ADVERTISEMENT

ಸಂಶೋಧನೆಗೆ ಪ್ರತ್ಯೇಕ ಸಂಸ್ಥೆ ಅಗತ್ಯ: ಸಾಹಿತಿ ಬರಗೂರು ರಾಮಚಂದ್ರಪ್ಪ

ಜಾನಪದ ವಿದ್ವಾಂಸ ರಾಮೇಗೌಡಗೆ ‘ಶ್ರೀ ಸಾಹಿತ್ಯ ಪ್ರಶಸ್ತಿ’ ಪ್ರದಾನ

​ಪ್ರಜಾವಾಣಿ ವಾರ್ತೆ
Published 21 ಜನವರಿ 2024, 14:16 IST
Last Updated 21 ಜನವರಿ 2024, 14:16 IST
ಕಾರ್ಯಕ್ರಮದಲ್ಲಿ ರಾಮೇಗೌಡ ಅವರಿಗೆ ಬರಗೂರು ರಾಮಚಂದ್ರಪ್ಪ ಅವರು ‘ಶ್ರೀ ಸಾಹಿತ್ಯ ಪ್ರಶಸ್ತಿ’ ಪ್ರದಾನ ಮಾಡಿದರು. ಬಿ.ಎಂ.ಶ್ರೀ. ಪ್ರತಿಷ್ಠಾನದ ಗೌರವ ಕಾರ್ಯದರ್ಶಿ ಶಾಂತರಾಜು, ಅಧ್ಯಕ್ಷ ಬೈರಮಂಗಲ ರಾಮೇಗೌಡ, ವಿಮರ್ಶಕ ಪಿ.ವಿ. ನಾರಾಯಣ ಉಪಸ್ಥಿತರಿದ್ದರು –ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ ರಾಮೇಗೌಡ ಅವರಿಗೆ ಬರಗೂರು ರಾಮಚಂದ್ರಪ್ಪ ಅವರು ‘ಶ್ರೀ ಸಾಹಿತ್ಯ ಪ್ರಶಸ್ತಿ’ ಪ್ರದಾನ ಮಾಡಿದರು. ಬಿ.ಎಂ.ಶ್ರೀ. ಪ್ರತಿಷ್ಠಾನದ ಗೌರವ ಕಾರ್ಯದರ್ಶಿ ಶಾಂತರಾಜು, ಅಧ್ಯಕ್ಷ ಬೈರಮಂಗಲ ರಾಮೇಗೌಡ, ವಿಮರ್ಶಕ ಪಿ.ವಿ. ನಾರಾಯಣ ಉಪಸ್ಥಿತರಿದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಇಲ್ಲಿನ ಸಾಹಿತ್ಯ ಹಾಗೂ ಸಂಸ್ಕೃತಿಗಳ ಬಗ್ಗೆ ಅಷ್ಟಾಗಿ ಸಂಶೋಧನೆಗಳು ನಡೆದಿಲ್ಲ. ಆದ್ದರಿಂದ ರಾಜ್ಯ ಸರ್ಕಾರವು ಸಂಶೋಧನೆಗಾಗಿಯೇ ಪ್ರತ್ಯೇಕ ಸ್ವಾಯತ್ತ ಸಂಸ್ಥೆಯೊಂದನ್ನು ಸ್ಥಾಪಿಸಬೇಕು’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಆಗ್ರಹಿಸಿದರು. 

ಬಿ.ಎಂ.ಶ್ರೀ. ಪ್ರತಿಷ್ಠಾನ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಜಾನಪದ ವಿದ್ವಾಂಸ ರಾಮೇಗೌಡ (ರಾಗೌ) ಅವರಿಗೆ ‘ಶ್ರೀ ಸಾಹಿತ್ಯ ಪ್ರಶಸ್ತಿ’ ಪ್ರದಾನ ಮಾಡಿ, ಮಾತನಾಡಿದರು. ಈ ದತ್ತಿ ಪ್ರಶಸ್ತಿಯನ್ನು ಪ್ರತಿಷ್ಠಾನದಲ್ಲಿ ಕಮಲಿನಿ ಶಾ. ಬಾಲುರಾವ್ ಸ್ಥಾಪಿಸಿದ್ದು, ₹ 1 ಲಕ್ಷ ನಗದು ಒಳಗೊಂಡಿದೆ.

‘ತಮಿಳು ಭಾಷೆ 2004ರಲ್ಲಿ ಶಾಸ್ತ್ರೀಯ ಭಾಷೆ ಸ್ಥಾನ ಪಡೆದುಕೊಂಡಿತು. ಕನ್ನಡ ಭಾಷೆಗೆ 2008ರಲ್ಲಿ ಶಾಸ್ತ್ರೀಯ ಭಾಷೆ ಸ್ಥಾನಮಾನ ಸಿಕ್ಕಿತು. ಆದರೆ, ಈ ಭಾಷೆಗೆ ಸಂಬಂಧಿಸಿದಂತೆ ನಂತರದ ಬೆಳವಣಿಗೆಗಳು ನಿರಾಶಾದಾಯಕ. ಶಾಸ್ತ್ರೀಯ ಭಾಷೆಯ ಸ್ಥಾನಮಾನ ಸಿಕ್ಕ ಬಳಿಕ ಸ್ವಾಯತ್ತ ಸಂಸ್ಥೆ ಸ್ಥಾಪಿಸಿ, ಯೋಜನೆಗಳನ್ನು ರೂಪಿಸಿದರೆ ಮಾತ್ರ ಕೇಂದ್ರ ಸರ್ಕಾರದಿಂದ ಅನುದಾನ ಸಿಗಲಿದೆ. ಕನ್ನಡಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಸ್ವಾಯತ್ತ ಸಂಸ್ಥೆ ಸ್ಥಾಪಿಸುವ ಬದಲು, ಭಾರತೀಯ ಭಾಷಾ ಸಂಸ್ಥಾನದ (ಸಿಐಐಎಲ್‌) ಅಡಿ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರವನ್ನು ತರಲಾಗಿದೆ. ತಮಿಳುನಾಡಿನಲ್ಲಿ ಈ ಕೇಂದ್ರ ಸ್ವಾಯತ್ತ ಸಂಸ್ಥೆಯಾಗಿ ರೂಪುಗೊಂಡಿದೆ. ಆದರೆ, ನಮ್ಮ ರಾಜ್ಯ ಸರ್ಕಾರಕ್ಕೆ ಇದು ಸಾಧ್ಯವಾಗಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು. 

ADVERTISEMENT

‘ಕರ್ನಾಟಕದಲ್ಲಿ ಸಂಶೋಧನೆಗೆ ಶಕ್ತಿ ನೀಡಲು ಶಾಸ್ತ್ರೀಯ ಭಾಷಾ ಸ್ವಾಯತ್ತ ಕೇಂದ್ರವನ್ನು ಸ್ಥಾಪಿಸಬೇಕು. ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಎಲ್ಲ ಶಾಸ್ತ್ರೀಯ ಭಾಷಾ ಸಂಸ್ಥೆಗಳೂ ವಿಶ್ವವಿದ್ಯಾಲಯದ ಭಾಗವಾಗಬೇಕು ಎನ್ನಲಾಗಿದೆ. ಅದು ಜಾರಿಗೊಂಡಲ್ಲಿ ಭಾಷಾ ಸಂಸ್ಥೆಗಳೂ ಕನ್ನಡ ವಿಭಾಗವಾಗಿ ಮಾರ್ಪಡಲಿವೆ. ಆದ್ದರಿಂದ ರಾಜ್ಯ ಸರ್ಕಾರವು ಈ ಬಗ್ಗೆ ಕೇಂದ್ರ ಸರ್ಕಾರದ ಜತೆಗೆ ಪತ್ರ ವ್ಯವಹಾರ ನಡೆಸಿ, ಭಾರತೀಯ ಭಾಷಾ ಸಂಸ್ಥಾನದ ಭಾಗವಾಗಿರುವ ಕನ್ನಡ ಕೇಂದ್ರವನ್ನು ಬಿಡುಗಡೆಗೊಳಿಸಬೇಕು. ಸ್ವತಂತ್ರ ಸ್ವಾಯತ್ತ ಸಂಶೋಧನಾ ಸಂಸ್ಥೆಯನ್ನಾಗಿ ನಡೆಸುವ ಕೆಲಸವಾಗಬೇಕು’ ಎಂದು ಹೇಳಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ರಾಮೇಗೌಡ, ‘ನಾವು ಮಾಡಿದ ಒಳ್ಳೆಯ ಕೆಲಸಗಳು ಶಾಶ್ವತವಾಗಿ ಉಳಿಯುತ್ತವೆ. ಗಾಂಧೀಜಿ ಸೇರಿ ಎಷ್ಟೋ ಮಂದಿ ಸಾಧಕರಿಗೆ ಪ್ರತಿಷ್ಠಿತ ಪ್ರಶಸ್ತಿಗಳು ಸಿಗದಿದ್ದರೂ ಅವರು ತಮ್ಮ ಕೆಲಸಗಳಿಂದ ಚಿರಸ್ಥಾಯಿಯಾಗಿದ್ದಾರೆ. ಬಿ.ಎಂ.ಶ್ರೀಕಂಠಯ್ಯ (ಬಿ.ಎಂ.ಶ್ರೀ) ಅವರು ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಪೋಷಿಸಿದರು. ಅವರು ಎಲ್ಲ ಕಾಲಕ್ಕೂ ಪ್ರಸ್ತುತ ಆಗುತ್ತಾರೆ’ ಎಂದು ಮೆಚ್ಚುಗೆ ವ್ಯಕ್ತ‍ಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.