ADVERTISEMENT

ಕೆಲಸ ತಡವಾದರೆ ಜಂಟಿ ಆಯುಕ್ತರೇ ಹೊಣೆ: ಜಿ.ಪರಮೇಶ್ವರ್ ಎಚ್ಚರಿಕೆ

ಬಿಬಿಎಂಪಿ ದಾಸರಹಳ್ಳಿ ವಲಯ ಕಚೇರಿಗೆ ಭೇಟಿ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2018, 20:11 IST
Last Updated 31 ಆಗಸ್ಟ್ 2018, 20:11 IST
ದಾಸರಹಳ್ಳಿ ಬಿಬಿಎಂಪಿ ವಲಯ ಕಚೇರಿಗೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ದಿಢೀರ್‌ ಭೇಟಿ ನೀಡಿ ಕಡತ ಪರಿಶೀಲಿಸಿದರು
ದಾಸರಹಳ್ಳಿ ಬಿಬಿಎಂಪಿ ವಲಯ ಕಚೇರಿಗೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ದಿಢೀರ್‌ ಭೇಟಿ ನೀಡಿ ಕಡತ ಪರಿಶೀಲಿಸಿದರು   

ಬೆಂಗಳೂರು: 'ಬಿಬಿಎಂಪಿಯ ವಲಯ ಕಚೇರಿಗಳಲ್ಲಿ ಯಾವುದೇ ಕೆಲಸ ತಡವಾದರೆ ಅದಕ್ಕೆ ಆಯಾ ವಲಯದ ಜಂಟಿ ಆಯುಕ್ತರನ್ನೇ ಹೊಣೆ ಮಾಡಲಾಗುವುದು' ಎಂದುಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಾ.ಜಿ.ಪರಮೇಶ್ವರ್ ಶುಕ್ರವಾರ ಹೇಳಿದರು.

ದಾಸರಹಳ್ಳಿ ಬಿಬಿಎಂಪಿ ವಲಯ ಕಚೇರಿಗೆ ದಿಢೀರ್‌ ಭೇಟಿ ನೀಡಿ ಕಾರ್ಯವೈಖರಿ ಪರಿಶೀಲಿಸಿ ಅವರು ಮಾತನಾಡಿದರು.

‘ಬಿಬಿಎಂಪಿ ಆಡಳಿತ ಸುಗಮವಾಗಲು 8 ವಲಯ ಮಾಡಲಾಗಿದೆ. ಯಾವುದೇ ಕೆಲಸ ವಿಳಂಬವಾಗಬಾರದು. ಒಂದು ವೇಳೆ ಕಾನೂನಾತ್ಮಕ ತೊಡಕು ಇದ್ದರೆ ಅದನ್ನು ಆಯುಕ್ತರ ಗಮನಕ್ಕೆ ತರಬೇಕು. ಈ ವಲಯದಲ್ಲಿ ಆಡಳಿತ ವೈಖರಿ ಇನ್ನಷ್ಟು ಚುರುಕುಗೊಳ್ಳಬೇಕು. ಮೂರು ವರ್ಷದಿಂದ ಸಾಕಷ್ಟು ಕಾಮಗಾರಿ ಬಾಕಿ ಇದೆ. ಕಾಲಮಿತಿಯೊಳಗೆ ಕಾಮಗಾರಿ ಮುಗಿಸಬೇಕು ಎಂದು ಸೂಚನೆ ನೀಡಿದ್ದೇನೆ’ ಎಂದು ಹೇಳಿದರು.

ADVERTISEMENT

'ಕಚೇರಿಯಲ್ಲಿ ಬಯೋಮೆಟ್ರಿಕ್‌ ಹಾಜರಾತಿ ವ್ಯವಸ್ಥೆ ಅಳವಡಿಸದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಬೇರೆ ಇಲಾಖೆಯಿಂದ ಎರವಲು ಸೇವೆ ಪಡೆದ ಸಿಬ್ಬಂದಿಯನ್ನು ಅವರ ಮೂಲ ಇಲಾಖೆಗೆ ಕಳುಹಿಸಬೇಕು. ಹೊಸಬರಿಗೆ ಅವಕಾಶ ಮಾಡಿಕೊಡಬೇಕು' ಎಂದು ಅವರು ಹೇಳಿದರು.

ಜಂಟಿ ಆಯುಕ್ತರು, ಕೆಲ ಸಿಬ್ಬಂದಿ ಕಚೇರಿಯಲ್ಲಿ ಇಲ್ಲದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಅವರು ಜಂಟಿ ಆಯುಕ್ತರಿಗೆ ಕರೆಮಾಡಿ ಕರೆಸಿಕೊಂಡರು. ಉಳಿದ ಸಿಬ್ಬಂದಿಯೂ ಕಚೇರಿಗೆ ದೌಡಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.