರಣೆ ಮತ್ತು ವಿಲೇವಾರಿಗಾಗಿ ಕರೆದಿದ್ದ ಟೆಂಡರ್‌ನಲ್ಲಿ ಗುಜರಾತ್‌ನ ಡಿ.ಎಚ್. ಪಟೇಲ್ ಕಂಪನಿಯ ಅಧಿಕೃತ ಪ್ರತಿನಿಧಿಯಾಗಿ ಭಾಗವಹಿಸಿದ್ದರು. ಕಾಮಗಾರಿಯ ಪರವಾನಗಿ ಹಾಗೂ ಕಾರ್ಯಾದೇಶ ಪಡೆಯಲು ಪಾಲಿಕೆಗೆ ಟೆಂಡರ್‌ ಮೌಲ್ಯದ ಶೇಕಡ 10ರಷ್ಟು ಬ್ಯಾಂಕ್‌ ಖಾತರಿಯನ್ನು ನೀಡಬೇಕಿತ್ತು. ಇದಕ್ಕಾಗಿ ಆನ್‌ಲೈನ್‌ನಲ್ಲಿ ಗ್ಯಾರಂಟಿ ನೀಡುವ ಖಾಸಗಿ ಬ್ಯಾಂಕ್‌ಗಳ ಕುರಿತು ಹುಡುಕಾಟ ನಡೆಸಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ. 

‘ಯುರೊ ಎಕ್ಸಿಮ್‌ ಬ್ಯಾಂಕ್‌ನಲ್ಲಿ ಅಗತ್ಯ ಮಾಹಿತಿಗಳನ್ನು ದಾಖಲಿಸಿದ್ದರು. ಈ ಬ್ಯಾಂಕ್‌ನ ಮಾಜಿ ವ್ಯವಸ್ಥಾಪಕ ಎಂದು ಹೇಳಿಕೊಂಡು ಬಲರಾಮನ್‌,  ಹೇಮಂತ್‌ಗೆ ಕರೆ ಮಾಡಿದ್ದ. ಇತ್ತೀಚೆಗೆ ಯುರೊ ಎಕ್ಸಿಮ್‌ ಬ್ಯಾಂಕ್‌ನ ಕೆಲಸ ಬಿಟ್ಟಿದ್ದು, ಹಲವರಿಗೆ ಬ್ಯಾಂಕ್ ಖಾತರಿ ಒದಗಿಸಿರುವುದಾಗಿ ಹೇಳಿ, ಕೆಲ ಪಿಡಿಎಫ್‌ನ ಪ್ರತಿಗಳನ್ನು ಕಳಿಸಿದ್ದ. ಇದನ್ನು ಹೇಮಂತ್‌ ನಂಬಿದ್ದರು’ ಎಂದು ಹೇಳಿದ್ದಾರೆ.

‘ಅರಸು ಸುಬ್ರಮಣ್ಯಂ ಎಂಬಾತನನ್ನು ಆರೋಪಿ ಬಲರಾಮನ್‌ ಹೇಮಂತ್‌ಗೆ ಪರಿಚಯಿಸಿದ್ದ. ಮೂವರು ಹಲವಾರು ಬಾರಿ ಮೊಬೈಲ್‌ ಕರೆ ಮಾಡಿ ಮಾತನಾಡಿದ್ದರು. ಎರಡು ಪಾಲಿಕೆಯ ಕಾರ್ಯಾದೇಶಗಳನ್ನು ಪಡೆದುಕೊಳ್ಳಲು ₹8.5 ಕೋಟಿಯ ಬ್ಯಾಂಕ್‌ ಖಾತರಿ ಕೊಡಿಸಲು ಬಲರಾಮನ್‌ ಹಾಗೂ ಸಂಜಯ್ ₹2.5 ಕೋಟಿ ಕಮಿಷನ್‌ ಕೊಡುವಂತೆ ತಿಳಿಸಿದ್ದರು. ಇದಕ್ಕೆ ಒಪ್ಪಿಕೊಂಡು ದೂರುದಾರ ಹಂತ–ಹಂತವಾಗಿ ₹1.90 ಕೋಟಿ ನೀಡಿದರು. ನಂತರ ಪಾಲಿಕೆಗೆ ನೀಡಿದ್ದ ಎರಡು ಬ್ಯಾಂಕ್‌ ಗ್ಯಾರಂಟಿಗಳು ನಕಲಿ ಎಂದು ಗೊತ್ತಾಗಿದೆ. ಹಣ ವಾಪಸ್ ಕೇಳಿದಾಗ, ಕೊಲೆ ಮಾಡುವುದಾಗಿ ಆರೋಪಿಗಳು ಬೆದರಿಕೆ ಹಾಕಿದ್ದಾರೆ’ ಎಂದು ಪೊಲೀಸರು ತಿಳಿಸಿದ್ಧಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.