ADVERTISEMENT

ಭೋವಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿಗೆ ಅತ್ಯಾಚಾರ ಬೆದರಿಕೆ: ದೂರು ದಾಖಲು

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2022, 20:16 IST
Last Updated 23 ಮಾರ್ಚ್ 2022, 20:16 IST

ಬೆಂಗಳೂರು: ಬಿಬಿಎಂಪಿ ಆಡಳಿತ ವಿಭಾಗದ ಉಪ ಆಯುಕ್ತರಾಗಿದ್ದ ಯೋಗೇಶ್‌ ಅವರು ತನಗೆ ಅತ್ಯಾಚಾರದ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಆರ್‌.ಲೀಲಾವತಿ ದೂರು ನೀಡಿದ್ದಾರೆ. ಬಸವನಗುಡಿ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಇದೇ 18ರಂದು ಕಚೇರಿಗೆ ಬಂದಿದ್ದ ಯೋಗೇಶ್‌, ಏಕಾಏಕಿ ನನ್ನ ಕೊಠಡಿಯೊಳಗೆ ಪ್ರವೇಶಿಸಿದ್ದರು.ಭೋವಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಪ್ರಭಾರ ಹುದ್ದೆ ತನಗೆ ನೀಡುವಂತೆ ಏರುಧ್ವನಿಯಲ್ಲಿ ಕೇಳಿದ್ದರು. ಕಚೇರಿ ಸಿಬ್ಬಂದಿಯನ್ನು ಕರೆದು ಕೇಳಿದಾಗ ಅವರು ಸರ್ಕಾರದಿಂದ ಯಾವುದೇ ಆದೇಶ ಬಂದಿಲ್ಲ ಎಂಬುದನ್ನು ಗಮನಕ್ಕೆ ತಂದಿದ್ದರು. ಅಷ್ಟಕ್ಕೆ ನನ್ನ ಮೇಲೆ ರೇಗಾಡಿದ್ದ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಮದ್ಯಪಾನ ಮಾಡಿದ್ದ ಯೋಗೇಶ್‌ ಅವರು ಕೈಹಿಡಿದು ಎಳೆದಾಡಿ ನೆಲಕ್ಕೆ ತಳ್ಳಿದ್ದರು. ಪ್ರಭಾರ ಹುದ್ದೆ ಕೊಡದಿದ್ದರೆ ಮನೆಗೆ ನುಗ್ಗಿ ಅತ್ಯಾಚಾರ ಮಾಡುವುದಾಗಿ ಬೆದರಿಸಿದ್ದರು. ಕೊಲೆ ಬೆದರಿಕೆಯನ್ನೂ ಹಾಕಿದ್ದರು ಎಂದೂ ದೂರಿನಲ್ಲಿ ವಿವರಿಸಲಾಗಿದೆ’ ಎಂದು ಹೇಳಿದ್ದಾರೆ.

ADVERTISEMENT

‘ಅಧಿಕಾರ ವಹಿಸಿಕೊಳ್ಳುವಂತೆ ನನಗೆ ಸರ್ಕಾರದಿಂದ ಆದೇಶ ಬಂದಿತ್ತು. ಅದರಂತೆ ಕಚೇರಿಗೆ ಹೋಗಿ ವಿನಮ್ರತೆಯಿಂದಲೇ ಲೀಲಾವತಿಯವರ ಜೊತೆ ಮಾತನಾಡಿದ್ದೆ. ಆದೇಶದ ಪ್ರತಿ ತನಗೆ ಬಂದಿಲ್ಲ ಎಂದು ಅವರು ಹೇಳಿದರು. ಅಧಿಕಾರ ಬಿಟ್ಟುಕೊಡಲು ನಿರಾಕರಿಸಿದ್ದರಿಂದ ಮರು ಮಾತನಾಡದೆ ಮನೆಗೆ ಹಿಂತಿರುಗಿದ್ದೆ’ ಎಂದು ಯೋಗೇಶ್‌ ಪ್ರತಿಕ್ರಿಯಿಸಿದ್ದಾರೆ.

‘ಲೀಲಾವತಿಯವರು ಮಾಡಿರುವ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ. ಅವೆಲ್ಲಾ ಸತ್ಯಕ್ಕೆ ದೂರವಾದುವು’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.