ADVERTISEMENT

ಬಿಬಿಎಂಪಿ: ರಸ್ತೆ ಮೂಲಸೌಕರ್ಯ ವಿಭಾಗದ ಕಾರ್ಯವೈಖರಿಗೆ ಆಡಳಿತಾಧಿಕಾರಿ ಅಸಮಾಧಾನ

ರಸ್ತೆ, ಪಾದಚಾರಿ ಮಾರ್ಗ ಕಳಪೆ ನಿರ್ವಹಣೆ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2020, 14:16 IST
Last Updated 30 ಸೆಪ್ಟೆಂಬರ್ 2020, 14:16 IST
ಸಭೆಯಲ್ಲಿ ಗೌರವ್‌ ಗುಪ್ತ ಮಾತನಾಡಿದರು
ಸಭೆಯಲ್ಲಿ ಗೌರವ್‌ ಗುಪ್ತ ಮಾತನಾಡಿದರು   

ಬೆಂಗಳೂರು: ಬಿಬಿಎಂಪಿಯ ರಸ್ತೆ ಮೂಲಸೌಕರ್ಯ ವಿಭಾಗವು ರಸ್ತೆ ಗುಂಡಿಗಳ ದುರಸ್ತಿ, ರಸ್ತೆ ಬದಿಯಲ್ಲಿ ಶೇಖರಣೆಗೊಂಡಿರುವ ಕಟ್ಟಡ ತ್ಯಾಜ್ಯ ತೆರವು, ಪಾದಚಾರಿ ಮಾರ್ಗಗಳ ನಿರ್ವಹಣೆಯನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ ಎಂದು ಆಡಳಿತಾಧಿಕಾರಿ ಗೌರವ ಗುಪ್ತ ಅಸಮಾಧಾನ ವ್ಯಕ್ತಪಡಿಸಿದರು.

ರಸ್ತೆ ಮೂಲಭೂತ ಸೌಕರ್ಯ ವಿಭಾಗವು ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆಗಾಗಿ ಅವರು ಬುಧವಾರ ಅಧಿಕಾರಿಗಳ ಸಭೆ ನಡೆಸಿದರು.

‘ಸರ್ಜಾಪುರ ಹೈಡೆನ್ಸಿಟಿ ಕಾರಿಡಾರ್ ನಿರ್ವಹಣೆಯೂ ಸರಿಯಾಗಿ ಆಗುತ್ತಿಲ್ಲ. ಜಕ್ಕಸಂದ್ರ ಬಳಿ ರಸ್ತೆಯು ತೀವ್ರವಾಗಿ ಹದಗೆಟ್ಟಿದೆ. ವಾಹನಗಳ ಸುಗಮ ವಾಹನ ಸಂಚಾರಕ್ಕೆ ಕಷ್ಟವಾಗಿದೆ’ ಎಂದರು.

ADVERTISEMENT

‘ಸರ್ಜಾಪುರ ರಸ್ತೆಯ ದುರಸ್ತಿಗೆ ಶೀಘ್ರವೇ ಕ್ರಮಕೈಗೊಳ್ಳುತ್ತೇವೆ. ಹೈಡೆನ್ಸಿಟಿ ಕಾರಿಡಾರ್‌ಗಳಾದ ಹಳೆ ವಿಮಾನ ನಿಲ್ದಾಣ ರಸ್ತೆ, ಹಳೆ ಮದ್ರಾಸ್‌ ರಸ್ತೆ ಮತ್ತು ಹೊರವರ್ತುಲ ರಸ್ತೆಗಳಲ್ಲಿ ಪಾಲಿಕೆಯ ಯೋಜನಾ ವಿಭಾಗವು ಸಿಗ್ನಲ್ ಮುಕ್ತ ಕಾರಿಡಾರ್ ಹಾಗೂ ವೈಟ್ ಟಾಪಿಂಗ್ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದೆ’ ಎಂದು ರಸ್ತೆ ಮೂಲಸೌಕರ್ಯ ವಿಭಾಗದ ಅಧಿಕಾರಿಗಳು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಗೌರವ ಗುಪ್ತ, ‘ಸಬೂಬು ಹೇಳಬೇಡಿ, ಪ್ರತಿ ವಲಯದ ಎಲ್ಲಾ ಮುಖ್ಯರಸ್ತೆಗಳು ಮತ್ತು ಉಪಮುಖ್ಯರಸ್ತೆಗಳಲ್ಲಿ ಯೋಜನಾ ವಿಭಾಗದಿಂದ ಹಾಗೂರಸ್ತೆ ಮೂಲಭೂತಸೌಕರ್ಯ ವಿಭಾಗದಿಂದ ಕೈಗೊಂಡ ಕಾಮಗಾರಿಗಳನ್ನು ಪ್ರತ್ಯೇಕ ಬಣ್ಣದಲ್ಲಿ ಗುರುತಿಸಿ, ನಕ್ಷೆ ತಯಾರಿಸಿ ಸಲ್ಲಿಸಿ’ ಎಂದು ಸೂಚಿಸಿದರು.

‘ಮುಖ್ಯ ರಸ್ತೆ ಮತ್ತು ಉಪಮುಖ್ಯರಸ್ತೆಗಳ ನಿರ್ವಹಣೆಯ ಹೊಣೆ ರಸ್ತೆ ಮೂಲಭೂತಸೌಕರ್ಯ ವಿಭಾಗದ್ದು. ವಾಹನಗಳಸುಗಮ ಸಂಚಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವುದು ನಿಮ್ಮ ಹೊಣೆ’ ಎಂದು ಸ್ಪಷ್ಟಪಡಿಸಿದರು.

ರಸ್ತೆ ಅಭಿವೃದ್ಧಿ– ಇತಿಹಾಸ ಸಿದ್ಧಪಡಿಸಿ:‘ಮುಖ್ಯ ರಸ್ತೆಗಳು ಮತ್ತು ಉಪಮುಖ್ಯರಸ್ತೆಗಳಲ್ಲಿ 10 ವರ್ಷಗಳಲ್ಲಿ ಯಾವೆಲ್ಲ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ, ಅವುಗಳ ಉದ್ದ, ನಿರ್ವಹಣೆ ಅವಧಿ, ಹದಗೆಟ್ಟರೆ ಅದನ್ನು ಗುತ್ತಿಗೆದರರೇ ದುರಸ್ತಿಪಡಿಸಬೇಕಾದ ಅವಧಿ ಕುರಿತು ಮಾಹಿತಿ ನೀಡಬೇಕು. ಈ ರಸ್ತೆ ಇತಿಹಾಸವನ್ನು ಸಿದ್ದಪಡಿಸಬೇಕಿದ್ದು, ಕೂಡಲೇ ಎಲ್ಲಾ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳ ಇತಿಹಾಸದ ವಿವರಗಳನ್ನು ನಮೂದಿಸಿ ಮಾಹಿತಿಯನ್ನು ಒದಗಿಸಬೇಕು’ ಎಂದು ಆಡಳಿತಾಧಿಕಾರಿ ಸೂಚಿಸಿದರು.

ಸಮನ್ವಯ ಸಾಧಿಸಿ: 2016-17 ಮತ್ತು 2017-18ನೇ ಸಾಲಿನ ನಗರೋತ್ಥಾನ ಕಾಮಗಾರಿಗಳು ಮತ್ತು 2018-19ನೇ ಸಾಲಿನಲ್ಲಿ ನವ ನಗರೋತ್ಥಾನ ಕಾಮಗಾರಿಗಳ ವಿಳಂಬಕ್ಕೆ ಆಸ್ಪದ ನೀಡಬಾರದು. ಭೂಸ್ವಾಧೀನ, ಮರಗಳ ಸ್ಥಳಾಂತರ, ಬೆಸ್ಕಾಂ, ಜಲಮಂಡಳಿಯ ಮೂಲಸೌಕರ್ಯಗಳ ಸ್ಥಳಾಂತರ ವಿಳಂಬದಿಂದ ನಗರದ ಪ್ರಮುಖ ರಸ್ತೆಗಳ ವಿಸ್ತರಣೆ, ಗ್ರೇಡ್ ಸೆಪರೇಟರ್ ನಿರ್ಮಾಣ, ರೈಲ್ವೆ ಮೇಲ್ಸೇತುವೆ ಮತ್ತು ಕೆಳಸೇತುವೆ ಕಾಮಗಾರಿಗಳೂ ತಡವಾಗುತ್ತಿವೆ. ಈ ಇಲಾಖೆಯೊಡನೆ ಸಮನ್ವಯ ಸಭೆ ನಡೆಸಿ ಗಡುವಿನೊಳಗೆ ಕಾಮಗಾರಿಗಳು ಪೂರ್ಣಗೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ರಸ್ತೆ ಮೂಲಭೂತ ಸೌಕರ್ಯ ವಿಭಾಗವು 12 ಹೈಡೆನ್ಸಿಟಿ ಕಾರಿಡಾರ್‌ಗಳು, ಮುಖ್ಯರಸ್ತೆಗಳು ಹಾಗೂ ಉಪಮುಖ್ಯ ರಸ್ತೆಗಳು ಸೇರಿ ಒಟ್ಟು 1,323 ಕಿ.ಮೀ ಉದ್ದದ ರಸ್ತೆಗಳ ನಿರ್ವಹಣೆಯ ಉಸ್ತುವಾರಿ ನೋಡಿಕೊಳ್ಳುತ್ತಿದೆ.

ವಿಶೇಷ ಆಯುಕ್ತರು (ಯೋಜನೆ) ಮನೋಜ್ ಜೈನ್, ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಎಂ.ಆರ್.ವೆಂಕಟೇಶ್, ರಸ್ತೆ ಮೂಲಭೂತ ಸೌಕರ್ಯ ವಿಭಾಗದ ಮುಖ್ಯ ಎಂಜಿನಿಯರ್‌ ಪ್ರಹ್ಲಾದ್ ಸೇರಿದಂತೆ ಈ ವಿಭಾಗದ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.