
ಬೆಂಗಳೂರು: ‘ಇತ್ತೀಚೆಗೆ ವಿಭಜಿತ ಓದು ಮತ್ತು ವಿಮರ್ಶೆ ಮುನ್ನೆಲೆಗೆ ಬರುತ್ತಿದೆ. ವಿಭಜಕ ಪ್ರವೃತ್ತಿ ನಮ್ಮ ಓದಿನ ಹಾಗೂ ವಿಮರ್ಶೆಯ ಸಾಧ್ಯತೆಗಳನ್ನು ಕುಂಟಿಸುತ್ತದೆ’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದರು.
ಅಂಕಿತ ಪುಸ್ತಕ ಪ್ರಕಾಶನದ ‘ಸಾವಿರದ ಸಂಭ್ರಮ’ 1000ನೇ ಕೃತಿಯಾಗಿ ಜೋಗಿ ಅವರ ‘ದಕ್ಷಿಣಾಯನ’ ಕಾದಂಬರಿ ಜನಾರ್ಪಣೆ ಹಾಗೂ 30ನೇ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಬಂಡಾಯ ಹಾಗೂ ದಲಿತರ ಕುರಿತು ಮಾತನಾಡುತ್ತಾರೆ ಎಂಬ ಸೈದ್ಧಾಂತಿಕ ಭಿನ್ನಾಭಿಪ್ರಾಯದ ಕಾರಣಕ್ಕೆ ಪುಸ್ತಕ ಓದುವುದನ್ನು ನಿರಾಕರಿಸಬಾರದು. ಮೊದಲು ಆ ಪುಸ್ತಕಗಳನ್ನು ಓದಬೇಕು. ಅದನ್ನು ಒಪ್ಪಬೇಕೊ ಅಥವಾ ಬಿಡಬೇಕೊ ಎಂಬುದನ್ನು ನಂತರ ನಿರ್ಧರಿಸಬೇಕು. ಅದನ್ನು ಬಿಟ್ಟು ವಿಭಜಿತ ಓದುಗರು ಹಾಗೂ ವಿಮರ್ಶಕರು ಆಗಬಾರದು’ ಎಂದು ಹೇಳಿದರು.
‘ವಿಭಜಿತ ಓದು ಮತ್ತು ವಿಮರ್ಶೆ ಚರಿತ್ರೆಯ ಕೊಂಡಿಗಳನ್ನು ಕಳಚುತ್ತಿದೆ. ಓದು ವಕ್ಕಲಾತ್ತು ಅಲ್ಲ. ವಿಮರ್ಶಕರು ವಕೀಲರಲ್ಲ, ಸಾಹಿತಿಗಳು ಕಕ್ಷಿದಾರರಲ್ಲ. ಇಂತಹ ಸಂದರ್ಭದಲ್ಲಿ ಮಾನವೀಯ, ಆರೋಗ್ಯಕರವಾದ ಸಂವಾದ ನಡೆಸಬೇಕು’ ಎಂದರು.
‘ನಾನು ದಲಿತ, ಬಂಡಾಯದ ಕುರಿತು ಮಾತನಾಡುವುದಕ್ಕೆ ಪ್ರಾರಂಭಿಸಿದ ಬಳಿಕ ನನ್ನ ಪುಸ್ತಕಗಳನ್ನು ನೋಡುವ ದೃಷ್ಟಿಕೋನವೇ ಬದಲಾಯಿತು’ ಎಂದು ಹೇಳಿದರು.
ದಕ್ಷಿಣಾಯನ ಕಾದಂಬರಿ ಜನಾರ್ಪಣೆಗೊಳಿಸಿ ಮಾತನಾಡಿದ ಸಾಹಿತಿ ಜಯಂತ್ ಕಾಯ್ಕಿಣಿ, ‘ಪುಸ್ತಕಗಳನ್ನು ಕೊಂಡುಕೊಳ್ಳುವಾಗ ಹಲವರು ಯೋಚನೆ ಮಾಡ್ತಾರೆ. ಆದರೆ ಅವರಿಗೆ ಗೊತ್ತಿಲ್ಲ ಪುಸ್ತಕ ಎನ್ನವುದು ಜೀವನದುದ್ದಕ್ಕೂ ನಮ್ಮ ಜೊತೆ ಇರುವಂತಹ ಒಂದು ಆಸ್ತಿ. ಪುಸ್ತಕದ ಅನುಭವ ನಮ್ಮ ಜೊತೆ ಶಾಶ್ವತವಾಗಿ ಇರುತ್ತದೆ’ ಎಂದರು.
ಲೇಖಕರಾದ ಹರೀಶ್ ಕೇರ, ಜೋಗಿ, ಪ್ರಕಾಶ್ ಕಂಬತ್ತಹಳ್ಳಿ, ಪ್ರಭಾ ಕಂಬತ್ತಹಳ್ಳಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.