
ಕಾರ್ಯಕ್ರಮದಲ್ಲಿ (ಕುಳಿತವರು ಎಡದಿಂದ) ರಘುನಾಥ ಚ.ಹ ಅವರಿಗೆ ‘ಕುವೆಂಪು ಚಿರಂತನ ಪ್ರಶಸ್ತಿ’, ಇಂದೂಧರ ಹೊನ್ನಾಪುರ ಅವರಿಗೆ ‘ಕುವೆಂಪು ಅನಿಕೇತನ ಪ್ರಶಸ್ತಿ’, ಸಂಘಮಿತ್ರೆ ನಾಗರಘಟ್ಟ ಅವರಿಗೆ ‘ಕುವೆಂಪು ಯುವಕವಿ ಪ್ರಶಸ್ತಿ’ ಪ್ರದಾನ ಮಾಡಲಾಯಿತು.
ಪ್ರಜಾವಾಣಿ ಚಿತ್ರ
ಬೆಂಗಳೂರು: ‘ಗೌರವ ಕಳೆದುಕೊಳ್ಳುತ್ತಿರುವ ಗೌರವ ಡಾಕ್ಟರೇಟ್‌ಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಕಾಯ್ದೆ ರೂಪಿಸಬೇಕು’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಆಗ್ರಹಿಸಿದರು.
ಕನ್ನಡ ಸಂಘರ್ಷ ಸಮಿತಿಯು ಕುವೆಂಪು ಹಾಗೂ ದ.ರಾ. ಬೇಂದ್ರೆ ಅವರ ಜನ್ಮದಿನದ ಅಂಗವಾಗಿ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪ್ರಜಾವಾಣಿ ‘ಅಭಿಮತ’ ಸಂಪಾದಕ ರಘುನಾಥ ಚ.ಹ ಅವರಿಗೆ ‘ಕುವೆಂಪು ಚಿರಂತನ ಪ‍್ರಶಸ್ತಿ’, ಪತ್ರಕರ್ತ ಇಂದೂಧರ ಹೊನ್ನಾಪುರ ಅವರಿಗೆ ‘ಕುವೆಂಪು ಅನಿಕೇತನ ಪ್ರಶಸ್ತಿ’ ಹಾಗೂ ಕವಯಿತ್ರಿ ಸಂಘಮಿತ್ರೆ ನಾಗರಘಟ್ಟ ಅವರಿಗೆ ‘ಕುವೆಂಪು ಯುವಕವಿ ಪ್ರಶಸ್ತಿ’ ಪ್ರದಾನ ಮಾಡಿ, ಮಾತನಾಡಿದರು.
‘ಗೌರವ ಡಾಕ್ಟರೇಟ್ ನೀಡಲು ಅಧಿಕೃತ ವಿಶ್ವವಿದ್ಯಾಲಯಗಳು ಮಾತ್ರ ಅರ್ಹವಾಗಿರುತ್ತವೆ. ಆದರೆ, ಈಗ ವಿವಿಧ ಸಂಸ್ಥೆಗಳು ಗೌರವ ಡಾಕ್ಟರೇಟ್ ನೀಡುತ್ತಿವೆ. ಇದರಿಂದಾಗಿ ಸಾಧನೆ ಮಾಡಬೇಕೆಂದು ಹೊರಟವರ ಉತ್ಸಾಹ ಕುಂದಲಿದೆ. ಆದ್ದರಿಂದ ಗೌರವ ಡಾಕ್ಟರೇಟ್ ಅನ್ನು ಅಧಿಕೃತ ವಿಶ್ವವಿದ್ಯಾಲಯ ಮಾತ್ರ ನೀಡುವಂತಾಗಬೇಕು. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು. ಗೌರವ ಡಾಕ್ಟರೇಟ್, ನಾಡೋಜದಂತಹ ಗೌರವ ಪದವಿಗಳನ್ನು ಹೆಸರಿನ ಹಿಂದೆ ಹಾಕಿಕೊಳ್ಳಬಾರದು ಎಂಬ ನಿಯಮವಿದೆ. ಆದರೆ, ಈಗ ಲೆಟರ್ ಹೆಡ್‌ನಲ್ಲಿಯೇ ಹಾಕಿಕೊಳ್ಳುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.
‘ಕೆಲ ವಿಮರ್ಶಕರು ಕುವೆಂಪು ಮತ್ತು ಬೇಂದ್ರೆಯನ್ನು ಎದುರು ಬದುರು ನಿಲ್ಲಿಸಲು ಪ್ರಯತ್ನಿಸಿದರು. ಇಬ್ಬರಿಗೂ ಅವರದೇ ಆದ ಶಕ್ತಿಯಿದೆ. ಅವರು ಕರ್ನಾಟಕದ ಸಂಸ್ಕೃತಿ ಮತ್ತು ಕನ್ನಡ ಸಾಹಿತ್ಯವನ್ನು ಸಮೃದ್ಧಗೊಳಿಸಿದ್ದಾರೆ’ ಎಂದು ಹೇಳಿದರು.
ಕುವೆಂಪು ಹಾಗೂ ಬೇಂದ್ರೆ ಕುರಿತು ಉಪನ್ಯಾಸ ನೀಡಿದ ಕವಿ ಕಾ.ವೆಂ.ಶ್ರೀನಿವಾಸಮೂರ್ತಿ, ‘ಕನ್ನಡ ಶಾಲೆ ಮುಚ್ಚುವ ಹಾಗೂ ಆಂಗ್ಲ ಮಾಧ್ಯಮ ಶಾಲೆ ಆರಂಭಿಸುವ ಸರ್ಕಾರದ ನಡೆ ಕುವೆಂಪು ಮತ್ತು ಬೇಂದ್ರೆ ಅವರ ಆಶಯಕ್ಕೆ ವಿರುದ್ಧವಾಗಿದೆ’ ಎಂದು ಅಭಿಪ್ರಾಯಪಟ್ಟರು.
ಪತ್ರಕರ್ತ ರಾಮಣ್ಣ ಎಚ್. ಕೋಡಿಹೊಸಹಳ್ಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿಮರ್ಶಕ ಎಚ್. ದಂಡಪ್ಪ, ಸಮಿತಿಯ ಅಧ್ಯಕ್ಷ ಎ.ಎಸ್.ನಾಗರಾಜಸ್ವಾಮಿ, ಪ್ರಧಾನ ಕಾರ್ಯದರ್ಶಿ ತಾ.ಸಿ. ತಿಮ್ಮಯ್ಯ, ಜಂಟಿ ಕಾರ್ಯದರ್ಶಿ ಇಂದಿರಾ ಶರಣ್ ಜಮ್ಮಲದಿನ್ನಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.