ADVERTISEMENT

ಸಂಚಾರ ನಿರ್ವಹಣಾ ಪ್ರಾಧಿಕಾರ ರಚನೆ ಶೀಘ್ರ: ಬಸವರಾಜ ಬೊಮ್ಮಾಯಿ

‘ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸ’ ಕಾರ್ಯಕ್ರಮದಲ್ಲಿ ಗೃಹ ಸಚಿವ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2021, 6:42 IST
Last Updated 24 ಜನವರಿ 2021, 6:42 IST
ಕಾರ್ಯಕ್ರಮದಲ್ಲಿ ‘ಮೊಳಕೆಯಲ್ಲೇ ತಿದ್ದಿರಿ’ ಸಿ.ಡಿ ಮತ್ತು ಕಿರುಪುಸ್ತಕ ಬಿಡುಗಡೆ ಮಾಡಲಾಯಿತು. ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್, ಉದಯ್ ಬಿ.ಗರುಡಾಚಾರ್, ಬಸವರಾಜ ಬೊಮ್ಮಾಯಿ, ಸಿ.ಎನ್‌.ಅಶ್ವತ್ಥನಾರಾಯಣ,  ಬಿಬಿಎಂಪಿ ಆಡಳಿತಾಧಿಕಾರಿ ಗೌರವ ಗುಪ್ತ ಹಾಗೂ ಇತರರು ಇದ್ದಾರೆ –ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ ‘ಮೊಳಕೆಯಲ್ಲೇ ತಿದ್ದಿರಿ’ ಸಿ.ಡಿ ಮತ್ತು ಕಿರುಪುಸ್ತಕ ಬಿಡುಗಡೆ ಮಾಡಲಾಯಿತು. ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್, ಉದಯ್ ಬಿ.ಗರುಡಾಚಾರ್, ಬಸವರಾಜ ಬೊಮ್ಮಾಯಿ, ಸಿ.ಎನ್‌.ಅಶ್ವತ್ಥನಾರಾಯಣ,  ಬಿಬಿಎಂಪಿ ಆಡಳಿತಾಧಿಕಾರಿ ಗೌರವ ಗುಪ್ತ ಹಾಗೂ ಇತರರು ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ನಗರದಲ್ಲಿ ಸಂಚಾರ ವ್ಯವಸ್ಥೆಯನ್ನು ಉತ್ತಮಗೊಳಿಸಲು ಗೃಹ ಇಲಾಖೆ ಹಾಗೂ ಬಿಬಿಎಂಪಿಯ ಜಂಟಿ ಆಶ್ರಯದಲ್ಲಿ ‘ಸಂಚಾರ ನಿರ್ವಹಣಾ ಪ್ರಾಧಿಕಾರ’ ರಚಿಸಲಾಗುವುದು’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

ಇಲ್ಲಿನ ಪುರಭವನದಲ್ಲಿ ಶನಿವಾರ ನಡೆದ ‘32ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಗರದಲ್ಲಿನ 12 ಹೈ–ಡೆನ್ಸಿಟಿ ಕಾರಿಡಾರ್‌ಗಳಲ್ಲಿ ರಸ್ತೆ ವಿಸ್ತರಣೆ ಸೇರಿದಂತೆ ದಟ್ಟಣೆ ನಿಯಂತ್ರಣಕ್ಕೆ ಸರ್ಕಾರ ₹470 ಕೋಟಿ ಬಿಡುಗಡೆ ಮಾಡಿದೆ. ಕೇಂದ್ರ ವಾಣಿಜ್ಯ ಪ್ರದೇಶವನ್ನುಸಂಪೂರ್ಣವಾಗಿ ಆಧುನೀಕರಣಗೊಳಿಸಲು ₹30 ಕೋಟಿ ಮಂಜೂರಾಗಿದೆ. ಈ ಯೋಜನೆಗಳಿಗೆ ಶೀಘ್ರವೇ ಚಾಲನೆ ನೀಡಲಾಗುವುದು’ ಎಂದರು.

ADVERTISEMENT

‘ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹೆಚ್ಚಿನ ಅಪಘಾತಗಳು ನಡೆಯುತ್ತಿರುವುದರಿಂದ ಇದರ ನಿಯಂತ್ರಣಕ್ಕೂ ಲೋಕೋಪಯೋಗಿ ಹಾಗೂ ಗೃಹ ಇಲಾಖೆಗಳು ಜಂಟಿಯಾಗಿ ಕಾರ್ಯನಿರ್ವಹಿಸಲಿವೆ. ಸಂಚಾರ ನಿಯಮ ಉಲ್ಲಂಘನೆಗಾಗಿ ರಾಜ್ಯದಾದ್ಯಂತ ಸಂಗ್ರಹಿಸುವ ದಂಡದ ಪೂರ್ಣ ಪ್ರಮಾಣವನ್ನು ಸಂಚಾರ ಅಭಿವೃದ್ಧಿಗೆ ವಿನಿಯೋಗಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದು, ಸದ್ಯ ಶೇ 50ರಷ್ಟು ಮೊತ್ತವನ್ನು ಈ ಉದ್ದೇಶಕ್ಕೆ ನೀಡಲು ಒಪ್ಪಿಗೆ ಸಿಕ್ಕಿದೆ’ ಎಂದರು.

‘ಸಂಚಾರ ದಟ್ಟಣೆ ತಗ್ಗಬೇಕಾದರೆ ಜನರು ಸಂಚಾರ ನಿಯಮ ಉಲ್ಲಂಘಿಸುವ ಸಂಸ್ಕೃತಿಯ ಬದಲಿಗೆ ನಿಯಮ ಪಾಲಿಸುವುದನ್ನು ರೂಢಿಸಿಕೊಳ್ಳಬೇಕು. ಒಂದು ವರ್ಷದೊಳಗೆ ಉದ್ದೇಶಿತ ಎಲ್ಲ ಯೋಜನೆಗಳು ಪೂರ್ಣಗೊಂಡರೆ, ಸಂಚಾರ ದಟ್ಟಣೆ ನಿಯಂತ್ರಣದಲ್ಲಿ ಬೆಂಗಳೂರು ದೇಶಕ್ಕೆ ಮಾದರಿಯಾಗಲಿದೆ’ ಎಂದರು.

ಉಪಮುಖ್ಯಮಂತ್ರಿ ಸಿ.ಎನ್.ಅಶ್ವತ್ಥನಾರಾಯಣ,‘ನಗರದಲ್ಲಿ ಶೇ 50ರಷ್ಟು ಮಂದಿ ಸರ್ಕಾರಿ ಸಾರಿಗೆ ಬಳಸುತ್ತಾರೆ. ಬಸ್‌ ನಿಲ್ದಾಣಗಳಿಗೆ ತಲುಪಲು ಸಮಸ್ಯೆಯಾಗಿರುವ ಪಾದಚಾರಿ ಮಾರ್ಗಗಳನ್ನು ಅಭಿವೃದ್ಧಿಪಡಿಸಬೇಕು.ಶಾಲಾ-ಕಾಲೇಜುಗಳಲ್ಲಿ ಪಠ್ಯದೊಂದಿಗೆ ಸಂಚಾರ ನಿಯಮಗಳನ್ನು ಬೋಧಿಸಿದರೆ, ವಿದ್ಯಾರ್ಥಿಗಳಿಗೆ ಮಾಹಿತಿ ಪರಿಣಾಮಕಾರಿಯಾಗಿ ತಲುಪುತ್ತದೆ’ ಎಂದರು.

ಜಂಟಿ ಪೊಲೀಸ್ ಕಮಿಷನರ್ (ಸಂಚಾರ) ಬಿ.ಆರ್.ರವಿಕಾಂತೇಗೌಡ, ‘ದೇಶದಲ್ಲಿ ಪ್ರತಿ ನಾಲ್ಕು ನಿಮಿಷಕ್ಕೆ ಒಬ್ಬರು ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇವರಲ್ಲಿ ಯುವಕರ ಪಾಲು ಹೆಚ್ಚು. ಈ ಕುರಿತು ಬೀದಿ ನಾಟಕ, ಕಾಲೇಜುಗಳಲ್ಲಿ ಆನ್‌ಲೈನ್‌ ತರಗತಿಗಳು ಹಾಗೂ ಚಲನಚಿತ್ರದ ಮೂಲಕ ಯುವಜನರಿಗೆ ಜನಜಾಗೃತಿ ಮೂಡಿಸಲಾಗುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.