ADVERTISEMENT

ಬಸವನಗುಡಿ ಪರಿಷೆಗೆ ಚಾಲನೆ: ಕಡಲೆಕಾಯಿ ತಿಂದು, ಪೀಪಿ ಊದಿದರು

ಕುತೂಹಲದಿಂದ ಭಾಗಿಯಾದ ನಗರವಾಸಿಗಳು

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2018, 19:34 IST
Last Updated 3 ಡಿಸೆಂಬರ್ 2018, 19:34 IST
ಬಸವನಗುಡಿಯಲ್ಲಿ ಮುಜರಾಯಿ ಇಲಾಖೆ ಆಯೋಜಿಸಿದ್ದ ಬೆಂಗಳೂರು ಪಾರಂಪರಿಕ ಕಡಲೆಕಾಯಿ ಪರಿಷೆಯಲ್ಲಿ ಭಾಗಿಯಾದ ಮೇಯರ್ ಗಂಗಾಭಿಕೆ
ಬಸವನಗುಡಿಯಲ್ಲಿ ಮುಜರಾಯಿ ಇಲಾಖೆ ಆಯೋಜಿಸಿದ್ದ ಬೆಂಗಳೂರು ಪಾರಂಪರಿಕ ಕಡಲೆಕಾಯಿ ಪರಿಷೆಯಲ್ಲಿ ಭಾಗಿಯಾದ ಮೇಯರ್ ಗಂಗಾಭಿಕೆ   

ಬೆಂಗಳೂರು: ಕಾಲೇಜು ವಿದ್ಯಾರ್ಥಿಗಳು ಕಡಲೆಕಾಯಿ ತಿನ್ನುತ್ತ,ಪೀಪಿ ಊದುತ್ತ, ಛಾಯಾಚಿತ್ರಕ್ಕೆ ಫೋಸ್‌ ಕೊಡುತ್ತಲೆ ಚಿಣ್ಣರಂತಾದರು. ಕೆಲವರು ಜೋಕಾಲಿ ಜೀಕಿ ಖುಷಿಪಟ್ಟರು. ಅಜ್ಜಿಯರು, ಯುವತಿಯರು ಆಲಂಕಾರಿಕ, ಗೃಹ ಉಪಯೋಗಿ ವಸ್ತುಗಳ ಖರೀದಿಗೆ ಮುಂದಾಗಿದ್ದರು.

ಬಸವನಗುಡಿಗೆ ಭೇಟಿ ನೀಡುವ ನಗರವಾಸಿಗಳಿಗೆ ಈಗ ಸಂಭ್ರಮದ ಸಮಯ. ಈ ಬಾರಿಯ ಕಡಲೆಕಾಯಿ ಪರಿಷೆಯಲ್ಲಿ ತಿನ್ನುವುದರ ಜತೆಗೆ ಉಯ್ಯಾಲೆಯಲ್ಲಿ ಜೀಕುವ ಅವಕಾಶವೂ ಇದೆ.

ಬಸವನಗುಡಿಯಲ್ಲಿ ಮುಜರಾಯಿ ಇಲಾಖೆ ಆಯೋಜಿಸಿದ್ದ ಬೆಂಗಳೂರು ಪಾರಂಪರಿಕ ಕಡಲೆಕಾಯಿ ಪರಿಷೆಗೆಸೋಮವಾರ ಚಾಲನೆ ದೊರೆತಿದೆ.

ADVERTISEMENT

ಪರಿಷೆಯಲ್ಲಿ ಕೆಲವರು ಪ್ಲಾಸ್ಟಿಕ್‌, ರಟ್ಟಿನಿಂದ ತಯಾರಿಸಿದ್ದ ಬಣ್ಣದ ಪೀಪಿಗಳನ್ನು ಊದುತ್ತಿದ್ದರೆ, ಥೇಟ್‌ ಮಗು ಅತ್ತಂತೆಯೇ ಕೇಳುತ್ತಿತ್ತು. ಇನ್ನೂ ಕೆಲವರು ಆವೆಮಣ್ಣಿನಿಂದ ತಯಾರಿಸಿದ ಕಲಾಕೃತಿಗಳನ್ನು ನೋಡುತ್ತಾ ಮೈಮರೆತರು.ಹಲವರು ಚಾಕೋಲೆಟ್‌, ಐಸ್‌ಕ್ರೀಂ, ಬಗೆಬಗೆಯ ತಿಂಡಿ, ತಿನಿಸುಗಳನ್ನು ಸವಿದರು. ಅಪ್ಪ, ಅಮ್ಮಂದಿರು ಸಹ ಮಕ್ಕಳು ಹಾಗೂ ಸ್ನೇಹಿತರ ಜತೆ ಸೇರಿಕೊಂಡು ಹಬ್ಬದ ವಾತಾವರಣದಲ್ಲಿ ಸೆಲ್ಫಿ ತೆಗೆಸಿಕೊಂಡು ಸಂಭ್ರಮಿಸಿದರು.

ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್‌ ಸಮಿತಿ ವತಿಯಿಂದ ಪ್ಲಾಸ್ಟಿಕ್‌ ಬಳಕೆ ವಿರೋಧಿಸಿ ಜಾಗೃತಿ ಮೂಡಿಸಲು ಹತ್ತು ಸಾವಿರ ಬಟ್ಟೆ ಮತ್ತು ಪೇಪರ್‌ ಚೀಲಗಳನ್ನು ವಿತರಣೆ ಮಾಡಲಾಯಿತು. ಆದರೆ, ಅಲ್ಲಿ ಕೆಲವು ಪಾಲಿಥಿನ್‌ ಚೀಲಗಳನ್ನೂ ವಿತರಣೆ ಮಾಡಲಾಯಿತು.

‘ಪ್ಲಾಸ್ಟಿಕ್‌ ಬಳಸಬೇಡಿ, ಪರಿಸರ ಸ್ನೇಹಿ ಚೀಲಗಳನ್ನು ಬಳಸಿ’ ಎಂದು ಯುವಕರ ತಂಡ ಜಾಗೃತಿ ಫಲಕಗಳನ್ನು ಹಿಡಿದು ಅಂಗಡಿಗಳತ್ತ ಹೆಜ್ಜೆ ಹಾಕುತ್ತಿತ್ತು. ದೇವಸ್ಥಾನದ ಸುತ್ತಮುತ್ತಲಿನ ಕೆಲವು ಅಂಗಡಿಗಳಲ್ಲಿ ಗ್ರಾಹಕರಿಗೆ ಕಾಗದದಲ್ಲೇ ಕಡಲೆಕಾಯಿ ಕಟ್ಟಿ ಕೊಡಲಾಗುತ್ತಿತ್ತು. ಆದರೆ, ಬಹುತೇಕ ಅಂಗಡಿಗಳಲ್ಲಿ ಪ್ಲಾಸ್ಟಿಕ್‌ ಬಳಕೆ ಮಾಡಲಾಗುತ್ತಿತ್ತು.

ಬೇಯಿಸಿದ, ಹುರಿದ ಹಾಗೂ ಹಸಿ ಕಡಲೆಕಾಯಿಗೆ ಎಂದಿನಂತೆ ಬೇಡಿಕೆ ಹೆಚ್ಚಿತ್ತು. ಹಸಿ ಕಡಲೆಕಾಯಿ ಒಂದುಶೇರಿಗೆ ₹25 ರಿಂದ ₹50ರವರೆಗೆ ಮಾರಾಟವಾಗುತ್ತಿದ್ದರೆ, ಹುರಿದ ಕಡಲೆಕಾಯಿ ₹35ರಿಂದ ₹40ರವರೆಗೆ ಮಾರಾಟ ಮಾಡಲಾಗುತ್ತಿತ್ತು. ಯುವತಿಯರು, ಮಹಿಳೆಯರು ಕಡಲೆಕಾಯಿ ತಿನ್ನುತ್ತಲೆ ಗೃಹೋಪಯೋಗಿ ವಸ್ತುಗಳನ್ನು ಖರೀದಿಸುತ್ತಿದ್ದರು.

ಬೆಳಿಗ್ಗೆ ದೊಡ್ಡ ಗಣಪತಿ ಹಾಗೂ ಬಸವಣ್ಣನಿಗೆ ಕಡಲೆಕಾಯಿ ಅಭಿಷೇಕ ನಡೆಯಿತು.

‘ಪ್ರವಾಸಿ ಸ್ಥಳಗಳನ್ನಾಗಿಸಲು ಚಿಂತನೆ’

‘ಬಸವನಗುಡಿಯ ಕಾರಂಜಿ ಆಂಜನೇಯಸ್ವಾಮಿ, ಮಲ್ಲಿಕಾರ್ಜುನಸ್ವಾಮಿ, ಗವಿಗಂಗಾಧರೇಶ್ವರಸ್ವಾಮಿ ದೇವಸ್ಥಾನಗಳನ್ನು ಪ್ರವಾಸಿ ಸ್ಥಳಗಳನ್ನಾಗಿ ಮಾರ್ಪಡಿಸುವ ಚಿಂತನೆ ಪಾಲಿಕೆಗೆ ಇದೆ’ ಎಂದು ಮೇಯರ್‌ ಗಂಗಾಂಬಿಕೆ ಹೇಳಿದರು.

ಪರಿಷೆಗೆ ಚಾಲನೆ ನೀಡಿ ಮಾತನಾಡಿದ ಅವರು, ‘ಖರೀದಿಗೆ ಹೋಗುವಾಗ ಮನೆಯಿಂದಲೇ ಚೀಲ ತೆಗೆದುಕೊಂಡು ಹೋಗಿ ಅಥವಾ ಪರಿಸರ ಸ್ನೇಹಿ ಕೈ ಚೀಲಗಳನ್ನು ಬಳಸಿ. ನಗರವನ್ನು ಪ್ಲಾಸ್ಟಿಕ್‌ ಮುಕ್ತವಾಗಿಸಲು ಪಾಲಿಕೆ ಪಣ ತೊಟ್ಟಿದೆ. ಎಲ್ಲರೂ ಕೈ ಜೋಡಿಸಿದರೆ ಖಂಡಿತ ಇದು ಸಾಧ್ಯ’ ಎಂದರು.

‘ಪ್ಲಾಸ್ಟಿಕ್‌ ನಿಯಂತ್ರಣಕ್ಕೆ ಕೇಂದ್ರ ಮಟ್ಟದಲ್ಲಿಯೆ ಕಟ್ಟುನಿಟ್ಟಿನ ನೀತಿ ರಚನೆಯಾಗಬೇಕು’ ಎಂದು ಶಾಸಕಿ ಸೌಮ್ಯ ರೆಡ್ಡಿ ಹೇಳಿದರು. ‘ಹೊರ ರಾಜ್ಯಗಳಿಂದಲೇ ರಾಜ್ಯಕ್ಕೆ ಪ್ಲಾಸ್ಟಿಕ್‌ ಆಮದಾಗುತ್ತಿದೆ. ಈ ಬಗ್ಗೆ ಪೊಲೀಸ್‌ ಇಲಾಖೆ ಸೂಕ್ತ ಕ್ರಮಕೈಗೊಳ್ಳಬೇಕು’ ಎಂದರು.

**

ಇದೇ ಮೊದಲ ಬಾರಿಗೆ ಪರಿಷೆ ನೋಡಲು ಬಂದಿದ್ದೇನೆ. ತುಂಬಾ ಸಂತೋಷವಾಗಿದೆ. ಕಡಲೆಕಾಯಿ ತಿಂದು, ಮನೆಗೂ ತೆಗೆದುಕೊಂಡು ಹೋಗುವೆ.
- ಗಗನ್‌ಕುಮಾರ್‌, ಬಿಎಸ್‌ಸಿ ವಿದ್ಯಾರ್ಥಿ

**

ಪರಿಷೆಯಲ್ಲಿ ದೇವರ ದರ್ಶನಕ್ಕೆ ನೂಕು ನುಗ್ಗಲಾಗುತ್ತದೆ. ಇದರಿಂದ ಹಿರಿಯ ನಾಗರಿಕರಿಗೆ ತೊಂದರೆಯಾಗುತ್ತದೆ. ಪ್ರತ್ಯೇಕ ಸಾಲು ಮಾಡಿದರೆ, ದರ್ಶನ ಪಡೆಯಲು ಅನುಕೂಲವಾಗುತ್ತದೆ.
- ನಾಗರಾಜ ಚಡಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.