ADVERTISEMENT

ಬಿಬಿಎಂಪಿ: ಏಪ್ರಿಲ್‌ನಲ್ಲಿ ₹1 ಸಾವಿರ ಕೋಟಿ ಆಸ್ತಿ ತೆರಿಗೆ ಸಂಗ್ರಹ

ತ್ಯಾಜ್ಯ ನಿರ್ವಹಣಾ ಬಳಕೆದಾರರ ಶುಲ್ಕದಿಂದ ಮೊತ್ತ ಹೆಚ್ಚಳ

ಆರ್. ಮಂಜುನಾಥ್
Published 1 ಮೇ 2025, 0:26 IST
Last Updated 1 ಮೇ 2025, 0:26 IST
<div class="paragraphs"><p>ಬಿಬಿಎಂಪಿ</p></div>

ಬಿಬಿಎಂಪಿ

   

ಬೆಂಗಳೂರು: ಬಿಬಿಎಂಪಿಯ ಆಸ್ತಿ ತೆರಿಗೆ ಸಂಗ್ರಹದಲ್ಲಿ ದಾಖಲೆ ಸೃಷ್ಟಿಯಾಗಿದ್ದು, 2025–26ನೇ ಆರ್ಥಿಕ ವರ್ಷದ ಮೊದಲ ತಿಂಗಳಲ್ಲೇ ₹1 ಸಾವಿರ ಕೋಟಿಗೂ ಹೆಚ್ಚು ತೆರಿಗೆ ಸಂಗ್ರಹವಾಗಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಏಪ್ರಿಲ್‌ನಲ್ಲಿ ತ್ಯಾಜ್ಯ ನಿರ್ವಹಣಾ ಬಳಕೆದಾರರ ಶುಲ್ಕ ಜಾರಿ ಮಾಡಲಾಗಿದೆ. ಆಸ್ತಿ ತೆರಿಗೆಯಲ್ಲಿಯೇ ಈ ಶುಲ್ಕವನ್ನು ಸೇರಿಸಿರುವುದು ತೆರಿಗೆ ಸಂಗ್ರಹ ಹೆಚ್ಚಾಗಲು ಕಾರಣವಾಗಿದೆ. ಜೊತೆಗೆ, ಏಪ್ರಿಲ್‌ನಲ್ಲಿ ಪೂರ್ಣ ತೆರಿಗೆ ಪಾವತಿಸಿದವರಿಗೆ ಶೇ 5ರಷ್ಟು ರಿಯಾಯಿತಿ ಇತ್ತು. ಅದನ್ನು ಆಸ್ತಿ ಮಾಲೀಕರು ಸದುಪಯೋಗ ಪಡಿಸಿಕೊಂಡಿದ್ದಾರೆ. ಈ ರಿಯಾಯಿತಿ ಮೇ ಅಂತ್ಯದವರೆಗೂ ವಿಸ್ತರಣೆಯಾಗಿದ್ದು, ಸಂಗ್ರಹ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ADVERTISEMENT

2024–25ನೇ ಸಾಲಿನ ಏಪ್ರಿಲ್‌ 27ರವರೆಗೆ ₹670.38 ಕೋಟಿ ಆಸ್ತಿ ತೆರಿಗೆ ಸಂಗ್ರಹವಾಗಿತ್ತು. 2025–26ನೇ ಸಾಲಿನಲ್ಲಿ ಏಪ್ರಿಲ್‌ 27ರವರೆಗೆ ಶೇ 40.03ರಷ್ಟು ಹೆಚ್ಚಳವಾಗಿದ್ದು, ₹938.72 ಕೋಟಿ ಸಂಗ್ರಹವಾಗಿದೆ. ಏಪ್ರಿಲ್‌ 28ರಿಂದ 30ರವರೆಗೆ ಸುಮಾರು ₹200 ಕೋಟಿಗೂ ಹೆಚ್ಚು ತೆರಿಗೆ ಸಂಗ್ರಹವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸುಮಾರು ₹5 ಲಕ್ಷ ಆಸ್ತಿಗಳಿಂದ ಏಪ್ರಿಲ್‌ 30ರವರೆಗೆ ಅಂದಾಜು ₹1200 ಕೋಟಿ ಸಂಗ್ರಹಿಸಲಾಗಿದ್ದು ನಿಖರ ಅಂಕಿ–ಅಂಶ ಶನಿವಾರ ಲಭ್ಯವಾಗಲಿದೆ.
ಮುನೀಶ್‌ ಮೌದ್ಗಿಲ್‌, ಕಂದಾಯ ವಿಭಾಗದ ವಿಶೇಷ ಆಯುಕ್ತ ಬಿಬಿಎಂಪಿ

ದಕ್ಷಿಣ ಹಾಗೂ ಮಹದೇವಪುರ ವಲಯಗಳು ಒಟ್ಟು ಆಸ್ತಿ ತೆರಿಗೆ ಸಂಗ್ರಹದಲ್ಲಿ ಮುಂಚೂಣಿಯಲ್ಲಿದ್ದು, ದಾಸರಹಳ್ಳಿ, ಆರ್.ಆರ್‌. ನಗರ, ಯಲಹಂಕ ವಲಯಗಳು ಹಿಂದೆ ಉಳಿದಿವೆ. ಶೇಕಡಾವಾರು ಹೆಚ್ಚು ಸಂಗ್ರಹದಲ್ಲಿ ಯಲಹಂಕ ಹಾಗೂ ಆರ್.ಆರ್‌. ನಗರ ವಲಯಗಳು ಮುಂದಿವೆ.

2025ರ ಏಪ್ರಿಲ್‌ 1ರಂತೆ 3,75,446 ಸುಸ್ತಿದಾರರು ₹836.34 ಕೋಟಿಯನ್ನು ಬಾಕಿ ಉಳಿಸಿಕೊಂಡಿದ್ದಾರೆ. ಇದರಲ್ಲಿ ಏಪ್ರಿಲ್‌ನಲ್ಲಿ ₹18.31 ಕೋಟಿಯನ್ನು 18,425 ಆಸ್ತಿಗಳಿಂದ ಸಂಗ್ರಹಿಸಲಾಗಿದೆ. 10,133 ಸುಸ್ತಿದಾರರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. 83,039 ವಾಣಿಜ್ಯ ಆಸ್ತಿಗಳಿಗೆ ಬೀಗಮುದ್ರೆ ಹಾಕಲಾಗಿದೆ. 

ಏಪ್ರಿಲ್‌ 1ರಂತೆ 9,896 ಆಸ್ತಿಗಳಿಗೆ ತೆರಿಗೆಯನ್ನು ಪರಿಷ್ಕರಿಸಲಾಗಿದ್ದು, ₹151.45 ಕೋಟಿ ಸಂಗ್ರಹವಾಗಬೇಕಿದೆ. 259 ಆಸ್ತಿಗಳಿಂದ ₹5.06 ಕೋಟಿ ಸಂಗ್ರಹವಾಗಿದ್ದು, ಏಪ್ರಿಲ್‌ ಅಂತ್ಯಕ್ಕೆ 9,904 ಆಸ್ತಿಗಳಿಂದ ₹152.80 ಕೋಟಿ ಸಂಗ್ರಹವಾಗಬೇಕಿದೆ. ಇದರಲ್ಲಿ 95 ಆಸ್ತಿಗಳಿಂದ ₹5.21 ಕೋಟಿ ಸಂಗ್ರಹವಾಗಿದೆ.

ಈವರೆಗೆ ತೆರಿಗೆ ಪಾವತಿಸದ 1,015 ಆಸ್ತಿಗಳನ್ನು ಗುರುತಿಸಲಾಗಿದ್ದು, ಇವುಗಳಿಂದ ₹1.39 ಕೋಟಿ ತೆರಿಗೆ ಸಂಗ್ರಹಿಸುವ ಗುರಿಯನ್ನು ಬಿಬಿಎಂಪಿ ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.